ಚಿಕ್ಕಬಳ್ಳಾಪುರ: ಕೋಲಾರ–ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ವಿಭಜನೆಯ ಚರ್ಚೆ ಜಿಲ್ಲೆಯಲ್ಲಿ ಕಾವೇರಿದೆ. ಈ ಹೊತ್ತಿನಲ್ಲಿ ‘ಮೆಗಾ ಡೇರಿ’ಯ ಬಗ್ಗೆಯೂ ಚರ್ಚೆಗಳು ಗರಿಗೆದರಿವೆ.
ಪ್ರತ್ಯೇಕ ಒಕ್ಕೂಟದ ವಿಚಾರ ಬಂದಾಗ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಕ್ರಾಸ್‌ನಲ್ಲಿ 14 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಮೆಗಾ ಡೇರಿಯು ಪ್ರಮುಖವಾಗಿ ಪ್ರಸ್ತಾಪವಾಗುತ್ತಿದೆ. ₹ 160 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮೆಗಾ ಡೇರಿಯಲ್ಲಿ ಪ್ರತ್ಯೇಕ ಒಕ್ಕೂಟಕ್ಕೆ ಅಗತ್ಯವಾದ ಮೂಲಸೌಲಭ್ಯ ಇವೆ. ಇದನ್ನೇ ಕೇಂದ್ರವನ್ನಾಗಿ ಇಟ್ಟುಕೊಂಡು ಹೊಸ ಒಕ್ಕೂಟ ಕಾರ್ಯಾಚರಿಸಲಿದೆ ಎನ್ನುತ್ತಿದ್ದಾರೆ. ಪ್ರತ್ಯೇಕ ಒಕ್ಕೂಟ ಅಸ್ತಿತ್ವಕ್ಕೆ ಬಂದರೆ ಮೆಗಾ ಡೇರಿಯೇ ಕೇಂದ್ರ ಸ್ಥಾನವಾಗುವುದು ಖಚಿತ.
ಇಂತಿಪ್ಪ ಮೆಗಾ ಡೇರಿಯಲ್ಲಿ ₹ 20 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಪನ್ನೀರ್ ಘಟಕದಲ್ಲಿ ಇಂದಿಗೂ ಕಾರ್ಯ ಚಟುವಟಿಕೆ ಸಾಧ್ಯವಾಗಿಲ್ಲ. ಇಷ್ಟು ಬೃಹತ್ ಮೊತ್ತದ ಹೂಡಿಕೆ ವ್ಯರ್ಥವಾಗುತ್ತಿದೆಯೇ ಎನ್ನುವ ಭಾವನೆ ಹೈನುಗಾರಿಕೆ ಕ್ಷೇತ್ರದಿಂದಲೇ ಕೇಳಿಬರುತ್ತಿದೆ. 2016ರಲ್ಲಿ ಮೆಗಾ ಡೇರಿ ಕಾರ್ಯಾರಂಭ ಮಾಡಿತು. 2018ರಲ್ಲಿ ಪನ್ನೀರ್ ಘಟಕಕ್ಕೆ ಯಂತ್ರೋಪಕರಣ ಅಳವಡಿಕೆ, ಉದ್ಘಾಟನೆ ಜರುಗಿದವು.
ಪನ್ನೀರ್‌ಗೆ ಬೇಡಿಕೆ ಇದೆ. ಇದನ್ನು ಮನಗಂಡು ಇಷ್ಟೊಂದು ದೊಡ್ಡ ಮೊತ್ತದ ಹೂಡಿಕೆಯಲ್ಲಿ ಘಟಕ ನಿರ್ಮಿಸಲಾಯಿತು. ಜರ್ಮನ್ ತಂತ್ರಜ್ಞಾನದ ಸ್ವಯಂ ಚಾಲಿತ ಯಂತ್ರಗಳನ್ನು ಇಲ್ಲಿ ಅಳವಡಿಸಲಾಗಿದೆ. ನಿತ್ಯ 10 ಟನ್ ಪನ್ನೀರ್ ಉತ್ಪಾದಿಸುವ ಸಾಮರ್ಥ್ಯ ಈ ಘಟಕಕ್ಕೆ ಇದೆ. ಆದರೆ, ತಂತ್ರಜ್ಞಾನದ ವೈಫಲ್ಯದಿಂದ ಘಟಕವು ಇಂದಿಗೂ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ.
ಹೀಗೆ ಅತ್ಯಾಧುನಿಕ ಸ್ವಯಂಚಾಲಿಕ ಯಂತ್ರೋಪಕಣಗಳ ಘಟಕ ಬಳಕೆ ಆಗುತ್ತಿಲ್ಲ. ಮೆಗಾ ಡೇರಿಯ ಸಿಬ್ಬಂದಿ ನಿತ್ಯ 300ರಿಂದ 400 ಕೆ.ಜಿ ಪನ್ನೀರ್ ಅನ್ನು ಉತ್ಪಾದಿಸುತ್ತಿದ್ದಾರೆ ಎಂದು ಮೆಗಾ ಡೇರಿ ಮೂಲಗಳು ತಿಳಿಸುತ್ತವೆ. ಒಂದು ವೇಳೆ ಪೂರ್ಣ ಪ್ರಮಾಣದಲ್ಲಿ ಪನ್ನೀರ್ ಘಟಕ ಕಾರ್ಯಾಚರಣೆ ನಡೆಸಿದರೆ ನಿತ್ಯ ಸರಾಸರಿ 1 ಲಕ್ಷ ಲೀಟರ್ ಹಾಲು ಪನ್ನೀರ್ ತಯಾರಿಕೆಗೆ ಒಳಕೆ ಆಗುತ್ತದೆ.
ತಂತ್ರಜ್ಞರು ಘಟಕ ಕಾರ್ಯಾರಂಭಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಭೇಟಿ ನೀಡಿದ್ದರೂ ಫಲ ಮಾತ್ರ ಇಂದಿಗೂ ದೊರೆತಿಲ್ಲ. ಪನ್ನೀರ್ ಘಟಕದಲ್ಲಿನ ಯಂತ್ರೋಪಕರಣಗಳುನಿಸ್ತೇಜವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.