ADVERTISEMENT

ಚಿಕ್ಕಬಳ್ಳಾಪುರ | ಕೌಶಲರಹಿತ ಶಿಕ್ಷಣ ಫಲದಾಯಕವಲ್ಲ: ಡಾ.ಸಿ.ಎನ್.ಅಶ್ವತ್ಥನಾರಾಯಣ

ಬೃಹತ್ ಉದ್ಯೋಗ ಮೇಳಕ್ಕೆ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 5:21 IST
Last Updated 13 ಜನವರಿ 2023, 5:21 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿಗಳಲ್ಲಿ ಉದ್ಯೋಗಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಸಚಿವರಾದ ಸಿ.ಎನ್.ಅಶ್ವತ್ಥನಾರಾಯಣ ಮತ್ತು ಡಾ.ಕೆ.ಸುಧಾಕರ್ ಆದೇಶ ಪತ್ರಗಳನ್ನು ವಿತರಿಸಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿಗಳಲ್ಲಿ ಉದ್ಯೋಗಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಸಚಿವರಾದ ಸಿ.ಎನ್.ಅಶ್ವತ್ಥನಾರಾಯಣ ಮತ್ತು ಡಾ.ಕೆ.ಸುಧಾಕರ್ ಆದೇಶ ಪತ್ರಗಳನ್ನು ವಿತರಿಸಿದರು   

ಚಿಕ್ಕಬಳ್ಳಾಪುರ: ದೇಶದ ಪ್ರತಿಷ್ಠಿತ ಟಾಟಾ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ರಾಜ್ಯದ 270 ಸರ್ಕಾರಿ ಕೈಗಾರಿಕಾ ಸಂಸ್ಥೆಗಳ ಪೈಕಿ 150 ಸಂಸ್ಥೆಗಳಿಗೆ ಆಧುನಿಕ ಸ್ಪರ್ಶ ನೀಡಿ ಉನ್ನತೀಕರಣಕ್ಕೆ ಕ್ರಮ‌ಕೈಗೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಜಿಲ್ಲಾಡಳಿತ, ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಗುರುವಾರ ‘ಚಿಕ್ಕಬಳ್ಳಾಪುರ ಉತ್ಸವ’ ಅಂಗವಾಗಿ ನಗರದ ಹೊರವಲಯದ ಎಸ್‌ಜೆಸಿಐಟಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ 1,200 ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 1,200 ಸಂಸ್ಥೆಗಳ ಪೈಕಿ 270 ಸರ್ಕಾರಿ‌ ಸಂಸ್ಥೆಗಳಿದ್ದು, ಇವುಗಳಲ್ಲಿ ಸ್ವಂತ ಕಟ್ಟಡಗಳಿರುವ 150 ಸಂಸ್ಥೆಗಳನ್ನು ₹ 5 ಸಾವಿರ ಕೋಟಿ ವೆಚ್ಚದೊಂದಿಗೆ ಟಾಟಾ ಸಂಸ್ಥೆ ಸಹಯೋಗದಲ್ಲಿ ಆಧುನಿಕ‌ ಸ್ಪರ್ಶ ನೀಡಿ ಉನ್ನತೀಕರಿಸಲಾಗಿದೆ ಎಂದರು.

ADVERTISEMENT

ಶಿಕ್ಷಣದಲ್ಲಿ ಕೌಶಲಗಳ ಅಗತ್ಯವಿದೆ. ಕೇಂದ್ರ ಸರ್ಕಾರದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಸಾಮಾನ್ಯ ಪದವಿ ವಿದ್ಯಾರ್ಥಿಗಳೂ ಯಾವುದಾದರೂ ಒಂದು ಕ್ಷೇತ್ರದ ಕೌಶಲದ ಜ್ಞಾನದೊಂದಿಗೆ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಉದ್ಯೋಗ ಪಡೆಯಬೇಕಾದರೆ ಕೌಶಲ ಅಗತ್ಯ ಎಂದು ಹೇಳಿದರು.

ಸಚಿವ ಡಾ.ಕೆ. ಸುಧಾಕರ್ ಮಾತನಾಡಿ, ಮೇಳಕ್ಕೆ 27.500 ಜನರು ನೋಂದಣಿ ಮಾಡಿಕೊಂಡಿದ್ದಾರೆ, 135 ಪ್ರತಿಷ್ಠಿತ ಉದ್ಯೋಗದಾತ ಕಂಪನಿಗಳು ಪಾಲ್ಗೊಂಡಿವೆ. ಈ ಪೈಕಿ 4,125 ಮಂದಿ ಉದ್ಯೋಗ ಪಡೆಯಲು ಅರ್ಹತೆ ಪಡೆದಿದ್ದಾರೆ. 12 ಸಾವಿರಕ್ಕೂ ಹೆಚ್ಚು ಯುವಜನರು ಮೇಳಕ್ಕೆ ಹಾಜರಾಗಿದ್ದಾರೆ. ಜಿಲ್ಲೆಯಲ್ಲಿ ಕೈಗಾರಿಕಾ ವಲಯಕ್ಕಾಗಿ 4 ಸಾವಿರ ಎಕರೆ ಭೂಮಿ ಗುರುತಿಸಲಾಗಿದೆ ಎಂದರು.

ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ. ನವೀನ್ ಕಿರಣ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ಆಯುಷ್ ಇಲಾಖೆ ಆಯುಕ್ತ ಜೆ. ಮಂಜುನಾಥ್, ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.