ADVERTISEMENT

ಶಿಡ್ಲಘಟ್ಟ: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ನಗರಸಭೆಯ ಅಧ್ಯಕ್ಷರಾಗಿ ಸುಮಿತ್ರಾ ರಮೇಶ್, ಉಪಾಧ್ಯಕ್ಷ ಅಫ್ಸರ್ ಪಾಷ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 3:21 IST
Last Updated 27 ಏಪ್ರಿಲ್ 2021, 3:21 IST
ಶಿಡ್ಲಘಟ್ಟದ ನಗರಸಭೆಯ ಅಧ್ಯಕ್ಷರಾಗಿ ಸುಮಿತ್ರಾ ರಮೇಶ್ ಮತ್ತು ಉಪಾಧ್ಯಕ್ಷರಾಗಿ ಅಫ್ಸರ್ ಪಾಷ ಅವರ ಆಯ್ಕೆಯನ್ನು ಉಪವಿಭಾಗಾಧಿಕಾರಿ ರಘುನಂದನ್ ಘೋಷಣೆ ಮಾಡಿದರು
ಶಿಡ್ಲಘಟ್ಟದ ನಗರಸಭೆಯ ಅಧ್ಯಕ್ಷರಾಗಿ ಸುಮಿತ್ರಾ ರಮೇಶ್ ಮತ್ತು ಉಪಾಧ್ಯಕ್ಷರಾಗಿ ಅಫ್ಸರ್ ಪಾಷ ಅವರ ಆಯ್ಕೆಯನ್ನು ಉಪವಿಭಾಗಾಧಿಕಾರಿ ರಘುನಂದನ್ ಘೋಷಣೆ ಮಾಡಿದರು   

ಶಿಡ್ಲಘಟ್ಟ: ಹೈಕೋರ್ಟ್‌ ಆದೇಶದ ಮೇರೆಗೆ ಉಪವಿಭಾಗಾಧಿಕಾರಿ ರಘುನಂದನ್ ಅವರು ನಗರಸಭೆಯ ಅಧ್ಯಕ್ಷರಾಗಿ ಸುಮಿತ್ರಾ ರಮೇಶ್ ಮತ್ತು ಉಪಾಧ್ಯಕ್ಷರಾಗಿ ಅಫ್ಸರ್ ಪಾಷ ಅವರ ಆಯ್ಕೆಯನ್ನು ಅಧಿಕೃತವಾಗಿ ಸೋಮವಾರ ಘೋಷಿಸಿದರು.

ಕಳೆದ ವರ್ಷ ಅಕ್ಟೋಬರ್ 31ರಂದು ನಗರಸಭೆಯ ಅಧ್ಯಕ್ಷ ಮತ್ತುಉಪಾಧ್ಯಕ್ಷರ ಚುನಾವಣೆ ನಡೆದಿತ್ತು. ಆದರೆ ಹೈಕೋರ್ಟ್‌ ಆದೇಶದ ಮೇರೆಗೆ ಫಲಿತಾಂಶವನ್ನು ಪ್ರಕಟಿಸಿರಲಿಲ್ಲ. ಇದೀಗ ಹೈಕೋರ್ಟ್‌ನಿಂದ ಫಲಿತಾಂಶ ಪ್ರಕಟಿಸುವಂತೆ ನಿರ್ದೇಶನ ಬಂದಿರುವುದರಿಂದ ಪ್ರಕಟಿಸುತ್ತಿದ್ದೇವೆ ಎಂದು ಉಪವಿಭಾಗಾಧಿಕಾರಿ ರಘುನಂದನ್ ತಿಳಿಸಿದರು.

ಕಳೆದ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುಮಿತ್ರಾ ರಮೇಶ್ ಮತ್ತು ಕೃಷ್ಣಮೂರ್ತಿ ಸ್ಪರ್ಧಿಸಿದ್ದರು. ಕೃಷ್ಣಮೂರ್ತಿ ಅವರು 14 ಮತ ಪಡೆದಿದ್ದರೆ, ಸುಮಿತ್ರಾ ರಮೇಶ್ ಅವರು 17 ಮತ ಪಡೆದು ವಿಜೇತರಾಗಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಫ್ಸರ್ ಪಾಷ ಮತ್ತು ಎಸ್.ಎಂ.ಮಂಜುನಾಥ್ ಸ್ಪರ್ಧಿಸಿದ್ದರು. ಎಸ್.ಎಂ.ಮಂಜುನಾಥ್ ಅವರು 14 ಮತ ಪಡೆದಿದ್ದರೆ, ಅಫ್ಸರ್ ಪಾಷ ಅವರು 17 ಮತಗಳನ್ನು ಪಡೆದು ವಿಜೇತರಾಗಿದ್ದರು.

ADVERTISEMENT

‘ಕೊರೊನಾ ಬಾಧಿತವಾದ ಈ ಸಂದರ್ಭದಲ್ಲಿ ಎಲ್ಲ ನಗರಸಭೆಯ ಸದಸ್ಯರು ಮತ್ತು ಅಧಿಕಾರಿಗಳು ಒಗ್ಗೂಡಿ ಕೊರೊನಾ ನಿಯಂತ್ರಣಕ್ಕೆ ಶ್ರಮಿಸೋಣ. ನಗರದಲ್ಲಿ ಮೂಲ ಸೌಲಭ್ಯಗಳನ್ನು ಉತ್ತಮಪಡಿಸಲು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸೋಣ. ನಗರ ವ್ಯಾಪ್ತಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಲು ಎಲ್ಲ ಸದಸ್ಯರೂ ಕೈಜೋಡಿಸಬೇಕು ಎಂದು ನೂತನ ಅಧ್ಯಕ್ಷೆ ಸುಮಿತ್ರಾ ರಮೇಶ್ ಮತ್ತು ಉಪಾಧ್ಯಕ್ಷ ಅಫ್ಸರ್ ಪಾಷ ಮನವಿ ಮಾಡಿದರು.

ನಗರಸಭೆ ಪೌರಾಯುಕ್ತ ಶ್ರೀನಿವಾಸ್, ನಗರಸಭಾ ಸದಸ್ಯರು, ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.