ADVERTISEMENT

ರೈತ ಸಂಘ ಬೆಳೆಸಿದ್ದ ಗಿಡಗಳಿಗೆ ಬೆಂಕಿ

ದುಷ್ಕರ್ಮಿಗಳ ಕೃತ್ಯ: ನೂರಾರು ಗಿಡಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2022, 6:07 IST
Last Updated 20 ಫೆಬ್ರುವರಿ 2022, 6:07 IST
ಶಿಡ್ಲಘಟ್ಟದ ರೈಲ್ವೆ ನಿಲ್ದಾಣ ಬಳಿ ರೈಲ್ವೆಗೆ ಸೇರಿರುವ ಏಳು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗಿಡಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ
ಶಿಡ್ಲಘಟ್ಟದ ರೈಲ್ವೆ ನಿಲ್ದಾಣ ಬಳಿ ರೈಲ್ವೆಗೆ ಸೇರಿರುವ ಏಳು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗಿಡಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ   

ಶಿಡ್ಲಘಟ್ಟ: ನಗರದ ರೈಲು ನಿಲ್ದಾಣದ ಬಳಿ ರೈಲ್ವೆ ಇಲಾಖೆಗೆ ಸೇರಿರುವ ಸುಮಾರು ಏಳು ಎಕರೆ ಪ್ರದೇಶದಲ್ಲಿ ಕೆ.ವಿ. ಟ್ರಸ್ಟ್‌ನ ಹಿರಿಯ ವಿದ್ಯಾರ್ಥಿಗಳು, ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಒಂದು ಸಾವಿರ ಗಿಡ ನೆಟ್ಟಿದ್ದರು. ಸುಮಾರು ಎರಡು ವರ್ಷಗಳಾಗಿರುವ ಈ ಗಿಡಗಳು ಭವಿಷ್ಯದಲ್ಲಿ ನಗರದ ಆಮ್ಲಜನಕ ಉತ್ಪಾದಿಸುವ ಹಸಿರ ಕಾಡಾಗಬೇಕು ಎಂಬ ಅವರ ಆಶಯಕ್ಕೆ ಈಗ ಕಂಟಕ ಎದುರಾಗಿದೆ.

ಕಿಡಿಗೇಡಿಗಳು ಅಲ್ಲಿ ಒಣಹುಲ್ಲಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಅನೇಕ ಗಿಡಗಳಿಗೆ ಹಾನಿಯಾಗಿದೆ. ಈ ಭಾಗದ ಜನರು ತಂದು ಸುರಿಯುವ ತ್ಯಾಜ್ಯ, ಮಲ, ಮೂತ್ರ ವಿಸರ್ಜನೆಗೆ ಬರುವವರು, ಬೀಡಿ ಸೇದುವವರು ಹಾಕುವ ಬೆಂಕಿ ಗಿಡಗಳ ಪೋಷಣೆಗೆ ಅಡ್ಡಿಯಾಗಿದೆ.

‘ಹಿಂದೆ ಹಲವು ಎಕರೆಗಳಷ್ಟು ರೈಲ್ವೆ ಜಾಗ ಖಾಲಿಯಾಗಿತ್ತು. ಅದರಲ್ಲಿ ಊರ ಕಸ ಸುರಿಯಲಾಗುತ್ತಿತ್ತು. ನಿರ್ವಹಣೆ ಇಲ್ಲದ ಆ ಸ್ಥಳದಲ್ಲಿ ಕಳೆ ಗಿಡಗಳು, ಮುಳ್ಳುಕಂಟಿಗಳೆಲ್ಲಾ ಬೆಳೆದಿದ್ದವು. ಜೆಸಿಬಿ ಬಳಸಿ ಕಸ ತೆಗೆದವು. ಗಿಡ ತರಲು ಹಣ ಬೇಕಿತ್ತು. ರೈತ ಸಂಘದವರು ನೆರವಾದರು’ ಎಂದುಮುಖಂಡ ಪಿ.ಎಸ್. ಅನಿಲ್ ಕುಮಾರ್ ತಿಳಿಸಿದರು.

ADVERTISEMENT

‘ಗಿಡಗಳನ್ನು ದತ್ತು ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯಿತು. ನನ್ನೊಂದಿಗೆ ಓದಿದ ಕೆ.ವಿ. ಟ್ರಸ್ಟ್‌ನ ಹಳೆ ವಿದ್ಯಾರ್ಥಿಗಳು ಜತೆಗೂಡಿದರು. ರೈಲ್ವೆ ಅಧಿಕಾರಿ ಅನುಮತಿ ನೀಡಿದರು. ಹಾಗಾಗಿ, 2019ರ ಆ. 25ರಂದು ಮೊದಲ ಹಂತವಾಗಿ 300 ಸಸಿಗಳನ್ನು ನೆಡಲಾಯಿತು. ನವೆಂಬರ್‌ನಲ್ಲಿ 700 ಗಿಡಗಳನ್ನು ನೆಡಲಾಗಿದೆ’ ಎಂದರು.

‘ಚರಂಡಿ ನೀರನ್ನು ಶೇಖರಿಸಿ, ಅದನ್ನು ಶುದ್ಧೀಕರಿಸಿ ಗಿಡಗಳಿಗೆ ಹಾಯಿಸಲಾಗುತ್ತದೆ. ಗಿಡಗಳು ಸೊಂಪಾಗಿ ಬೆಳೆದಿದ್ದವು. ಎಳೆಯ ಗಿಡಗಳನ್ನು ಕೆಲವರು ಮುರಿದರೆ, ಮೇಕೆ, ಕುರಿ ಮೇಯಿಸುವವರಿಂದ ಕೆಲವು ಗಿಡಗಳನ್ನು ನಾವು ಕಳೆದುಕೊಳ್ಳಬೇಕಾಯಿತು. ಪೈಪ್‌ಲೈನ್‌ಗಳು, ಹಸು, ಎಮ್ಮೆಗಳ ಓಡಾಟದಿಂದ ಹಾಳಾಗುತ್ತಿದ್ದವು. ಇಷ್ಟಾದರೂ ನಾವು ಹಾಕಿದವುಗಳಲ್ಲಿ ಶೇ 85ರಷ್ಟು ಗಿಡಗಳನ್ನು ಉಳಿಸಿಕೊಂಡಿದ್ದೇವೆ ಎಂಬ ಖುಷಿ ಇದೆ. ಈಗ ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದ ನಮಗೆ ತುಂಬಾ ನೋವಾಗಿದೆ’ ಎಂದು ಹೇಳಿದರು.

‘ಸಂಸದ ಮುನಿಸ್ವಾಮಿ ಈ ಕಾರ್ಯ ಮೆಚ್ಚಿ, ಈ ಗಿಡಗಳ ಭದ್ರತೆಗೆ ಕಾಂಪೌಂಡ್ ನಿರ್ಮಿಸಲು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದರು. ರೈಲ್ವೆಯವರು ಕಾಂಪೌಂಡ್ ಮಾಡಿಸುವುದಾಗಿ ಭರವಸೆ ನೀಡಿದ್ದರು. ಇಲ್ಲಿ ತ್ಯಾಜ್ಯ ಹಾಕುವುದು, ಅನಗತ್ಯವಾಗಿ ಓಡಾಡುವುದನ್ನು ತಡೆಯಬೇಕಿದೆ. ಈಗ ರೈತ ಸಂಘದ ಮುಖಂಡರೊಂದಿಗೆ ರೈಲ್ವೆ ಅಧಿಕಾರಿಗಳು ಭೇಟಿ ಮಾಡಿ ಇಲ್ಲಿನ ಪರಿಸ್ಥಿತಿ ವಿವರಿಸುತ್ತೇವೆ. ನಾವು ಕಷ್ಟಪಟ್ಟು ಗಿಡಗಳನ್ನು ಬೆಳೆಸುತ್ತಿ ರುವುದು ಊರಿನ ಅಭಿವೃದ್ಧಿಯ ಭಾಗವಾಗಿಎಂಬುದನ್ನು ಅರಿಯಬೇಕು’ ಎಂದು ರೈತ ಮುಖಂಡ ಉಲ್ಲೂರುಪೇಟೆ ದೇವರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.