ADVERTISEMENT

ಪರಿಸರಸ್ನೇಹಿ ಬಟ್ಟೆ ಪ್ಯಾಡ್ ತಯಾರಿಕೆ

ಶಿಡ್ಲಘಟ್ಟ ತಾಲ್ಲೂಕಿನ ವಂಟೂರಿನ ಮಹಿಳೆಯರ ಪರಿಸರ ಕಾಳಜಿ

ಡಿ.ಜಿ.ಮಲ್ಲಿಕಾರ್ಜುನ
Published 30 ಸೆಪ್ಟೆಂಬರ್ 2019, 9:07 IST
Last Updated 30 ಸೆಪ್ಟೆಂಬರ್ 2019, 9:07 IST
ಸಿದ್ಧಪಡಿಸಿರುವ ಪರಿಸರಸ್ನೇಹಿ ಬಟ್ಟೆಯ ಪ್ಯಾಡ್‌ಗಳನ್ನು ತೋರಿಸಿದ ವಂಟೂರಿನ ಮಹಿಳೆಯರು
ಸಿದ್ಧಪಡಿಸಿರುವ ಪರಿಸರಸ್ನೇಹಿ ಬಟ್ಟೆಯ ಪ್ಯಾಡ್‌ಗಳನ್ನು ತೋರಿಸಿದ ವಂಟೂರಿನ ಮಹಿಳೆಯರು   

ಶಿಡ್ಲಘಟ್ಟ: ತಾಲ್ಲೂಕಿನ ವಂಟೂರಿನ ನಾಲ್ಕು ಮಂದಿ ಮಹಿಳೆಯರು ಮುಟ್ಟಿನ ಸಮಯದಲ್ಲಿ ಬಳಸುವ ಪರಿಸರಸ್ನೇಹಿ ಬಟ್ಟೆಯ ಪ್ಯಾಡ್‌ಗಳ ತಯಾರಿಕೆಯಲ್ಲಿ ತೊಡಗಿದ್ದಾರೆ.

ಪವಿತ್ರಾ, ಕಮಲಮ್ಮ, ಕವಿತಾ ಮತ್ತು ಚೈತ್ರಾ ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿದೇವಮ್ಮ ಅವರ ಮಾರ್ಗದರ್ಶನದಲ್ಲಿ ಬಂಡವಾಳ ಹೂಡಿ ಕಳೆದ ಆರು ತಿಂಗಳಿನಿಂದ ಪರಿಸರಸ್ನೇಹಿ ಮರು ಬಳಕೆಯ ಬಟ್ಟೆಯ ಪ್ಯಾಡ್‌ಗಳನ್ನು ತಯಾರಿಸುತ್ತಿದ್ದಾರೆ. ಇದಕ್ಕಾಗಿ ಸ್ತ್ರೀಶಕ್ತಿ ಸಂಘದಲ್ಲಿ ₹ 57 ಸಾವಿರ ಸಾಲ ಮಾಡಿದ್ದಾರೆ. ಈ ಮಹಿಳೆಯರು ಉತ್ತಮ ಗುಣಮಟ್ಟದ ಮೈಕ್ರೋಫೈಬರ್ ಬಟ್ಟೆಗಳನ್ನು ತರಿಸಿದ್ದಾರೆ. ಸಿಂಧುನಾಯಕ್ ಎಂಬ ದಾನಿ ಇವರಿಗೆ ಐದು ದಾರಗಳ ಓವರ್ಲಾಕ್ ಮಾಡುವ ಎರಡು ಹೊಲಿಗೆ ಯಂತ್ರಗಳು ಮತ್ತು ಬಟನ್ ಹಾಕುವ ಯಂತ್ರವನ್ನು ಕೊಡಿಸಿದ್ದಾರೆ.

ಇವರ ಈ ಅಭಿಯಾನಕ್ಕೆ ಮೂಲ ಕಾರಣ ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಜಯರಾಂ ಸತೀಶ್. ಜಯರಾಂ ಸತೀಶ್, ರೀಜುವಿನೇಟ್ ಇಂಡಿಯಾ ಮೂವ್ಮೆಂಟ್ ಮತ್ತು ಗ್ರೀನ್ ದಿ ರೆಡ್ ಸಂಸ್ಥೆಯ ಸಹಾಯ ಪಡೆದು ಬಶೆಟ್ಟಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ವಿಶ್ವ ಮುಟ್ಟಿನ ಆರೋಗ್ಯ ದಿನಾಚರಣೆ’ ಆಯೋಜಿಸಿದರು. ಅಲ್ಲಿ ಸ್ತ್ರೀರೋಗತಜ್ಞೆ ಡಾ.ಮೀನಾಕ್ಷಿ ಭರತ್ ಅವರು ‘ಸುಸ್ಥಿರ ಮುಟ್ಟಿನ ಸ್ವಚ್ಛತೆ’ ಬಗ್ಗೆ ಮಹಿಳೆಯರು, ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರಿಗೆ ತಿಳಿಸಿಕೊಟ್ಟರು. ಪರಿಸರವನ್ನು ಸಂರಕ್ಷಿಸಿ, ಹೆಣ್ಣು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಪರಿಸರಸ್ನೇಹಿ ಬಟ್ಟೆಯ ಪ್ಯಾಡ್ ಮತ್ತು ಕಪ್ ಬಳಕೆ ಮಾಡಬಹುದು ಎಂದು ಹೇಳಿದರು.

ADVERTISEMENT

ಪರಿಸರಸ್ನೇಹಿ ಬಟ್ಟೆಯ ಪ್ಯಾಡ್‌ಗಳನ್ನು ನಾವುಗಳೇ ತಯಾರಿಸುತ್ತೇವೆ ಎಂದು ಆಸಕ್ತಿ ತೋರಿದ್ದರಿಂದ ವಂಟೂರಿನ ಮಹಿಳೆಯರಿಗೆ ತಮಿಳುನಾಡಿನ ಕರೂರಿನಿಂದ ಪರಿಣತರನ್ನು ಕರೆಸಿ ತರಬೇತಿ ಕೊಡಿಸಲಾಯಿತು. ದಾನಿಗಳು ಕೊಟ್ಟ ಯಂತ್ರ ಹಾಗೂ ಸಾಲದ ಹಣದಲ್ಲಿ ತಂದ ಬಟ್ಟೆಗಳಿಂದ ಪ್ಯಾಡ್‌ಗಳು ಸಿದ್ಧವಾಗತೊಡಗಿವೆ.

‘ಹಿಂದೆ ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಮುಟ್ಟಾದಾಗ ಬಟ್ಟೆ ಬಳಸುತ್ತಿದ್ದರು. ಆದರೆ ಅದರ ಸೂಕ್ತ ನಿರ್ವಹಣೆಯ ಬಗ್ಗೆ ತಿಳಿವಳಿಕೆಯ ಕೊರತೆಯಿಂದ ಹಲವು ಕಾಯಿಲೆಗಳು ಬರುತ್ತಿದ್ದವು. ಈಗ ಅಂಗಡಿಗಳಲ್ಲಿ ದೊರೆಯುವ ಬಳಸಿ ಬಿಸಾಡುವ ಪ್ಯಾಡ್‌ಗಳಲ್ಲಿ ಪ್ಲಾಸ್ಟಿಕ್, ಸಿಲಿಕಾ ಮತ್ತು ಕೆಲ ರಾಸಾಯನಿಕ ಅಂಶಗಳಿವೆ. ಅವು ಪರಿಸರಕ್ಕೆ ಮಾರಕವಾಗಿವೆ. ಪ್ರತಿ ಮಹಿಳೆಯೂ ಒಂದು ವರ್ಷಕ್ಕೆ ಬಳಸಿ ಬಿಸಾಡುವ ನೂರು ಪ್ಯಾಡ್‌ಗಳನ್ನಾದರೂ ಉಪಯೋಗಿಸುವರು. ಇದನ್ನು ತಡೆಗಟ್ಟಲು ಕನಿಷ್ಠ ಎರಡು ವರ್ಷಗಳ ಕಾಲ ಬಳಸಬಹುದಾದ ಪರಿಸರಸ್ನೇಹಿ ಮರು ಬಳಕೆಯ ಬಟ್ಟೆಯ ಪ್ಯಾಡ್‌ಗಳನ್ನು ತಯಾರಿಸಲಾಗುತ್ತಿದೆ’ ಎಂದು ಮಾರ್ಗದರ್ಶಿ ಲಕ್ಷ್ಮಿದೇವಮ್ಮ ತಿಳಿಸಿದರು.

‘ಪ್ಯಾಡ್ ಮತ್ತು ಕಪ್‌ಗಳನ್ನು ನಾವುಗಳು ಬಳಕೆ ಮಾಡುತ್ತಾ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ, ಮಹಿಳೆಯರಿಗೆ ತಿಳಿವಳಿಕೆ ನೀಡುತ್ತಿದ್ದೇವೆ. ಈಗಾಗಲೇ 1008ಕ್ಕೂ ಹೆಚ್ಚು ಹೆಣ್ಣುಮಕ್ಕಳು ಈ ಪ್ಯಾಡ್ ಬಳಸುತ್ತಿದ್ದಾರೆ. 140 ಮಹಿಳೆಯರು ಮುಟ್ಟಿನ ಕಪ್ ಬಳಸುತ್ತಿದ್ದಾರೆ’ ಎಂದರು.

ಮಹಿಳೆಯರ ಕಾಳಜಿಗೆ ಬೆಂಬಲ

ಬೆಂಗಳೂರಿನಲ್ಲಿ ಪ್ರತಿ ದಿನ ಮುಟ್ಟಿನ ನಿರ್ವಹಣೆಗೆ ಸಂಬಂಧಿಸಿದ ಬಳಕೆಯಾದ ಪ್ಯಾಡ್ ತ್ಯಾಜ್ಯ ಪ್ರತಿ ದಿನ ಹತ್ತು ಸಾವಿರ ಕೆ.ಜಿ ಸಂಗ್ರಹವಾಗುತ್ತಿದೆ. ಇನ್ನು ಉಳಿದ ಜಿಲ್ಲಾ, ತಾಲ್ಲೂಕು ಕೇಂದ್ರಗಳು ಹಾಗೂ ಹಳ್ಳಿಗಳನ್ನು ಲೆಕ್ಕ ಹಾಕಿದರೆ ಈ ತ್ಯಾಜ್ಯ, ಪರಿಸರವನ್ನು ಎಷ್ಟೆಲ್ಲ ತೊಂದರೆ ಮಾಡುತ್ತಿದೆ ಎಂಬುದು ಅರ್ಥವಾಗುತ್ತದೆ. ಈ ಮಹಿಳೆಯರ ಕಾಳಜಿಗೆ ಬೆಂಬಲ ಬೇಕಿದೆ. ದಾನಿಗಳು ಈ ಮಹಿಳೆಯರಿಂದ ಮರು ಬಳಕೆಯ ಬಟ್ಟೆಯ ಪ್ಯಾಡ್ ಖರೀದಿಸಿ ಸರ್ಕಾರಿ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ವಿತರಿಸಬೇಕಿದೆ. ಹೆಣ್ಣು ಮಕ್ಕಳಿಗೆ ತಿಳಿವಳಿಕೆ ನೀಡುವ ಕೆಲಸವನ್ನು ನಾವು ಮಾಡುತ್ತೇವೆ.

– ಜಯರಾಂ ಸತೀಶ್, ಮಕ್ಕಳ ಹಕ್ಕುಗಳ ಟ್ರಸ್ಟ್

***

ಆಸಕ್ತರಿಗೆ ತರಬೇತಿ

ನಾಲ್ಕು ಪ್ಯಾಡ್‌ಗಳನ್ನು ಒಂದು ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಅದನ್ನು ಬಳಸುವ ವಿಧಾನವನ್ನು ಅದರ ಮೇಲೆ ಚಿತ್ರಗಳ ಮೂಲಕ ತಿಳಿಸಲಾಗುತ್ತದೆ. ನಮಗೆ ಲಾಭ ಸಂಪಾದಿಸುವ ಉದ್ದೇಶವಿಲ್ಲ. ನಮ್ಮಿಂದ ಒಂದಷ್ಟು ಹೆಣ್ಣುಮಕ್ಕಳಿಗೆ ಉಪಯೋಗ ಆಗುತ್ತದೆ. ಅವರ ಆರೋಗ್ಯ ಸುಧಾರಿಸುತ್ತೆ. ಪರಿಸರ ರಕ್ಷಣೆಗೆ ನಮ್ಮದೂ ಅಳಿಲು ಸೇವೆಯಾಗುತ್ತೆ. ಜತೆಯಲ್ಲಿ ನಮಗೂ ಇದ್ದಲ್ಲೇ ಕೆಲಸ ಸಿಗುತ್ತೆ ಎಂದು ಪ್ಯಾಡ್ ತಯಾರಿಸುತ್ತಿದ್ದೇವೆ. ಮನೆಯಲ್ಲಿ ಹೊಲಿಗೆ ಯಂತ್ರವಿರುವ ಆಸಕ್ತ ಹೆಣ್ಣುಮಕ್ಕಳಿಗೆ ಇದನ್ನು ತಯಾರಿಸಲು ಕಲಿಸುತ್ತಿದ್ದೇವೆ.

–ಪವಿತ್ರಾ, ಪ್ಯಾಡ್ ತಯಾರಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.