
ಚಿಕ್ಕಬಳ್ಳಾಪುರ: ಪ್ರಕೃತಿಯಲ್ಲಿ ಒಂದು ಸಿಂಹ ಮತ್ತೊಂದು ಸಿಂಹವನ್ನು ಅಥವಾ ಚಿರತೆ ಮತ್ತೊಂದು ಚಿರತೆಯನ್ನು ಕೊಲ್ಲುವುದಿಲ್ಲ. ಆದರೆ, ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಕೊಲ್ಲುತ್ತಾನೆ. ಅಷ್ಟೇ ಏಕೆ ದೇಶಗಳನ್ನೇ ನಾಶ ಮಾಡುವ ಆಲೋಚನೆ ಮಾಡುತ್ತಾನೆ ಎಂದು ವೈದ್ಯ ಡಾ. ಅನಿಲ್ ಕುಮಾರ್ ತಿಳಿಸಿದರು.
ನಗರದ ಜಚನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ ಧನಪಾಲ ನಾಗರಾಜಪ್ಪ ಅವರು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿರುವ ‘ಅವಳಿಗೆ ಹೇಳಿ’ ಕವನ ಸಂಕಲನ ಮತ್ತು ‘ಮಾತಾಡುವ ದೇವರು’ ಕಥಾ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಡೀ ಮನುಷ್ಯ ಕುಲವನ್ನೇ ನಾಶ ಮಾಡುವ ಆಲೋಚನೆ ಮನುಷ್ಯನಲ್ಲಿ ಬರುತ್ತಿದೆ. ಶಿಕ್ಷಣವೂ ಕೂಡ ಈಗ ಬಂಡವಾಳಶಾಹಿಗಳ ಹಿಡಿತದಲ್ಲಿದೆ. ಅವರು ತಮಗೆ ಹೇಗೆ ಬೇಕೊ ಆ ರೀತಿಯಲ್ಲಿ ಶಿಕ್ಷಣ ವ್ಯವಸ್ಥೆ ರೂಪಿಸುವರು. ಮನುಷ್ಯನಿಗೆ ವಿಚಾರಗಳನ್ನು ಮುಟ್ಟಿಸುವ ವ್ಯವಸ್ಥೆಯನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬಂಡವಾಳಶಾಹಿಗಳು ರೂಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಮನುಷ್ಯ ಒಂದೇ ಸಮಯದಲ್ಲಿ ಸಂಘ ಜೀವನ ಮತ್ತು ವೈಯಕ್ತಿಕ ಜೀವನ ನಡೆಸುತ್ತಾನೆ ಎಂದು ಐನ್ ಸ್ಟೈನ್ ಹೇಳುತ್ತಾರೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಯಾರು ಮೊದಲು ರ‍್ಯಾಂಕ್ ಪಡೆಯುತ್ತಾರೊ, ಯಾರು ಮೊದಲಿಗರು ಎನಿಸಿಕೊಳ್ಳುತ್ತಾರೊ ಅವರ ವೈಯಕ್ತಿಕ ಸಾಧನೆಯನ್ನೇ ವಿಜೃಂಭಿಸಲಾಗುತ್ತದೆ. ಶಾಲೆಗಳಲ್ಲಿ ಸಂಘ ಜೀವನದ ಬಗ್ಗೆ ಹೆಚ್ಚು ತಿಳಿವಳಿಕೆ ಮೂಡಿಸಬೇಕು ಎಂದು ಐನ್ ಸ್ಟೈನ್ ಹೇಳುವರು ಎಂದರು.
ಇಂದಿಗೂ ಮಹಿಳೆಯರು, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು, ಬಲಹೀನರ ಮೇಲೆ ಶೋಷಣೆಗಳು ನಿಂತಿಲ್ಲ. ಆದ್ದರಿಂದ ಉತ್ಪಾದನೆ ವ್ಯವಸ್ಥೆ ಬದಲಾವಣೆ ಆಗಬೇಕು ಎಂದು ಹೇಳಿದರು.
ಭೂಮಿ, ನೈಸರ್ಗಿಕ ಬಂಡವಾಳ ಮತ್ತು ಬಂಡವಾಳ ಈ ಬದಲಾವಣೆಯ ಮುಖ್ಯ ಸಾಧನಗಳು. ಚಿಕ್ಕಬಳ್ಳಾಪುರ ಭಾಗದಲ್ಲಿ ರೈತರ ಭೂಮಿಯನ್ನು ಸರ್ಕಾರ ಕಿತ್ತುಕೊಂಡು ಬಂಡವಾಳಶಾಹಿಗಳಿಗೆ ಕೊಡುತ್ತಿದೆ. ನೈಸರ್ಗಿಕ ಸಂಪತ್ತು ಎನಿಸಿದ್ದ ಬಂಡೆಗಳನ್ನು ಅವಲಂಬಿಸಿ ಸಮುದಾಯವೊಂದು ಜೀವನ ನಡೆಸುತ್ತಿತ್ತು. ಆದರೆ ಈಗ ಈ ಬಂಡೆಗಳೂ ಬಂಡವಾಳಶಾಹಿಗಳ ಪಾಲಾಗಿವೆ ಎಂದು ಹೇಳಿದರು.
ಕುವೆಂಪು ರಚನೆಯ ಗೀತೆಗಳು ಮತ್ತು ವಿಚಾರಗಳನ್ನು ಮುಂದಿನ ದಿನಗಳಲ್ಲಿ ಪಠ್ಯಗಳಿಂದ ಹೊರಗಿಡುವ ಕೆಲಸವೂ ನಡೆಯುತ್ತದೆ. ಆಗ ಶಿಕ್ಷಕರ ಮೇಲೆ ಹೆಚ್ಚು ಜವಾಬ್ದಾರಿ ಇರುತ್ತದೆ. ಬೇರೊಬ್ಬ ಮನುಷ್ಯನನ್ನು ಸಮಾನವಾಗಿ ನೋಡುವ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಾಹಿತಿಗಳಾದ ರಂಗಮ್ಮ ಹೊದೇಕಲ್, ಗೀತಾ ಲಕ್ಷ್ಮಿ, ಆಶಾ ಜಗದೀಶ್ ಪುಸ್ತಕದ ಕುರಿತು ಮಾತನಾಡಿದರು. ಬಸವರಾಜ ಪಾಟೀಲ್, ಬಸವರಾಜ ಬಿ.ಎನ್., ಎಂ.ನಾಗರಾಜ್ ಕವನ ವಾಚಿಸಿದರು.
ಲೇಖಕರಾದ ಧನಪಾಲ ನಾಗರಾಜಪ್ಪ, ಕಲಾಧರ್ ಎಸ್., ಜಮಖಂಡಿ ಸಾರಂಗಶಾಖಾ ಮಠದ ಆಡಳಿತಾಧಿಕಾರಿ ಸುನಂದಮ್ಮ ಅಧ್ಯಕ್ಷತೆವಹಿಸಿದ್ದರು. ನಿಡುಮಾಮಿಡಿ ಮಠದ ಆಡಳಿತಾಧಿಕಾರಿ ಶಿವಜ್ಯೋತಿ, ಸಿದ್ದರಾಮಯ್ಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ರಮ್ಯ ವೇದಿಕೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.