ADVERTISEMENT

‘ಬ್ಯಾಂಕ್‌ಗಳಿಂದ ಸಾಲಸೌಲಭ್ಯ ಕಲ್ಪಿಸಿ’

ಸರ್ಕಾರಕ್ಕೆ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 5:51 IST
Last Updated 26 ನವೆಂಬರ್ 2025, 5:51 IST
ಬಾಗೇಪಲ್ಲಿ ತಾಲ್ಲೂಕು ಪತ್ರಕರ್ತರ ಸಂಘದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ
ಬಾಗೇಪಲ್ಲಿ ತಾಲ್ಲೂಕು ಪತ್ರಕರ್ತರ ಸಂಘದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ   

ಬಾಗೇಪಲ್ಲಿ: ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ ಮತ್ತು ಇನ್ನಿತರ ಸಂಘ ಸಂಸ್ಥೆಗಳ ಮೂಲಕ ರೈತರಿಗೆ ಸಾಲ ಸೌಲಭ್ಯ ಕಲ್ಪಿಸಬೇಕು. ಕೃಷಿ ಭೂಮಿ ಸ್ವಾಧೀನ ಕೈಬಿಡಬೇಕು. ತಾಲ್ಲೂಕಿನ ಕೃಷ್ಣಾ ನದಿ ನೀರು ಹರಿಸುವುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳು ಮತ್ತು ರೈತರ ಸಮಸ್ಯೆಗಳ ಪರವಾಗಿ ಸಂಘಟಿತ ಹೋರಾಟ ಮಾಡುವ ಬಗ್ಗೆ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಮಟ್ಟದ 14ನೇ ಸಮ್ಮೇಳನದಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಯಿತು. 

ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಾಂತ ರೈತ ಸಂಘದ ನೂತನ ಅಧ್ಯಕ್ಷ ಡಿ.ಸಿ. ಶ್ರೀನಿವಾಸ್, ‘ಬಗರ್‌ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಬೇಕು. 30 ವರ್ಷಗಳಿಂದ ಸರ್ಕಾರಿ ಭೂಮಿ ಉಳುಮೆ ಮಾಡುವ ರೈತರು ಸಕ್ರಮಕ್ಕಾಗಿ 50,53 ಮತ್ತು 57ರಡಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ, ಅವರಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಅವರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು’ ಎಂದು ಒತ್ತಾಯಿಸಿದರು. 

ಅರಣ್ಯ ಭೂಮಿ ಸಾಗುವಳಿ ಮಾಡುವ ರೈತರ ಮೇಲೆ ದೌರ್ಜನ್ಯ ನಿಲ್ಲಿಸಬೇಕು. ರೈತರ ಮೇಲೆ ಹೇರಲಾದ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ವಿದ್ಯುತ್ ಖಾಸಗೀಕರಣವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದರು. 

ADVERTISEMENT

ಕೃಷಿ ಉಳಿವಿಗಾಗಿ ಕೃಷಿ ತಜ್ಞ ಸ್ವಾಮಿನಾಥನ್ ಅವರ ವರದಿ ಜಾರಿಗೊಳಿಸಬೇಕು. ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್, ಸಂಘಗಳಲ್ಲಿ ಬಡ್ಡಿರಹಿತ ಸಾಲ ಸೌಲಭ್ಯ ನೀಡಬೇಕು. ಸಹಕಾರ ಬ್ಯಾಂಕುಗಳಲ್ಲಿ ಆಗಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. 

ಸಂಘದ ತಾಲ್ಲೂಕು ಕಾರ್ಯದರ್ಶಿ ಡಿ.ಟಿ.ಮುನಿಸ್ವಾಮಿ ಮಾತನಾಡಿ, ಶಾಶ್ವತ ನೀರಾವರಿಗಾಗಿ ಕೃಷ್ಣಾ ನದಿ ನೀರು ಹರಿಸಬೇಕು. ಬೆಂಗಳೂರಿನ ಎಚ್.ಎನ್.ವ್ಯಾಲಿಯ ನೀರನ್ನು 2 ಹಂತದಲ್ಲಿ ಶುದ್ಧೀಕರಿಸಿದ ನೀರನ್ನು 3ನೇ ಹಂತದಲ್ಲಿ ಸಂಸ್ಕರಿಸಿ ಕೆರೆಗಳಿಗೆ ಹರಿಸಬೇಕು ಎಂದು ಹೇಳಿದರು.

ನೂತನ ಪದಾಧಿಕಾರಿಗಳು

ದೇವಿಕುಂಟೆ ಡಿ.ಸಿ. ಶ್ರೀನಿವಾಸ್– ಅಧ್ಯಕ್ಷ ಹೊಸಹುಡ್ಯ ರಘುರಾಮ್ ದೇವರೆಡ್ಡಿಪಲ್ಲಿ ಆನಂದರೆಡ್ಡಿ ಮದ್ದಲಖಾನ ಎಂ.ಎನ್.ರಘುರಾಮರೆಡ್ಡಿ– ಉಪಾಧ್ಯಕ್ಷರು ಡಿ.ಟಿ.ಮುನಿಸ್ವಾಮಿ– ಕಾರ್ಯದರ್ಶಿ ಗೂಳೂರು ಚಿನ್ನಪ್ಪಯ್ಯ ಉಪ್ಪಾರ್ಲಪಲ್ಲಿ ರಾಮು ತೋಳ್ಳಪಲ್ಲಿ ವೆಂಕಟರಾಮಪ್ಪ– ಸಹ ಕಾರ್ಯದರ್ಶಿಗಳು ಬಾಗೇಪಲ್ಲಿ ಟೌನ್ ಜಿ. ಕೃಷ್ಣಪ್ಪ– ಖಜಾಂಚಿ ಬಾಗೇಪಲ್ಲಿ ನರಸಿಂಹರೆಡ್ಡಿ ಮರಸನಪಲ್ಲಿ ನಾರಾಯಣಸ್ವಾಮಿ ಮಾಮಿಡಿಕಾಯಲಪಲ್ಲಿ ಚಿನ್ನಾಗಪ್ಪ ಕಾಪುಚಿನ್ನೇಪಲ್ಲಿ ಸೋಮಶೇಖರ ರೆಡ್ಡಿ ಸುಧಾಕರ ಪುಟ್ಟಪರ್ತಿ ಸದಾಶಿವ ತೋಳ್ಳಪಲ್ಲಿ ಕಾಲೊನಿ ವೆಂಕಟನರಸಪ್ಪ ಜೋಗಿರೆಡ್ಡಿಪಲ್ಲಿ ರಾಮಚಂದ್ರ ದೇವಿಕುಂಟೆ ಆದಿನಾರಾಯಣ ನೀರಗಂಟಿಪಲ್ಲಿ ವೆಂಕಟರಾಮರೆಡ್ಡಿ ಗುರ್ರಾಲದಿನ್ನೆ ವೆಂಕಟರೆಡ್ಡಿ ಬಾಗೇಪಲ್ಲಿ ಡಿ. ನರಸಿಂಹಮೂರ್ತಿ ಅವರು ಸಮಿತಿ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.