ADVERTISEMENT

ಚಿಕ್ಕಬಳ್ಳಾಪುರ: ತ್ಯಾಜ್ಯ ವಿಲೇವಾರಿ- ನವೀಕರಣಕ್ಕೆ ಹಿಂದೇಟು

ಪರಿಸರ ಇಲಾಖೆಯಿಂದ ನೋಟಿಸ್ ನೀಡಿದರೂ ಕ್ಯಾರೆ ಎನ್ನದ ಆಸ್ಪತ್ರೆಗಳು

ಡಿ.ಎಂ.ಕುರ್ಕೆ ಪ್ರಶಾಂತ
Published 6 ಅಕ್ಟೋಬರ್ 2021, 4:48 IST
Last Updated 6 ಅಕ್ಟೋಬರ್ 2021, 4:48 IST

ಚಿಕ್ಕಬಳ್ಳಾಪುರ: ‘ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿಯ ಒಡಂಬಡಿಕೆ ನವೀಕರಣ ಮಾಡಿಕೊಳ್ಳದ ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದುಗೊಳಿಸಲಾಗುವುದು. ಈ ಸಂಬಂಧ ಜಿಲ್ಲಾ ಪರಿಸರ ಅಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕ್ರಮ ಕೈಗೊಳ್ಳಬೇಕು’– ಜುಲೈನಲ್ಲಿ ನಡೆದ ಜೈವಿಕ ತ್ಯಾಜ್ಯ ನಿರ್ವಹಣಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಹೀಗೆ ಗುಡುಗಿದ್ದರು.

ಆ ಸಭೆ ನಡೆದು ಮೂರು ತಿಂಗಳಾಗಿದೆ ಆದರೂ ಜಿಲ್ಲೆಯಲ್ಲಿ 64 ಕ್ಲಿನಿಕ್‌ಗಳು, ಆಸ್ಪತ್ರೆಗಳು ತ್ಯಾಜ್ಯ ವಿಲೇವಾರಿಯ ನವೀಕರಣವನ್ನು ಮಾಡಿಕೊಂಡಿಲ್ಲ. ಇವುಗಳಲ್ಲಿ ಡೆಂಟಲ್, ಆಯುರ್ವೇದ, ಹೋಮಿಯೊಪತಿ, ಹೆರಿಗೆ ಆಸ್ಪತ್ರೆಗಳು, ಸ್ಕ್ಯಾನಿಂಗ್ ಸೆಂಟರ್‌ಗಳು ಸೇರಿವೆ.

ಅಗತ್ಯ ದಾಖಲಾತಿಗಳನ್ನು ಪರಿಸರ ಇಲಾಖೆಗೆ ಸಲ್ಲಿಸಿ ತ್ಯಾಜ್ಯ ವಿಲೇವಾರಿ ಒಡಂಬಡಿಕೆನವೀಕರಣ ಮಾಡಿಕೊಳ್ಳಬೇಕು. ನಿಯಮಗಳನ್ನು ಪಾಲಿಸದಿದ್ದರೆ ಮೊದಲು ನೋಟಿಸ್ ನೀಡಬೇಕು. ನೋಟಿಸ್‌ಗೆ ಪ್ರತಿಕ್ರಿಯಿಸದಿದ್ದರೆ ಆಸ್ಪತ್ರೆಗಳ ಪರವಾನಗಿ ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದ್ದರು. ಹೀಗಿದ್ದರೂ ಕ್ಲಿನಿಕ್‌ಗಳು ನವೀಕರಣಕ್ಕೆ ಮುಂದಾಗುತ್ತಿಲ್ಲ.ಪ್ರತಿ ತಾಲ್ಲೂಕಿನಲ್ಲಿ ಜನರಿಗೆ ಚಿರಪರಿಚಿತವಾದ ಕ್ಲಿನಿಕ್‌ಗಳೇ ನವೀಕರಣ ಮಾಡಿಸಿಕೊಂಡಿಲ್ಲ.

ADVERTISEMENT

ಕೋಲಾರ ಮತ್ತು ಗೌರಿಬಿದನೂರಿನ ಸಂಸ್ಥೆಗೆ ತ್ಯಾಜ್ಯ ವಿಲೇವಾರಿಯ ಗುತ್ತಿಗೆಯನ್ನು ಜಿಲ್ಲೆಯಲ್ಲಿ ನೀಡಲಾಗಿದೆ.

ಸಲ್ಲದ ಸಬೂಬು: ಕ್ಲಿನಿಕ್‌ಗಳು ಬಾಗಿಲು ಮುಚ್ಚಿದ್ದರೆ ಅವುಗಳ ಒಡಂಬಡಿಕೆ ನವೀಕರಣ ಅಗತ್ಯವಿಲ್ಲ. ಆದರೆ ಇಂದಿಗೂ ಕ್ಲಿನಿಕ್‌ಗಳು ಬಾಗಿಲು ತೆರೆದು ಕಾರ್ಯನಿರ್ವಹಿಸುತ್ತಿವೆ. ಜನರು ಸಹ ಕ್ಲಿನಿಕ್‌ಗಳ ಬಳಿ ಸಾಲುಗಟ್ಟುತ್ತಿದ್ದಾರೆ. ಪ್ರಮುಖ ಕ್ಲಿನಿಕ್‌ಗಳೇ ತ್ಯಾಜ್ಯ ನಿರ್ವಹಣೆಯ ಒಡಂಬಡಿಕೆ ನವೀಕರಣಕ್ಕೆ ನಿರ್ಲಕ್ಷ್ಯವಹಿಸಿವೆ.

ಸಮಯ ಇರಲಿಲ್ಲ, ಒಡಂಬಡಿಕೆ ನವೀಕರಣದ ಬಗ್ಗೆ ಮರೆತು ಹೋಗಿತ್ತು, ಕೆಲದ ಒತ್ತಡ ಹೆಚ್ಚಿದೆ...ಹೀಗೆ ಸಲ್ಲದ ಸಬೂಬುಗಳನ್ನು ಕೆಲವು ಕ್ಲಿನಿಕ್‌ಗಳು ಹೇಳುತ್ತಿವೆ. ಕೆಲವು ಕ್ಲಿನಿಕ್‌ಗಳವರು ನೋಟಿಸ್ ನೀಡಿದ ನಂತರ ಎಚ್ಚೆತ್ತು ನವೀಕರಣಕ್ಕೆ ಮುಂದಾಗಿದ್ದಾರೆ ಎಂದು ಪರಿಸರ ಅಧಿಕಾರಿಗಳುತಿಳಿಸುವರು.

ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿಯೇ 23 ಕ್ಲಿನಿಕ್‌ಗಳು ಒಡಂಬಡಿಕೆಯನ್ನು ನವೀಕರಣ ಮಾಡಿಕೊಂಡಿಲ್ಲ. ನಂತರದ ಸ್ಥಾನ ಗೌರಿನಿದನೂರು ಮತ್ತು ಚಿಂತಾಮಣಿ ತಾಲ್ಲೂಕಿನ ಕ್ಲಿನಿಕ್‌ಗಳು ಇವೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.