ಚಿಕ್ಕಬಳ್ಳಾಪುರ: ತಂದೆ, ತಾಯಿ ಸೇರಿದಂತೆ ಎಲ್ಲ ಹಿರಿಯ ನಾಗರಿಕರಿಗೆ ಪ್ರೀತಿ, ಗೌರವ, ಕಾಳಜಿ ತೋರಿ ಸೇವೆ ಸಲ್ಲಿಸುವುದು ನಮ್ಮ ಕರ್ತವ್ಯ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್. ರಮೇಶ್ ತಿಳಿಸಿದರು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರ ಜೀವನದಲ್ಲಿ ಬಾಲ್ಯ, ಯೌವ್ವನ ಹಾಗೂ ಮುಪ್ಪು ಸಹಜ. ಹಿರಿಯ ನಾಗರಿಕರನ್ನು ಪ್ರತಿಯೊಬ್ಬರು ಗೌರವದಿಂದ ಕಾಣಬೇಕು. ವಿವಿಧ ಇಲಾಖೆಗಳಿಂದ ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ದೊರೆಯಬೇಕಾದ ಸೌಲಭ್ಯಗಳು ತಲುಪುವ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ಹೇಳಿದರು.
ಕಣ್ಣಿಗೆ ಕಾಣುವ ದೇವರು ಎಂದರೆ ಜನ್ಮ ನೀಡಿದ ತಂದೆ ತಾಯಿ. ಜನ್ಮದಾತರಿಗೆ ಸೇವೆ ಸಲ್ಲಿಸಿದರೆ ದೇವರ ಸೇವೆ ಮಾಡಿದಷ್ಟು ಪುಣ್ಯ ಲಭಿಸಲಿದೆ. ವರ್ಷಗಳು ಉರುಳಿದಂತೆ ದೇಹಕ್ಕೆ ವಯಸ್ಸು ಆಗುವುದು ಸಹಜ ಎಂದು ಹೇಳಿದರು.
ಹಿರಿಯ ನಾಗರಿಕರಾದ ತಂದೆ-ತಾಯಿ, ಅಜ್ಜ-ಅಜ್ಜಿ ಮಾತ್ರವಲ್ಲದೆ, ಪ್ರತಿ ಮನೆಯ ಹಿರಿಯರು ಮಾರ್ಗದರ್ಶಕರಾಗಿರುತ್ತಾರೆ. ಅವರು ಹೇಳುವ ಸಲಹೆಗಳು, ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಯಲು ನೆರವಾಗುತ್ತವೆ. ಒಟ್ಟಾರೆ ಹಿರಿಯರನ್ನು ಗೌರವದಿಂದ ನೋಡಿಕೊಳ್ಳುವುದು ನಮ್ಮ ಹೊಣೆಗಾರಿಕೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೆಂಕಟೇಶ್ ರೆಡ್ಡಿ, ದಿನಗಳು ಉರುಳಿದಂತೆ ದೇಹಕ್ಕೆ ವಯಸ್ಸು ಆಗುತ್ತದೆ. ವಾಲ್ಯ ಯೌವ್ವನ, ಮುಪ್ಪು ಹಾಗೂ ಕೊನೆಗೆ ಸಾವು. ಇವು ಜೀವಿತದಲ್ಲಿ ಸಂಭವಿಸುವ ಸಹಜ ಪ್ರಕ್ರಿಯೆಗಳು ಎಂದರು.
ಯುವಜನರು ಸಂಪಾದನೆಯ ಬೇಟೆಗೆ ಬಿದ್ದು ಊರು ತೊರೆದು ನಗರಗಳಿಗೆ ವಲಸೆ ಹೋಗಿ ವೃದ್ಧರನ್ನು ಅನಾಥಾಶ್ರಮಗಳಿಗೆ ಸೇರಿಸುವುದು ಹೆಚ್ಚುತ್ತಿದೆ. ಇದರಿಂದ ವೃದ್ಧರ ಗೋಳು ಹೇಳತೀರದು. ನಮ್ಮ ಬದುಕಿಗೆ ದಾರಿ ಮಾಡಿಕೊಟ್ಟ ಹಿರಿಯರ ಕೊನೆಗಾಲದ ಬದುಕನ್ನು ಹಸನುಗೊಳಿಸುವುದು ಪ್ರತಿಯೊಬ್ಬ ಯುವಜನರ ಆದ್ಯ ಕರ್ತವ್ಯ ಎಂದರು.
ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜ್ಯೋತಿ ಲಕ್ಷ್ಮಿ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಮುನಿರಾಜು, ಜಿಲ್ಲಾ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ತಿರುಮಲಪ್ಪ, ಕಾರ್ಯದರ್ಶಿ ಜಯರಾಮ್ ರೆಡ್ಡಿ, ಶಿಡ್ಲಘಟ್ಟ ಆಶಾಕಿರಣ ಅಂಗವಿಕಲ ಶಾಲೆ ಅಧ್ಯಕ್ಷ ಗೋಪಾಲ್ ಮತ್ತಿತರರು ಪಾಲ್ಗೊಂಡಿದ್ದರು.
ದೌರ್ಜನ್ಯ; 1090 ಸಹಾಯವಾಣಿ ಹಿರಿಯ ನಾಗರಿಕರಿಗೆ ಅವರ ಕುಟುಂಬದ ಸದಸ್ಯರು ಅಥವಾ ಇತರರು ದೌರ್ಜನ್ಯ ಅಥವಾ ಅನ್ಯಾಯ ಮಾಡಿದರೆ ಉಚಿತ ಸಹಾಯವಾಣಿ 1090 ಮೂಲಕ ಸಕ್ಷಮ ಪ್ರಾಧಿಕಾರದ ನೆರವು ಪಡೆಯಬೇಕು ಎಂದು ವೆಂಕಟೇಶರೆಡ್ಡಿ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.