ADVERTISEMENT

4 ತಿಂಗಳಾದರೂ ಆರಂಭವಾಗದ ಕಾಮಗಾರಿ

ಜಗಜೀವನರಾಂ ಭವನಕ್ಕೆ ಭೂಮಿ ಪೂಜೆ: ದಸಂಸ ಮುಖಂಡರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 4:40 IST
Last Updated 19 ಆಗಸ್ಟ್ 2022, 4:40 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡ ಕೆ.ಸಿ.ರಾಜಾಕಾಂತ್ ಮಾತನಾಡಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡ ಕೆ.ಸಿ.ರಾಜಾಕಾಂತ್ ಮಾತನಾಡಿದರು   

ಚಿಕ್ಕಬಳ್ಳಾಪುರ: ಬಾಬೂ ಜಗಜೀವನರಾಂ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿ ನಾಲ್ಕು ತಿಂಗಳಾಗಿದೆ. ಆದರೆ ಇಲ್ಲಿಯವರೆಗೂ ಕಾಮಗಾರಿಯೇ ಆರಂಭವಾಗಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಕೆ.ಸಿ.ರಾಜಾಕಾಂತ್ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂಬೇಡ್ಕರ್ ಭವನ, ಬಾಬೂ ಜಗಜೀವನರಾಂ ಭವನ ನಿರ್ಮಾಣಕ್ಕೆ ಸಾಕಷ್ಟು ಹಣ ಬಂದಿದೆ. ನಮ್ಮ ಧರಣಿ ಮೊಟಕುಗೊಳಿಸಬೇಕು ಎನ್ನುವ ಉದ್ದೇಶದಿಂದ ಜಗಜೀವನರಾಂ ಜಯಂತಿಯ ಸಮಯದಲ್ಲಿ ಭವನಕ್ಕೆ ಏಕಾಏಕಿ ಭೂಮಿ ಪೂಜೆ ನೆರವೇರಿಸಿದರು’ ಎಂದರು.

‘ಭೂಮಿ ಪೂಜೆ ನೆರವೇರಿಸಿದ ಸಮಯದಲ್ಲಿ ಭವನ ನಿರ್ಮಾಣಕ್ಕೆ ಯಾವುದೇ ನೀಲನಕ್ಷೆ ಸಿದ್ಧವಾಗಿರಲಿಲ್ಲ. ಭೂಮಿ ನಿಗದಿ ಆಗಿರಲಿಲ್ಲ. ಆ ಸಂದರ್ಭದಲ್ಲಿ ಪ್ರತಿಭಟಿಸಿದ ದಲಿತ ಸಮುದಾಯದ ಮಾಜಿ ಶಾಸಕರ ಮೇಲೆಯೇ ಪ್ರಕರಣ ದಾಖಲಿಸಿದರು. ಇಷ್ಟೆಲ್ಲಾ ಆಗಿ ನಾಲ್ಕು ತಿಂಗಳಾದರೂ ಭವನದ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಇದು ದಲಿತರ ಬಗ್ಗೆ ಇರುವ ಮನಸ್ಥಿತಿಯನ್ನು ತೋರುತ್ತದೆ’ ಎಂದು
ಹೇಳಿದರು.

ADVERTISEMENT

ಪ್ರಶ್ನೆ ಮಾಡುವವರಿಗೆ ತಡೆಯೊಡ್ಡಬೇಕು ಎನ್ನುವುದಷ್ಟೇ ಇಲ್ಲಿನ ಆಡಳಿತದ ಉದ್ದೇಶವಾಗಿದೆ.ಇಂದಿನ ಪರಿಸ್ಥಿತಿಯಲ್ಲಿ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ವಿಚಾರಗಳಲ್ಲಿ ಕಾನೂನು ಮೀರಿ ವರ್ತಿಸಲಾಗುತ್ತಿದೆ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಅವಕಾಶಗಳನ್ನು, ಗೌರವದ ಬದುಕನ್ನು ನೀಡಿದರು. ಆದರೆ ನಮ್ಮ ಭಾಗದಲ್ಲಿ ಕಾನೂನು ಮೀರಿದ ಕೆಲಸಗಳು ನಡೆಯುತ್ತಿವೆ ಎಂದು ದೂರಿದರು.

ದಲಿತ ಸಮುದಾಯದ ಒಗ್ಗಟ್ಟನ್ನು ಒಡೆಯುವ ಕೆಲಸಗಳು ನಡೆಯುತ್ತಿವೆ. ದಲಿತರನ್ನು ಓಟಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಸಮುದಾಯವನ್ನು ದಿಕ್ಕುತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು.

ಅಂಬೇಡ್ಕರ್ ಚಿತ್ರ ಬಳಸಿ ಜೀವನ ಮಾಡದಿರಿ: ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳನ್ನು ತಿಳಿದು ಹೋರಾಟ ಮಾಡುವವರು ಯಾರು ಸಹ ತಮ್ಮ ಆತ್ಮಸಾಕ್ಷಿಯನ್ನು ಮಾರಾಟ ಮಾಡಿಕೊಳ್ಳುವುದಿಲ್ಲ. ಅಂಬೇಡ್ಕರ್ ಅವರ ಚಿತ್ರ ಹಾಕಿಕೊಳ್ಳುವುದು ಮುಖ್ಯವಲ್ಲ.ಅಂಬೇಡ್ಕರ್ ಅವರ ಚಿತ್ರ ಹಾಕಿಕೊಂಡು ಜೀವನ ಮಾಡುವ ವ್ಯವಸ್ಥೆ ಆಗಬಾರದು ಎಂದು ಹೇಳಿದರು.

ಅಂಬೇಡ್ಕರ್ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕಾದರೆ ನಮ್ಮ ಪ್ರಯತ್ನಗಳು ಸಹ ಪ್ರಾಮಾಣಿಕವಾಗಿ ಇರಬೇಕು. ಈ ಬಗ್ಗೆ ನಮಗೆ ನಾವೇ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು ಎಂದರು.

ಮುನಿರಾಜು, ನರಸಿಂಹಪ್ಪ, ಪ್ರಕಾಶ್, ರಾಮಕೃಷ್ಣ, ಕುಮಾರ್, ಮುನಿನಾರಾಯಣಪ್ಪ ಇತರರು ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.