ಚಿಂತಾಮಣಿ: ತಾಲ್ಲೂಕಿನ ಕೋರ್ಲಪರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂದೇನಹಳ್ಳಿ ಹಿಂದುಳಿದ ಪ್ರದೇಶದ ಒಂದು ಪುಟ್ಟ ಗ್ರಾಮ. ತಾಲ್ಲೂಕು ಕೇಂದ್ರದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತ ಸಮುದಾಯದವರೇ ಹೆಚ್ಚಾಗಿರುವ 75 ಮನೆಗಳಿವೆ.
ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಲವಾರು ಕೊರತೆಗಳ ನಡುವೆಯೂ ಅಚ್ಚುಕಟ್ಟಾಗಿದೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತನ್ನ ಇತಿಮಿತಿಯಲ್ಲಿ ಉತ್ತಮವಾಗಿ ನಡೆಯುತ್ತಿದೆ. ಒಂದರಿಂದ 5ನೇ ತರಗತಿವರೆಗೆ ಕಲಿಕೆ ನಡೆಯುತ್ತಿದೆ. ಇಬ್ಬರು ಶಿಕ್ಷಕರಿದ್ದಾರೆ.
ಶಾಲೆಗೆ ಆಕರ್ಷಕವಾದ ಬಣ್ಣ ಬಳಿಸಲಾಗಿದೆ. ಇರುವ ಆವರಣದಲ್ಲೆ ಮರಗಿಡಗಳನ್ನು ಬೆಳೆಸಿ ಸ್ವಚ್ಛತೆ ಕಾಪಾಡಲಾಗಿದೆ. ಉತ್ತಮ ತರಗತಿ ಕೊಠಡಿ, ಗಂಡು ಮತ್ತು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಅಕ್ಷರ ದಾಸೋಹದ ಅಡುಗೆ ಕೋಣೆ, ಕುಡಿಯುವ ನೀರು ಮತ್ತಿತರ ಎಲ್ಲ ಸೌಲಭ್ಯಗಳಿವೆ. ಶಾಲೆ ಸುತ್ತಲೂ ಆವರಣವಿದೆ.
ಕೊಠಡಿಗಳಿಗೆ ಸುಣ್ಣ, ಬಣ್ಣ, ಗೋಡೆ ಬರಹ, ಪಾಠೋಪಕರಣಗಳು, ಬಿಸಿ ಊಟಕ್ಕೆ ಬೇಕಾದ ಉಪಕರಣಗಳನ್ನು ಒಳಗೊಂಡಿದೆ. ಶಾಲೆಯ ಆವರಣದಲ್ಲಿ ಹಾಗೂ ಸುತ್ತಮುತ್ತಲು ಸ್ವಚ್ಛತೆಗೆ ಆದ್ಯತೆ ನೀಡಿ ಸ್ವಚ್ಛತೆಯ ಶಾಲೆಯನ್ನಾಗಿ ರೂಪಿಸಲಾಗಿದೆ. ಶಾಲಾಭಿವೃದ್ಧಿ ಸಮಿತಿ ಮತ್ತು ದಾನಿಗಳ ನೆರವಿನಿಂದಲೇ ಶಾಲೆಗೆ ಸುಣ್ಣ-ಬಣ್ಣ ಬಳಿಸಿ ಆಕರ್ಷಣೀಯವಾಗಿ ಮಾಡಲಾಗಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಕೆ.ಎನ್.ಮಂಜುನಾಥ್.
ಮಕ್ಕಳಿಗೆ ಸಮವಸ್ತ್ರ, ಬೆಲ್ಟ್, ಶೂಗಳನ್ನು ಹಾಗೂ ಅಗತ್ಯವಾದ ನೋಟ್ ಪುಸ್ತಕಗಳನ್ನು ಪ್ರತಿವರ್ಷ ದಾನಿಗಳ ನೆರವಿನಿಂದ ಒದಗಿಸಲಾಗುತ್ತದೆ. ಗ್ರಾಮ ಪಂಚಾಯಿತಿಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಶಾಲೆಯ ಮಕ್ಕಳಿಗೆ ಮತ್ತು ಗಿಡಗಳಿಗೆ ನೀರಿನ ಸಮಸ್ಯೆ ಇಲ್ಲ. ಶೌಚಾಲಯವನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಶಾಲೆಯ ಆವರಣದಲ್ಲೇ ಇರುವ ಮೈದಾನದಲ್ಲಿ ಮಕ್ಕಳು ಆಟಗಳಲ್ಲಿ ಉತ್ತಮ ಸಾಧನೆ ತೋರುತ್ತಿದ್ದಾರೆ.
ವರ್ಷದ ಎಲ್ಲ ರಾಷ್ಟ್ರೀಯ ಹಬ್ಬಗಳನ್ನು ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗ್ರಾಮದ ಮುಖಂಡರು ಭಾಗವಹಿಸಿ ಸಹಕಾರ ನೀಡುತ್ತಾರೆ. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ವಿಜೇತರಿಗೆ ಗ್ರಾಮಸ್ಥರು ಬಹುಮಾನದ ವ್ಯವಸ್ಥೆ ಮಾಡುತ್ತಾರೆ. ಗ್ರಾಮಸ್ಥರು ಮತ್ತು ಶಿಕ್ಷಕರು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುವುದಕ್ಕೆ ಈ ಶಾಲೆ ನಿದರ್ಶನವಾಗಿದೆ.
ಗ್ರಾಮಸ್ಥರಲ್ಲಿ ನಮ್ಮೂರ ಶಾಲೆ ಎನ್ನುವ ಅಭಿಮಾನವಿದೆ. ಹೀಗಾಗಿ ಶಿಕ್ಷಕರಿಗೆ ಹೆಚ್ಚಿನ ಸಹಕಾರ ನೀಡಿ ಪ್ರೋತ್ಸಾಹಿಸುತ್ತಾರೆ. ಮುಖ್ಯಶಿಕ್ಷಕ ಹಾಗೂ ಸಹಶಿಕ್ಷಕ ಮಹ್ಮದ್ ಮುಸ್ತಾಪ ಪರಸ್ಪರ ಹೊಂದಾಣಿಕೆಯಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ಪಾಠದ ಜತೆಗೆ ರಸಪ್ರಶ್ನೆ, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಭಕ್ತಿಗೀತೆಗಳ ಗಾಯನ ಮುಂತಾದ ಚಟುವಟಿಕೆಗಳನ್ನು ಏರ್ಪಡಿಸುತ್ತಾರೆ. ಚಟುವಟಿಕೆ ಆಧಾರಿತ ಕಾರ್ಯಕ್ರಮಗಳು ಕ್ರಮಬದ್ಧವಾಗಿ ನಡೆಯುತ್ತವೆ. ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ, ಕ್ರೀಡಾಕೂಟದಲ್ಲಿ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.
ಶಿಕ್ಷಕರು ಶಾಲೆಯ ಅಭಿವೃದ್ಧಿಗಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿದ್ದರೂ ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳ ಕಲಿಕೆಗೆ ಅಗತ್ಯವಾದ ಕಂಪ್ಯೂಟರ್, ಸ್ಮಾರ್ಟ್ ಕ್ಲಾಸ್ ಬೋರ್ಡ್, ಪ್ರಾಜೆಕ್ಟರ್, ದೂರದರ್ಶನ ಸೆಟ್ ಮತ್ತಿತರ ಕೊರತೆ ಎದ್ದು ಕಾಣುತ್ತಿದೆ. ಬೋಧನೆಗಿಂತ ಮಕ್ಕಳು ದೃಶ್ಯ ಮಾಧ್ಯಮಗಳಿಗೆ ಮತ್ತು ಪ್ರಾಯೋಗಿಕ ಬೋಧನೆಗೆ ಹೆಚ್ಚು ಆಕರ್ಷಿತರಾಗುವುದು ಸಹಜ. ಗ್ರಾಮಸ್ಥರು ಹಾಗೂ ದಾನಿಗಳು ಸಹಕಾರ ನೀಡಿದರೆ ಮಕ್ಕಳ ಕಲಿಕೆಗೆ ಮತ್ತಷ್ಟು ಸಹಕಾರಿಯಾಗುತ್ತದೆ ಎಂದು ಸಹ ಶಿಕ್ಷಕ ಮಹ್ಮದ್ ಮುಸ್ತಾಪ ಹೇಳುತ್ತಾರೆ.
ಹಿಂದುಳಿದ ಪ್ರದೇಶದ ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಪ್ರಗತಿಪಥದಲ್ಲಿ ಮುಂದುವರೆಯಲು ದಾನಿಗಳ ನೆರವು ಅಗತ್ಯ. ಗ್ರಾಮ ಪಂಚಾಯಿತಿ ಶಾಲಾ ಸಮಸ್ಯೆಗೆ ಸ್ಪಂದಿಸುತ್ತಿದೆ. ಪೀಠೋಪಕರಣ ಮತ್ತಿತರ ಪರಿಕರ ಅವಶ್ಯಕತೆ ಇದೆಕೆ.ಎನ್.ಮಂಜುನಾಥ್ ಮುಖ್ಯ ಶಿಕ್ಷಕ
ನಮ್ಮೂರ ಸರ್ಕಾರಿ ಶಾಲೆ ಉತ್ತಮವಾಗಿ ನಡೆಯುತ್ತಿದೆ. ಮಕ್ಕಳು ಆಸಕ್ತಿಯಿಂದ ಶಾಲೆಗೆ ಹೋಗುತ್ತಾರೆ. ಶಾಲೆಗೆ ಅಗತ್ಯ ನೆರವು ಒದಗಿಸಲು ಕೈಲಾದ ಪ್ರಯತ್ನ ಮಾಡುತ್ತೇನೆಆನಂದ್ ಎಸ್‌ಡಿಎಂಸಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.