ವೈದ್ಯರು
(ಪ್ರಾತಿನಿಧಿಕ ಚಿತ್ರ)
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಎಲ್ಲಾ ಖಾಸಗಿ ಆರೋಗ್ಯ ಸಂಸ್ಥೆಗಳು ತಮ್ಮ ಸಂಸ್ಥೆಯನ್ನು ಕಡ್ಡಾಯವಾಗಿ ಕೆಪಿಎಂಇ ಕಾಯ್ದೆಯಡಿ ನೋಂದಣಿ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆ.ಪಿ.ಎಂ.ಇ ಹಾಗೂ ಪಿಸಿ ಮತ್ತು ಪಿ.ಎನ್.ಡಿ.ಟಿ ನೋಂದಣಿ ಹಾಗೂ ಕುಂದುಕೊರತೆ ನಿವಾರಣಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಯಾವುದೇ ಆಸ್ಪತ್ರೆ, ಕ್ಲಿನಿಕ್‌ಗಳು ಸರ್ಕಾರದ ಮಾರ್ಗಸೂಚಿ ಅನ್ವಯ ದಾಖಲೆಗಳನ್ನು ಸಲ್ಲಿಸದೆ ಅಥವಾ ನೋಂದಣಿ ಪಡೆಯದೆ ಕಾರ್ಯನಿರ್ವಹಿಸುತ್ತಿದ್ದಲ್ಲಿ ಅಂತಹ ಸಂಸ್ಥೆಗಳ ಹಾಗೂ ವೈದ್ಯರ ವಿರುದ್ಧ ಕೆಪಿಎಂಇ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಇತ್ತೀಚಿಗೆ ನಕಲಿ ವೈದ್ಯರು, ಕ್ಲಿನಿಕ್‌ಗಳ ಹಾವಳಿ ಹೆಚ್ಚಾಗಿದೆ. ಸಾರ್ವಜನಿಕರ ಆರೋಗ್ಯದೊಂದಿಗೆ ಚಲ್ಲಾಟವಾಗುತ್ತಿರುವ ನಕಲಿ ವೈದ್ಯರನ್ನು ಗುರ್ತಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು. ಕೆಪಿಎಂಇ ಕಾಯ್ದೆ ಅಡಿ ನೋಂದಣಿಯಾಗದೆ ಕ್ಲಿನಿಕ್ ನಡೆಸುತ್ತಿರುವ ವೈದ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್. ಮಹೇಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 305 ಆರೋಗ್ಯ ಸಂಸ್ಥೆಗಳು ನೋಂದಣಿಯಾಗಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಾದ್ಯಂತ 40ಕ್ಕೂ ಹೆಚ್ಚು ನಕಲಿ ವೈದ್ಯರನ್ನು ಗುರ್ತಿಸಲಾಗಿದೆ ಎಂದು ಹೇಳಿದರು.
ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ನಕಲಿ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಲಾಗಿದೆ. ನಕಲಿ ವೈದ್ಯರನ್ನು ಕಾನೂನು ಕ್ರಮಕ್ಕೆ ಒಳಪಡಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರರೆಡ್ಡಿ, ಜಿಲ್ಲಾ ಐಎಂಎ ಅಧ್ಯಕ್ಷ ಡಾ. ಅನಂತು, ಜಿಲ್ಲಾ ಆಯುಷ್ ಅಧಿಕಾರಿ ಡಾ. ತಬೀಬಾ ಬಾನು, ತಾಲ್ಲೂಕು ಆರೋಗ್ಯಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.