ADVERTISEMENT

ಆಲಿಕಲ್ಲು ಮಳೆ: ಅಪಾರ ಬೆಳೆ ನಷ್ಟ

ಸರ್ಕಾರ ರೈತರ ನೆರವಿಗೆ ಧಾವಿಸಲಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 6:05 IST
Last Updated 26 ಏಪ್ರಿಲ್ 2021, 6:05 IST
ಚಿಂತಾಮಣಿ ತಾಲ್ಲೂಕಿನ ನೆರ್ನಕಲ್ಲು ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಆಲಿಕಲ್ಲು ಮಳೆಗೆ ನೆಲ ಕಚ್ಚಿರುವ ತೋಟ
ಚಿಂತಾಮಣಿ ತಾಲ್ಲೂಕಿನ ನೆರ್ನಕಲ್ಲು ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಆಲಿಕಲ್ಲು ಮಳೆಗೆ ನೆಲ ಕಚ್ಚಿರುವ ತೋಟ   

ಚಿಂತಾಮಣಿ: ತಾಲ್ಲೂಕಿನ ಕೈವಾರ ಹೋಬಳಿಯ ನೆರ್ನಕಲ್ಲು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಶನಿವಾರ ರಾತ್ರಿ ಬಿರುಗಾಳಿ, ಆಲಿಕಲ್ಲಿನ ಮಳೆಯಿಂದ ರೈತರ ನೂರಾರು ತೋಟಗಳು ನೆಲಕಚ್ಚಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ರೈತರ ತೋಟಗಳಲ್ಲಿ ಬೆಳೆದು ನಿಂತಿದ್ದ ಟೊಮೆಟೊ, ಮಾವು, ತರಕಾರಿ ಬೆಳೆಗಳು ಹಾಳಾಗಿರುವುದರಿಂದ ಸಾಲ ಮಾಡಿ ಬೆಳೆ ಬೆಳೆದಿದ್ದ ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಮಾವಿನ ತೋಟಗಳಲ್ಲಿ ಕಾಯಿಗಳು ಉದುರಿವೆ. ಆಲಿಕಲ್ಲುಗಳಿಂದ ಮರಗಳಲ್ಲಿರುವ ಕಾಯಿಗಳಿಗೂ ಹಾನಿಯಾಗಿರುವುದರಿಂದ ರೈತರು ಆತಂಕಕ್ಕೆ ಕಾರಣವಾಗಿದೆ.

ಟೊಮೆಟೊ ಮತ್ತು ವಿವಿಧ ತರಕಾರಿ ಬೆಳೆಗಳು ಸಂಪೂರ್ಣವಾಗಿ ನೆಲಕ್ಕೆ ಉರುಳಿಬಿದ್ದಿವೆ. ನೆರನಕಲ್ಲು ಗ್ರಾಮದ ರೈತ ರಾಮಶೆಟ್ಟಿ 1 ಎಕರೆ ಸೋರೆಗಿಡ, 1 ಎಕರೆ ಸಿಕ್ಕಡಿ ಕಾಯಿ, 2 ಎಕರೆಯಲ್ಲಿ ನುಗ್ಗೆ ಬೆಳೆದಿದ್ದರು. ಸೋರೆಕಾಯಿ ಮತ್ತು ಸಿಕ್ಕಡಿ ಕಾಯಿ ಬೆಳೆ ಫಸಲು ಆರಂಭವಾಗಿತ್ತು. ನುಗ್ಗೆಕಾಯಿ ಕೀಳುವ ಹಂತಕ್ಕೆ ಬಂದಿತ್ತು. ರಾತ್ರೋರಾತ್ರಿ ಇಡೀ ತೋಟ ನೆಲ ಕಚ್ಚಿದ್ದು ಮುಂದೇನು ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ADVERTISEMENT

ಒಟ್ಟು 4 ಎಕರೆಗೆ ಬಿತ್ತನೆ ಬೀಜ, ಗೊಬ್ಬರ, ಕೂಲಿ, ಕೀಟನಾಶಕಗಳು ಸೇರಿ ಸುಮಾರು ₹5 ಲಕ್ಷ ಖರ್ಚಾಗಿದೆ. ಖಾಸಗಿಯಾಗಿ ಸಾಲವನ್ನು ಮಾಡಿದ್ದೇನೆ. ಈಗ ಬೆಳೆ ಸಂಪೂರ್ಣ ಹಾಳಾಗಿದೆ. ಕೈಗೆ ಬದ ತುತ್ತು ಬಾಯಿಗೆ ಇಲ್ಲವಾಗಿದೆ ಎಂದು ರಾಮಶೆಟ್ಟಿ ಅಳಲನ್ನು ತೋಡಿಕೊಂಡರು.

ತೋಟಗಾರಿಕೆ ಮತ್ತು ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ತೋಟಗಳನ್ನು ಪರಿಶೀಲಿಸಿ ಪ್ರಕೃತಿ ವಿಕೋಪದಡಿ ಶೀಘ್ರವಾಗಿ ಪರಿಹಾರವನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.

ನೆರ್ನಕಲ್ಲು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಬಿರುಗಾಳಿ ಮತ್ತು ಆಲಿಕಲ್ಲುಗಳಿಂದ 1 ಗಂಟೆ ಕಾಲ ಮಳೆ ಸುರಿಯಿತು. ಮಳೆಗಿಂತ ಗಾಳಿ ಮತ್ತು ಆಲಿಕಲ್ಲುಗಳು ಆರ್ಭಟ ಹೆಚ್ಚಾಗಿತ್ತು. ಈ ವರ್ಷ ಮಾವಿನ ತೋಟಗಳ ರೈತರು ಕೈಸುಟ್ಟುಕೊಳ್ಳುವುದು ಖಂಡಿತ ಎಂದು ರೈತ ಕೃಷ್ಣಪ್ಪ ಆತಂಕ
ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.