ADVERTISEMENT

ಮಕ್ಕಳ ಶಿಕ್ಷಣದಿಂದ ವಂಚಿಸದಿರಿ: ಮುಸ್ಲಿಂ ಸಮುದಾಯಕ್ಕೆ ಸಚಿವ ಜಮೀರ್ ಅಹಮದ್ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 7:21 IST
Last Updated 30 ಅಕ್ಟೋಬರ್ 2025, 7:21 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಸಚಿವ ಜಮೀರ್ ಅಹಮದ್ ಖಾನ್ ವಿದ್ಯಾರ್ಥಿ ವೇತನ ವಿತರಿಸಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಸಚಿವ ಜಮೀರ್ ಅಹಮದ್ ಖಾನ್ ವಿದ್ಯಾರ್ಥಿ ವೇತನ ವಿತರಿಸಿದರು   

ಚಿಕ್ಕಬಳ್ಳಾಪುರ: ವಿದ್ಯೆ ಇದ್ದರೆ ಎಲ್ಲವನ್ನೂ ಸಾಧಿಸಬಹುದು. ಶಿಕ್ಷಣವೇ ದೊಡ್ಡ ಶಕ್ತಿ. ಒಂದು ಹೊತ್ತು ಊಟ ಕಡಿಮೆ ಮಾಡಿದರೂ ಸರಿ ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸಬೇಡಿ ಎಂದು ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಮತ್ತು ವಸತಿ ಸಚಿವ ಜಮೀರ್ ಅಹಮದ್ ಖಾನ್ ಸಲಹೆ ನೀಡಿದರು. 

ನಗರದ ಮದೀನಾ ಶಾದಿ ಮಹಲ್‌ನಲ್ಲಿ ವಕ್ಫ್ ಸಂಸ್ಥೆ ಜಮಾತ್ ಅಹ್ಲೆ ಇಸ್ಲಾಂ ಬುಧವಾರ ಹಮ್ಮಿಕೊಂಡಿದ್ದ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ಶಿಕ್ಷಣವಿಲ್ಲದೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ವಿದ್ಯಾವಂತನಾದ ವ್ಯಕ್ತಿ ಕೇವಲ ತನ್ನ ಜೀವನವನ್ನಷ್ಟೇ ಅಲ್ಲ ತನ್ನ ಕುಟುಂಬವನ್ನೂ ಪೋಷಿಸುವನು. ಒಬ್ಬ ವಿದ್ಯಾವಂತ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾನೆ. ಆದ್ದರಿಂದ ಪೋಷಕರು ಯಾವುದೇ ರೀತಿಯ ಕಷ್ಟ ಬಂದರೂ ಮಕ್ಕಳ ಶಿಕ್ಷಣದಲ್ಲಿ ಹಿಂಜರಿಯಬಾರದು ಎಂದರು. 

ADVERTISEMENT

ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಸಮುದಾಯದಲ್ಲಿ ಶಿಕ್ಷಣದ ಅರಿವು ಹೆಚ್ಚಾಗಿದೆ. ಹತ್ತನೇ ತರಗತಿಯಿಂದ ಹಿಡಿದು ಪದವಿವರೆಗೆ ಉತ್ತೀರ್ಣರಾಗುವವರ ಪ್ರಮಾಣವು ಗಣನೀಯವಾಗಿ ಏರಿದೆ. ಇದನ್ನು ಇನ್ನಷ್ಟು ಹೆಚ್ಚಿಸಲು ಎಲ್ಲರೂ ಶ್ರಮಿಸಬೇಕು. ಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಕಲ್ಪಿಸಲಾಗಿದೆ ಎಂದು ಹೇಳಿದರು.

ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸಿದ್ದರಾಮಯ್ಯ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಉರ್ದು ಶಾಲೆಗಳ ಅಭಿವೃದ್ಧಿಗೆ ಹಣ ನೀಡಲಾಗಿದೆ. ರಾಜ್ಯದಲ್ಲಿ 100 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ 50 ಮೌಲಾನಾ ಅಬ್ದುಲ್ ಕಲಾಂ ಆಜಾದ್ ಶಾಲೆಗಳನ್ನು ಪ್ರಾರಂಭಿಸಿ ಅಲ್ಪಸಂಖ್ಯಾತ ಮಕ್ಕಳಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ವಿವರಿಸಿದರು. 

ಕಳೆದ ಐದು ತಿಂಗಳಲ್ಲಿ ಜಮಾತ್-ಎ-ಅಹ್ಲೆ-ಇಸ್ಲಾಂ ಸಂಸ್ಥೆ ತೋರಿದ ಕಾರ್ಯಕ್ಷಮತೆ ಶ್ಲಾಘನೀಯ. ಇತರ ಸಂಸ್ಥೆಗಳಿಗೆ ಇದು ಮಾದರಿಯಾಗಿದೆ. ಈ ಸಂಸ್ಥೆಯ ಕೋರಿಕೆಯ ಮೇರೆಗೆ ಮದೀನಾ ಶಾದಿ ಮಹಲ್‌ನ ಲಿಫ್ಟ್ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳಿಗೆ ₹ 30 ಲಕ್ಷ ಅನುದಾನ ನೀಡಲಾಗುವುದು. ಹಸ್ಸೇನಿಯ ಮಸೀದಿ ನಿರ್ಮಾಣಕ್ಕಾಗಿ ₹ 50 ಲಕ್ಷ ಅನುದಾನ ನೀಡಲಾಗುವುದು ಎಂದು ಘೋಷಿಸಿದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ, ಶಿಕ್ಷಣವು ವ್ಯಕ್ತಿಯ ಜೀವನವನ್ನು ರೂಪಿಸುವ ಮತ್ತು ಸುಧಾರಿಸುವ ಅತ್ಯುತ್ತಮ ಶಕ್ತಿ. ಸರ್ಕಾರ ವಿದ್ಯಾರ್ಥಿ ವೇತನಗಳ ಮೂಲಕ ಹಾಗೂ ಮೊರಾರ್ಜಿ ದೇಸಾಯಿ ಮತ್ತು ಮೌಲಾನಾ ಅಬ್ದುಲ್ ಕಲಾಂ ಆಜಾದ್ ಶಾಲೆಗಳ ಮೂಲಕ ಉಚಿತ ಶಿಕ್ಷಣ ನೀಡುತ್ತಿದೆ. ಇಂತಹ ಸೌಲಭ್ಯಗಳು ದೇಶದ ಯಾವುದೇ ರಾಜ್ಯದಲ್ಲಿಲ್ಲ. ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಆರ್.ಸೀತಾರಾಂ ಮಾತನಾಡಿ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳು ಹಿಂದುಳಿಯಲು ಮೂಲ ಕಾರಣ ಶಿಕ್ಷಣ ಕೊರತೆ. ಈಗ ಶಿಕ್ಷಣದ ಅರಿವು ಹೆಚ್ಚುತ್ತಿದೆ. ಇಂತಹ ವಿದ್ಯಾರ್ಥಿ ವೇತನ ವಿತರಣೆಗಳು ಸಮುದಾಯದ ಬೆಳವಣಿಗೆಗೆ ಪ್ರೇರಣೆ ಎಂದು ಹೇಳಿದರು.

700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ₹20 ಲಕ್ಷ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಜಮಾತ್ ಅಹ್ಲೆ ಇಸ್ಲಾಂ ಅಧ್ಯಕ್ಷ ಜಾವೇದ್ ಪಾಷಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮುಹಮ್ಮದ್ ಫಹಾದ್, ಕರ್ನಾಟಕ ಬೀಜ ನಿಗಮದ ಅಧ್ಯಕ್ಷ ಅಂಜನಪ್ಪ, ನಗರಸಭೆ ಸದಸ್ಯ ಮುಹಮ್ಮದ್ ಜಾಫರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಗಂಗರೇಕಾಲುವೆ ನಾರಾಯಣಸ್ವಾಮಿ, ಅಹ್ಲೆ ಇಸ್ಲಾಂ ಉಪಾಧ್ಯಕ್ಷ ಮುಹಮ್ಮದ್ ದಾವೂದ್, ಸದಸ್ಯ ಸಾದಿಕ್ ಅಲಿ, ಎಸ್.ಎಂ. ರಫೀಕ್ ಮತ್ತಿತರರು ಪಾಲ್ಗೊಂಡಿದ್ದರು.

ಕ್ಷಣಕ್ಕೆ ₹ 2900 ಕೋಟಿ

ಹಜ್ ಭವನವನ್ನು ಈಗ ಕೇವಲ ಹಜ್ ಯಾತ್ರೆಗಳಿಗೆ ಮಾತ್ರವಲ್ಲ ಉನ್ನತ ಶಿಕ್ಷಣದ ತರಬೇತಿಗೂ ಬಳಸಲಾಗುತ್ತಿದೆ. ಕಳೆದ ವರ್ಷದಿಂದ ಸಮುದಾಯದ 400 ವಿದ್ಯಾರ್ಥಿಗಳಿಗೆ ಐಎಎಸ್ ಕೆಎಎಸ್ ಹಾಗೂ ಐಪಿಎಸ್ ತರಬೇತಿ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ₹4500 ಕೋಟಿ ಮೀಸಲಿರಿಸಿದ್ದು ಅದರಲ್ಲಿ ₹2900 ಕೋಟಿ ಶಿಕ್ಷಣಕ್ಕೆ ವಿನಿಯೋಗಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.