ADVERTISEMENT

ಚುನಾವಣೆ ವೇಳೆ ಭರವಸೆ, ನಂತರ ಸುಳ್ಳು: ದಸಂಸ

ದಸಂಸ ಧರಣಿಗೆ ಅಂಗವಿಕಲ, ರೈತ ಸಂಘಟನೆಗಳ ಬೆಂಬಲ

​ಪ್ರಜಾವಾಣಿ ವಾರ್ತೆ
Published 27 ಜನವರಿ 2025, 14:16 IST
Last Updated 27 ಜನವರಿ 2025, 14:16 IST
ಚಿಕ್ಕಬಳ್ಳಾಪುರದಲ್ಲಿ ದಲಿತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಅಂಗವಿಕಲ ಸಂಘಟನೆಗಳು, ರೈತ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು
ಚಿಕ್ಕಬಳ್ಳಾಪುರದಲ್ಲಿ ದಲಿತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಅಂಗವಿಕಲ ಸಂಘಟನೆಗಳು, ರೈತ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು   

ಚಿಕ್ಕಬಳ್ಳಾಪುರ: ಭೂಮಿ, ವಸತಿ ಸಮಸ್ಯೆಗಳ ಪರಿಹಾರ, ಬಗರ್‌ಹುಕುಂ ಯೋಜನೆಯಡಿ ಸಾಗುವಳಿ ಚೀಟಿ ನೀಡುವುದು ಸೇರಿದಂತೆ ಜಿಲ್ಲೆಯಲ್ಲಿನ ದಲಿತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ದಲಿತ ಸಂಘರ್ಷ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಸೋಮವಾರ ಅಂಗವಿಕಲ ಸಂಘಟನೆಗಳು, ರೈತ ಸಂಘಟನೆಗಳು ಬೆಂಬಲ ಸೂಚಿಸಿದವು.

ಧರಣಿಯಲ್ಲಿ ಪಾಲ್ಗೊಂಡ ಸಂಘಟನೆಗಳ ಮುಖಂಡರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿನ ಅಂಗವಿಕಲರು, ದಲಿತರು ಮತ್ತು ರೈತ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣವೇ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಮಾತನಾಡಿ, ‘ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರು ಜನರಿಗೆ ಭೂಮಿ ಮತ್ತು ವಸತಿ ವಿಚಾರವಾಗಿ ದೊಡ್ಡ ಮಟ್ಟದ ಭರವಸೆಗಳನ್ನು ನೀಡುತ್ತಾರೆ. ಆದರೆ ಚುನಾವಣೆ ನಂತರ ಭರವಸೆಗಳು ಈಡೇರುವುದೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸ್ವಾತಂತ್ರ್ಯ ಬಂದು ಇಷ್ಟು ದಿನಗಳಾದರೂ ಭೂಮಿ ಮತ್ತು ವಸತಿ ಸಮಸ್ಯೆ ಪರಿಹಾರವಾಗಿಲ್ಲ. ಪ್ರತಿ ವಿಚಾರದಲ್ಲಿಯೂ ಸುಳ್ಳುಗಳನ್ನು ಹೇಳಿ ನಮ್ಮಿಂದ ಮತ ಪಡೆಯುತ್ತಿದ್ದಾರೆ. ಚುನಾವಣೆ ವೇಳೆ ಜನರು ಏನು ಕೇಳಿದರೂ ಮಾಡಿಕೊಡುತ್ತೇವೆ ಎನ್ನುತ್ತಾರೆ. ಆದರೆ ನಂತರ ಯಾವುದೇ ಕೆಲಸಗಳು ಆಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭೂಮಿ, ವಸತಿ, ನೀರು ಸೇರಿದಂತೆ ನಾಗರಿಕ ಸೌಲಭ್ಯಗಳಿಗಾಗಿ ಜಿಲ್ಲೆಯಲ್ಲಿ ದಲಿತ, ರೈತ ಮತ್ತು ಕನ್ನಡ ಸಂಘಟನೆಗಳು ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ನೀರಿಗಾಗಿ ಸಾವಿರಾರು ಕೋಟಿ ವೆಚ್ಚ ಮಾಡುತ್ತಿದ್ದಾರೆ. ಆದರೆ ಇಂದಿಗೂ ಕುಡಿಯುವ ನೀರು ಕೊಡಲು ಸಾಧ್ಯವಾಗಿಲ್ಲ ಎಂದು ದೂರಿದರು.

ಕರ್ನಾಟಕ ವಿಕಲಚೇತನರ ಸಂಸ್ಥೆಯ ಕಿರಣ್ ನಾಯಕ್ ಮಾತನಾಡಿ, ಅಂಗವಿಕಲರು, ಲಿಂಗತ್ವ ಅಲ್ಪಸಂಖ್ಯಾತರಿಗೂ ನಿವೇಶನಗಳನ್ನು ನೀಡಿಲ್ಲ. ವ್ಯವಸಾಯ ಮಾಡುವ ರೈತರಿಗೆ ಜಮೀನು ನೀಡಬೇಕು. ಜಿಲ್ಲೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಇದ್ದಾರೆ. ಅವರಿಗೂ ನಿವೇಶನ ನೀಡಬೇಕು ಎಂದರು.

ಉಪವಿಭಾಗಾಧಿಕಾರಿ ಅಶ್ವಿನ್ ಕುಮಾರ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ದಲಿತ ಸಂಘರ್ಷ ಸಮಿತಿಯ ಕೆ.ಸಿ.ರಾಜಾಕಾಂತ್, ಪರಮೇಶ್, ಗಡಿನಾಡು ರೈತ ಸಂಘದ ಜಿಲ್ಲಾ ಅಧ್ಯಕ್ಷ ಮಂಚನಬಲೆ ವೆಂಕಟೇಶ್ ಹಾಗೂ ಪದಾಧಿಕಾರಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.