ADVERTISEMENT

ಶೇ 80 ರಷ್ಟು ಚಾಲಕರಲ್ಲಿ ನಿರಾಶೆಯ ಛಾಯೆ

ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ₹5 ಸಾವಿರ ನೆರವು, ಸರ್ಕಾರ ವಿಧಿಸಿದ ಷರತ್ತುಗಳನ್ನು ಪೂರೈಸಲು ಪರದಾಟ

ಈರಪ್ಪ ಹಳಕಟ್ಟಿ
Published 29 ಮೇ 2020, 19:30 IST
Last Updated 29 ಮೇ 2020, 19:30 IST
ಚಿಕ್ಕಬಳ್ಳಾಪುರದಲ್ಲಿ ಪ್ರಯಾಣಿಕರಿಗಾಗಿ ಕಾಯ್ದು ನಿಂತ ಆಟೊ ಚಾಲಕರು
ಚಿಕ್ಕಬಳ್ಳಾಪುರದಲ್ಲಿ ಪ್ರಯಾಣಿಕರಿಗಾಗಿ ಕಾಯ್ದು ನಿಂತ ಆಟೊ ಚಾಲಕರು   

ಚಿಕ್ಕಬಳ್ಳಾಪುರ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ₹5 ಸಾವಿರ ನೆರವು ಪಡೆಯಲು ವಿಧಿಸಿರುವ ಷರತ್ತುಗಳು ಇದೀಗ ಚಾಲಕರ ಪಾಲಿಗೆ ಕಬ್ಬಿಣದ ಕಡಲೆಯಾಗಿವೆ. ಇದರಿಂದ ಶೇ 80 ರಷ್ಟು ಚಾಲಕರು ಪರಿಹಾರದ ಹಣದಿಂದ ವಂಚಿತರಾಗುವ ಭಯದಲ್ಲಿದ್ದಾರೆ.

ಸರ್ಕಾರದ ನೆರವು ಪಡೆಯಬೇಕಾದರೆ ಆಟೊ ಮತ್ತು ಟ್ಯಾಕ್ಸಿ ಚಾಲಕರು ಸೇವಾ ಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಿ, ಪೂರಕ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕಿದೆ. ಹೀಗೆ ಸಲ್ಲಿಕೆಯಾದ ಅರ್ಜಿಗಳಿಗೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ಅನುಮೋದನೆ ದೊರೆಯುತ್ತಿದ್ದಂತೆ ಸರ್ಕಾರ ಅರ್ಹ ಚಾಲಕರ ಬ್ಯಾಂಕ್‌ ಖಾತೆಗೆ ನೆರವಿನ ಹಣ ನೇರವಾಗಿ ಸಂದಾಯ ಮಾಡಲಿದೆ.

ಈ ನೆರವು ಪಡೆಯಬೇಕಾದರೆ ಚಾಲಕರು ಆಟೊ ಮತ್ತು ಟ್ಯಾಕ್ಸಿ ಚಾಲಕರು 2020ರ ಮಾರ್ಚ್‌ 24ರೊಳಗೆ ಚಾಲನಾ ಪರವಾನಗಿ ಹಾಗೂ ಬ್ಯಾಡ್ಜ್‌ ಹೊಂದಿರಬೇಕು. ವಾಹನಕ್ಕೆ ಸುಸ್ಥಿತಿ (ಫಿಟ್‌ನೆಸ್‌) ಪ್ರಮಾಣ ಪತ್ರ ಹೊಂದಿರಬೇಕು. ಹಳದಿ ಬೋರ್ಡ್‌ನ ಸ್ವಂತ ಆಟೊ ಅಥವಾ ಟ್ಯಾಕ್ಸಿ ಹೊಂದಿರಬೇಕು. ಅಂದರೆ ಮಾತ್ರ ಸರ್ಕಾರದ ಪರಿಹಾರ ಸಿಗಲಿದೆ.

ADVERTISEMENT

ಜಿಲ್ಲೆಯಲ್ಲಿ ಸುಮಾರು 6,000 ಆಟೊ ಚಾಲಕರು, 5,000 ಟ್ಯಾಕ್ಸಿ ಚಾಲಕರು ಇದ್ದಾರೆ. ಈ ಪೈಕಿ ಶೇ 20ರಷ್ಟು ಚಾಲಕರು ಮಾತ್ರ ತಾವು ಓಡಿಸುವ ಆಟೊ, ಟ್ಯಾಕ್ಸಿಗಳಿಗೆ ಮಾಲೀಕರಾಗಿದ್ದಾರೆ. ಇನ್ನುಳಿದಂತೆ ಶೇ 80 ರಷ್ಟು ಚಾಲಕರಿಗೆ ಸ್ವಂತ ವಾಹನಗಳಿಲ್ಲದೆ, ಹೊಟ್ಟೆಪಾಡಿಗಾಗಿ ಬಾಡಿಗೆ ವಾಹನಗಳನ್ನು ಓಡಿಸುತ್ತಿದ್ದಾರೆ.

ಚಾಲಕರಲ್ಲಿ ಅವಿದ್ಯಾವಂತರೇ ಹೆಚ್ಚಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ, ಬಹುತೇಕರ ಬಳಿ ಸರಿಯಾಗಿ ಚಾಲನಾ ಪರವಾನಗಿ, ಬ್ಯಾಡ್ಜ್‌, ವಾಹನ ಫಿಟ್‌ನೆಸ್‌ ಪ್ರಮಾಣ ಪತ್ರ ಇಲ್ಲ. ಹೀಗಾಗಿ, ಶೇ 80 ರಷ್ಟು ಚಾಲಕರು ಸರ್ಕಾರದ ಪರಿಹಾರ ಪಡೆಯುವ ಬಗ್ಗೆ ತಲೆ ಕೆಡಿಸಿಕೊಂಡು ಷರತ್ತುಗಳನ್ನು ಪೂರೈಸಲಾಗದೆ ಪರಿತಪಿಸುತ್ತಿದ್ದಾರೆ.

‘ನಮ್ಮ ಬಹುಪಾಲು ಚಾಲಕರಿಗೆ ಸರ್ಕಾರದ ಪರಿಹಾರ ಹಣ ಸಿಗುತ್ತಿಲ್ಲ. ಬಹಳ ಹಿಂದೆಲ್ಲ 7ನೇ ತರಗತಿ ಪಾಸಾದವರಿಗೆ ಮಾತ್ರ ಚಾಲನಾ ಪರವಾನಗಿ ಪತ್ರ ನೀಡುತ್ತಿದ್ದರು. ಜತೆಗೆ ಬ್ಯಾಡ್ಜ್‌ ಸಂಖ್ಯೆ ನೀಡುತ್ತಿದ್ದರು. ಕೆಲ ವರ್ಷಗಳ ಹಿಂದೆ 7ನೇ ತರಗತಿ ವಿದ್ಯಾರ್ಹತೆ ರದ್ಧುಪಡಿಸಿದ್ದಾರೆ. ಈ ಕಾರಣಕ್ಕೆ ಅನೇಕ ಅವಿದ್ಯಾವಂತ ಚಾಲಕರು ಪರವಾನಗಿ ಹೊಂದಿಲ್ಲ’ ಎಂದು ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಚಿಕ್ಕಬಳ್ಳಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಬಾಲಕೃಷ್ಣ ತಿಳಿಸಿದರು.

‘ಅನೇಕ ಚಾಲಕರ ಬಳಿ ಬಿಳಿ ಬೋರ್ಡ್ (ವೈಯಕ್ತಿಕ ಉಪಯೋಗಕ್ಕೆ ಬಳಸುವ ವಾಹನ) ವಾಹನಗಳ ಚಾಲನಾ ಪರವಾನಗಿ ಪತ್ರಗಳಿವೆ. ಇನ್ನು ಹಲವರ ಬಳಿ ಬ್ಯಾಡ್ಜ್, ಫಿಟ್‌ನೆಸ್‌ ಪ್ರಮಾಣಪತ್ರ ಇಲ್ಲ. ಹೀಗಾಗಿ, ಸಾಕಷ್ಟು ಸಂಖ್ಯೆಯ ಜನರು ಪರಿಹಾರದಿಂದ ವಂಚಿತರಾಗಲಿದ್ದಾರೆ‘ ಎಂದು ಹೇಳಿದರು.

‘ಸರ್ಕಾರ ಬಡ ಚಾಲಕರ ಹಿತ ಕಾಯುವ ಉದ್ದೇಶದಿಂದ ಷರತ್ತುಗಳನ್ನು ಸಡಿಲಗೊಳಿಸಬೇಕು. ಚಾಲನಾ ಪರವಾನಗಿ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್‌ ಖ್ಯಾತೆ ಹೊಂದಿರುವ ಎಲ್ಲ ಚಾಲಕರಿಗೂ ಪರಿಹಾರ ಹಣ ಪಾವತಿಸಬೇಕು ಎಂಬುದು ನಮ್ಮ ಬೇಡಿಕೆ’ ಎಂದರು.

‘ಟ್ಯಾಕ್ಸಿ ಓಡಿಸಿಕೊಂಡು ಹೊಟ್ಟೆ ಹೊರೆಯುತ್ತಿರುವೆ. ಆದರೂ, ಟ್ಯಾಕ್ಸಿ ಚಾಲಕರಿಗೆ ಘೋಷಿಸಿರುವ ಪರಿಹಾರ ನನಗೆ ಸಿಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನನ್ನ ಬಳಿ ಬ್ಯಾಡ್ಜ್‌ ಇದೆ. ಆದರೆ, ಹಳದಿ ಬೋರ್ಡ್‌ನ ಸ್ವಂತ ವಾಹನ ಇರಬೇಕಂತೆ. ಹೀಗಾಗಿ, ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿಕೊಂಡವನು ಅಧಿಕಾರಿಗಳ ಮಾತು ಕೇಳಿ, ಪರಿಹಾರದ ಆಸೆಯೇ ಕೈಬಿಟ್ಟೆ’ ಎಂದು ಟ್ಯಾಕ್ಸಿ ಚಾಲಕ ಲೋಕೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.