ADVERTISEMENT

ಚಿಕ್ಕಬಳ್ಳಾಪುರ: ಚರಂಡಿ ಗ್ರಹಣಕ್ಕೆ ಸಿಗದ ಮುಕ್ತಿ

ವರ್ಷವಿಡೀ ಮಡುಗಟ್ಟಿ ನಿಲ್ಲುವ ಕಾಲುವೆಗಳು, ನಾಗರಿಕರ ಗೋಳಿಗೆ ಸಿಗದ ಶಾಶ್ವತ ಪರಿಹಾರ

ಈರಪ್ಪ ಹಳಕಟ್ಟಿ
Published 5 ಅಕ್ಟೋಬರ್ 2020, 3:46 IST
Last Updated 5 ಅಕ್ಟೋಬರ್ 2020, 3:46 IST
ನಗರದ ಎಂಟನೇ ವಾರ್ಡ್‌ನಲ್ಲಿ ಮಡುಗಟ್ಟಿ ನಿಂತ ಚರಂಡಿ
ನಗರದ ಎಂಟನೇ ವಾರ್ಡ್‌ನಲ್ಲಿ ಮಡುಗಟ್ಟಿ ನಿಂತ ಚರಂಡಿ   

ಚಿಕ್ಕಬಳ್ಳಾಪುರ: ಸದಾ ಮಡುಗಟ್ಟಿ ನಿಲ್ಲುವ ಚರಂಡಿಗಳು, ಸಂಜೆ ಹೊತ್ತಿಗೆ ದಾಳಿ ಇಡುವ ಸೊಳ್ಳೆಗಳು, ಬದಲಾಗದೆ ಉಳಿದ ಸಾಂಕ್ರಾಮಿಕ ರೋಗಗಳನ್ನು ಹರಡುವಂತಹ ವಾತಾವರಣ, ಹಿಡಿಶಾಪ ಹಾಕುವ ನಾಗರಿಕರು.

ನಗರದ ಜಿಲ್ಲಾ ಆಸ್ಪತ್ರೆ ಮುಂಭಾಗದ ಪ್ರದೇಶದಲ್ಲಿ ಸದಾ ಕಾಣುವ ದೃಶ್ಯವಿದು. ಇಲ್ಲಿ ಹದಗೆಟ್ಟ ಚರಂಡಿ ವ್ಯವಸ್ಥೆಯ ಬೆನ್ನು ಹತ್ತಿ ಒಂದು ಸುತ್ತು ಹಾಕಿದರೆ ಗಲ್ಲಿಗಲ್ಲಿಗಳ ಒಳಗೆ ವ್ಯಥೆ ತುಂಬಿದ ಕಷ್ಟದ ಕಥೆಗಳು ಕೇಳಲು ಸಿಗುತ್ತವೆ.

ಚಿಕ್ಕಬಳ್ಳಾಪುರ ನೂತನ ಜಿಲ್ಲೆಯಾಗಿ ದಶಕ ಕಳೆದಿದೆ. ಆದರೆ ಇಂದಿಗೂ ಜಿಲ್ಲಾ ಕೇಂದ್ರವಾದ ನಗರದ ಅನೇಕ ವಾರ್ಡ್‌ಗಳಲ್ಲಿ ಇದೇ ರೀತಿಯಲ್ಲಿ ಚರಂಡಿ ವ್ಯವಸ್ಥೆಯಿಂದ ನಾಗರಿಕರು ಅನುಭವಿಸುವ ಪಾಡಿಗೆ ಮರುಕ ಉಂಟಾಗುತ್ತದೆ.

ADVERTISEMENT

ಅವೈಜ್ಞಾನಿಕ ಕಾಮಗಾರಿ, ಸ್ವಚ್ಛತೆ ನಿರ್ವಹಣೆ ಕೊರತೆ, ಅಧಿಕಾರಿಗಳ ಅಸಡ್ಡೆ, ನಾಗರಿಕರ ಬೇಜವಾಬ್ದಾರಿತನ.. ಹೀಗೆ ಹತ್ತು ಹಲವು ಸಮಸ್ಯೆಗಳುಮೇಳೈಸಿ ದಶಕ ಪೂರೈಸಿದ ಜಿಲ್ಲಾ ಕೇಂದ್ರವನ್ನು ಅಂದಗಾಣಲು, ಶುಚಿಯಾಗಲು ಬಿಡುತ್ತಲೇ ಇಲ್ಲ. ಸದಾ ಹೂಳು, ಕೊಚ್ಚೆ ನೀರಿನಿಂದಲೇ ತುಂಬಿ ನಿಂತಿರುವ ಚರಂಡಿಗಳು ಸ್ವಲ್ಪ ಮಳೆ ಸುರಿದರೂ ಸ್ಥಳೀಯರನ್ನು ಗೋಳಾಡಿಸದೆ ಬಿಡುವುದಿಲ್ಲ. ಜೋರಾಗಿ ಮಳೆ ಸುರಿದಂತೂ ಕೆಲವೆಡೆ ಬಣ್ಣಿಸಲಾಗದಷ್ಟು ಕೆಟ್ಟ ಪರಿಸ್ಥಿತಿ. ಕೆಲವೆಡೆ ಸಾಂಕ್ರಾಮಿಕ ರೋಗ ಭೀತಿ ಕಾಯಂ ಅತಿಥಿ. ಹೀಗಾಗಿ, ಸೊಳ್ಳೆ ಕಾಟಕ್ಕೆ ಮನೆ ಕಿಟಕಿ, ಬಾಗಿಲು ತೆರೆಯಲು ಜನ ಅಂಜುವ ಸ್ಥಿತಿ.

ಮಳೆಗಾಲಕ್ಕೂ ಮುನ್ನ ನಗರದ ಚರಂಡಿ, ಕಾಲುವೆಗಳನ್ನು ಸ್ವಚ್ಛಗೊಳಿಸಿ, ಸುಸಜ್ಜಿತವಾಗಿಡುವ ಕೆಲಸವನ್ನು ನಗರಸಭೆ ಎಂದೋ ಮರೆತಾಗಿದೆ ಎನ್ನುವುದು ನಗರವಾಸಿಗಳ ದೂರು. ಇದರ ಪರಿಣಾಮ ಎನ್ನುವಂತೆ, ವರ್ಷದಿಂದ ವರ್ಷಕ್ಕೆ ನಗರದಲ್ಲಿ ಅನೇಕ ಕಡೆಗಳಲ್ಲಿ ಚರಂಡಿಗಳು ಹೂಳಿನಿಂದ ಮುಚ್ಚಿವೆ. ಜೋರಾಗಿ ಮಳೆ ಸುರಿದರೆ ಕ್ಷಣ ಮಾತ್ರದಲ್ಲಿ ಪ್ರವಾಹ ಸನ್ನಿವೇಶ ಸೃಷ್ಟಿಸುತ್ತವೆ. ತಗ್ಗು ಪ್ರದೇಶಗಳ ಜನರ ಪಾಡು ದೇವರಿಗೆ ಪ್ರೀತಿ!

ನಗರಸಭೆಯ ವ್ಯಾಪ್ತಿಯ 31 ವಾರ್ಡ್‌ಗಳ ಪೈಕಿ ಯಾವುದೇ ವಾರ್ಡ್‌ಗೆ ಹೋದರೂ ಸ್ವಚ್ಛವಾಗಿರುವ ಚರಂಡಿ ಕಾಣುವುದು ಅಪರೂಪ ಎನ್ನುವಂತಾಗಿದೆ. ನಗರಸಭೆಯ ನಿರ್ಲಕ್ಷ್ಯದಿಂದ ಚರಂಡಿಗಳು ಬಾಯಿ ಹೊಲಿದುಕೊಂಡು, ಸತ್ತು ಮಲಗಿದಂತಿವೆ. ಕಾಲ ಕಾಲಕ್ಕೆ ಹೂಳೆತ್ತಿ ಮಳೆ ನೀರಿಗೆ ಸರಾಗ ಹರಿವು ಕಲ್ಪಿಸಿಕೊಡಬೇಕಾದವರು ತಮ್ಮ ಕರ್ತವ್ಯ ಮರೆತಿದ್ದಾರೆ ಎನ್ನುವುದು ಸಾರ್ವಜನಿಕರ ಆಕ್ರೋಶಭರಿತ ಆರೋಪ.

ನಗರದಲ್ಲಿ ಪ್ರಮುಖವಾಗಿ 3ನೇ ವಾರ್ಡ್‌ (ದರ್ಗಾ ಮೊಹಲ್ಲಾ), 4ನೇ ವಾರ್ಡ್ (ಪ್ರಶಾಂತ್‌ ನಗರ, ಭಗತ್‌ ಸಿಂಗ್ ನಗರ), 5ನೇ ವಾರ್ಡ್‌ (ದಿನ್ನೆ ಹೊಸಹಳ್ಳಿ ರಸ್ತೆ), 8ನೇ ವಾರ್ಡ್‌ (ಜೈಭೀಮ್ ನಗರ, ಜಿಲ್ಲಾ ಆಸ್ಪತ್ರೆ ಮುಂಭಾಗದ ಪ್ರದೇಶ), 21ನೇ ವಾರ್ಡ್‌ (ನಕ್ಕಲಕುಂಟೆ) ಸೇರಿದಂತೆ ಹತ್ತಾರು ಕಡೆಗಳಲ್ಲಿ ಅಸ್ತವ್ಯಸ್ತ ಸ್ಥಿತಿಯಲ್ಲಿರುವುದು ಗೋಚರಿಸುತ್ತದೆ.

ನಗರದ ಎಂಟನೇ ವಾರ್ಡ್‌ನಲ್ಲಿ ಹೊಸ ಜಿಲ್ಲಾ ಆಸ್ಪತ್ರೆ ಮುಂದಿನ ಪ್ರದೇಶದಲ್ಲಿರುವ ಬಿರು ಬೇಸಿಗೆಯಲ್ಲೂ ತುಂಬಿ ನಿಂತ ಚರಂಡಿಗಳು ಗೋಚರಿಸುತ್ತವೆ. ವರ್ಷವಿಡೀ ಮಡುಗಟ್ಟಿದ ಸ್ಥಿತಿಯಲ್ಲೇ ಇರುವ ಅಧ್ವಾನಗೊಂಡ ಕಾಲುವೆಗಳಲ್ಲಿ ಸದಾ ದುರ್ವಾಸನೆ ಸೂಸುವ ರೊಚ್ಚು ನೀರು, ಹಿಂಡುಗಟ್ಟಿ ಬಂದು ಎಲ್ಲೆಂದರಲ್ಲಿ ಕಚ್ಚುವ ಸೊಳ್ಳೆಗಳ ಹಿಂಡು ಸ್ಥಳೀಯರಿಗೆ ಸಾಕು ಸಾಕು ಮಾಡಿ, ಜೀವ ಹಿಂಡುತ್ತಿವೆ.

ಇದೇ ಪ್ರದೇಶದಲ್ಲಿ ಕೆಲವೆಡೆ ನಗರೋತ್ಥಾನ ಯೋಜನೆ ಅಡಿ ಹೊಸ ಚರಂಡಿ ನಿರ್ಮಿಸಲಾಗುತ್ತದೆ ಎಂದುಹಳೇ ಚರಂಡಿಗಳನ್ನು ಕಿತ್ತು ಹಾಕಿದ್ದು ‘ಗಾಯದ ಮೇಲೆ ಬರೆ’ ಎಳೆದಂತಾಗಿ ಮತ್ತಷ್ಟು ಇಲ್ಲಿನ ಜನರಿಗೆ ಸಂಕಷ್ಟ ಹೆಚ್ಚಿಸಿದೆ. ಮಳೆ ಕಾಣಿಸಿಕೊಂಡರೆ ಈ ಇಲ್ಲಿನ ಜನರಿಗೆ ಮೈನಡುಕ ಹುಟ್ಟುತ್ತದೆ. ಪ್ರತಿ ಮಳೆಗಾಲದಲ್ಲಿ ಅನುಭವಿಸಬೇಕಾದ ನರಕಯಾತನೆಗೆ ಬೇಸತ್ತು ಅನೇಕರು ತಮ್ಮ ವಾಸವನ್ನು ಬೇರೆಡೆ ಸ್ಥಳಾಂತರಿಸಿದ ಸಾಕಷ್ಟು ಉದಾಹರಣೆಗಳು ಇಲ್ಲಿವೆ.

ಹದಗೆಟ್ಟ ಚರಂಡಿ, ಕಾಲುವೆಗಳಿಂದಾಗಿಯೇ ಇಂದಿಗೂ ದೊಡ್ಡ ಪ್ರಮಾಣದ ಮಳೆ ಸುರಿದರೆ ನಗರದ ಸುಮಾರು ಆರು ವಾರ್ಡ್‌ಗಳಲ್ಲಿ 200ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗುತ್ತದೆ. ಧೋ ಎಂದು ಸುರಿಯುವ ಮಳೆ ಹಿಡಿದರೆ ಕೆಲ ಪ್ರದೇಶಗಳಲ್ಲಿ ಜನ ಮನೆ ತಲುಪಲು ನಾನಾ ಬಗೆಯ ಸರ್ಕಸ್‌ ಮಾಡಬೇಕು.

ಗಮನಿಸಬೇಕಾದ ಅಂಶವೆಂದರೆ, ಮಳೆಯಿಂದ ತತ್ತರಿಸುವ ಪ್ರದೇಶಗಳಲ್ಲಿ ಕೆಳ ವರ್ಗದವರು, ದಲಿತರು, ಅಲ್ಪಸಂಖ್ಯಾತರು, ಬಡವರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಹೀಗಾಗಿ ಅವರು ಅವಡು ಕಚ್ಚಿ ಅಧಿಕಾರಿಗಳು, ಜನಪ್ರತಿನಿಧಿಗಳ ಅಸಡ್ಡೆಗೆ ತೋರಬೇಕಾದ ಆಕ್ರೋಶ ಹೊರಹಾಕುತ್ತಿಲ್ಲ. ಕಾಳಜಿ ತೋರಬೇಕಾದವರು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಪ್ರಜ್ಞಾವಂತರಲ್ಲಿ ಬೇಸರ ಮೂಡಿಸಿದೆ.

ಪರಿಸ್ಥಿತಿ ಬದಲಾಗಲೇ ಇಲ್ಲ

ಮೋರಿಗಳು ಪಾಚಿ ಕಟ್ಟುತ್ತಿವೆ. ಮಳೆ ಸುರಿದರೆ ಹುಳುಗಳು ರಸ್ತೆಗೆ ಹರಿದುಬರುತ್ತವೆ. ನಾವು ವಿಧಿ ಇಲ್ಲದೇ ಅದನ್ನೇ ದಾಟಿಕೊಂಡು ಓಡಾಡುತ್ತೇವೆ. ಚರಂಡಿ ಸ್ವಚ್ಛಗೊಳಿಸಲು ಹೇಳಿ ಸಾಕಾಯ್ತು. ಚರಂಡಿಯಲ್ಲಿರುವ ಮಣ್ಣು ಎತ್ತಿಸಿದರೆ ಸಾಕು, ನಮ್ಮ ಅರ್ಧ ಸಮಸ್ಯೆ ಬಗೆಹರಿಯುತ್ತದೆ. ಎಷ್ಟೊಂದು ಅಧಿಕಾರಿಗಳು ಪರಿಶೀಲಿಸಿ ಹೋದರೂ ನಮ್ಮ ಪರಿಸ್ಥಿತಿ ಮಾತ್ರ ಬದಲಾಗಿಲ್ಲ.

-ಪಿ.ಮಂಜುನಾಥ್‌, 8ನೇ ವಾರ್ಡ್‌ ನಿವಾಸಿ

ಅರಣ್ಯರೋದನ

ಚರಂಡಿಯಲ್ಲಿನ ಅನೈರ್ಮಲ್ಯದ ವಾತಾವರಣ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ನಮ್ಮ ವಾರ್ಡ್‌ನಲ್ಲಿ ಜನರು ಸದಾ ಕಾಯಿಲೆಗಳ ಭೀತಿಯಲ್ಲೇ ಬದುಕುವಂತಾಗಿದೆ. ಇಷ್ಟಾದರೂ ನಗರಸಭೆ ಎಚ್ಚೆತ್ತುಕೊಂಡಿಲ್ಲ. ಚರಂಡಿ ಸಮಸ್ಯೆಯನ್ನು ಬಗೆಹರಿಸುವಂತೆ ಪ್ರತಿಯೊಬ್ಬರಿಗೂ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ.

-ಶಹನಾಜ್, ದರ್ಗಾ ಮೊಹಲ್ಲಾ ನಿವಾಸಿ

ದೂರಿಗೆ ಬೆಲೆ ಇಲ್ಲ

ಅವೈಜ್ಞಾನಿಕವಾಗಿ ಚರಂಡಿಗಳ ನಿರ್ಮಾಣದಿಂದಾಗಿ ನಗರದ ಅನೇಕ ಪ್ರದೇಶಗಳ ನಾಗರಿಕರ ಬದುಕು ನೆಮ್ಮದಿ ಇಲ್ಲದಂತಾಗಿದೆ. ಈ ಬಗ್ಗೆ ಹತ್ತಾರು ಬಾರಿ ಲಿಖಿತ, ಮೌಖಿಕವಾಗಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಪರಿಸ್ಥಿತಿ ಬಿಗಡಾಯಿಸಿದಾಗ ತಾತ್ಕಾಲಿಕ ಕ್ರಮಕ್ಕೆ ಮುಂದಾಗುವ ನಗರಸಭೆ ಅಧಿಕಾರಿಗಳು ಈವರೆಗೆ ಚರಂಡಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ.

-ಎನ್.ಚಂದ್ರಶೇಖರ್, ಜಿ.ಎಸ್.ಆಸ್ಪತ್ರೆ ರಸ್ತೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.