ADVERTISEMENT

ಡಿ.23ರಂದು ರೈತರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 11:47 IST
Last Updated 19 ಡಿಸೆಂಬರ್ 2019, 11:47 IST

ಚಿಕ್ಕಬಳ್ಳಾಪುರ: ‘ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಡಿ.23ರಂದು ಮಂಡ್ಯ ಜಿಲ್ಲೆಯ ಭಾರತಿ ನಗರದಲ್ಲಿ ರೈತರ ಬೃಹತ್ ಸಮಾವೇಶ ಹಾಗೂ ಕಾಯಕ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಷ್ಟ್ರದಾದ್ಯಂತ ಡಿ.23 ರಂದು ಚೌಧರಿ ಚರಣ್ ಸಿಂಗ್ ಅವರ ಹುಟ್ಟುಹಬ್ಬವನ್ನು ವಿಶ್ವ ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ. ಹಾಗಾಗಿ ಅಂದು ವಿಶ್ವ ರೈತ ದಿನಾಚರಣೆ ಹಾಗೂ ರೈತ ನಾಯಕರಾದ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಮತ್ತು ಎನ್.ಡಿ.ಸುಂದರೇಶ್ ಅವರ ನೆನಪಿನ ದಿನಾಚರಣೆ ಮತ್ತು ರೈತರ ಸಮಾವೇಶ ಏರ್ಪಡಿಸಲಾಗಿದೆ’ ಎಂದು ಹೇಳಿದರು.

‘ರಾಜ್ಯದ ವಿವಿಧ ಕ್ಷೇತ್ರದಲ್ಲಿ ದುಡಿದು ಸಮಾಜಕ್ಕೆ ಕೊಡುಗೆ ನೀಡಿರುವ 100 ಮಹಿಳೆಯರಿಗೆ ಸಮಾವೇಶದಲ್ಲಿ ಕಾಯಕ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಸಮಾವೇಶದಲ್ಲಿ ಬಯಲುಸೀಮೆ ಭಾಗಕ್ಕೆ ತ್ವರಿತಗತಿಯಲ್ಲಿ ಎತ್ತಿನಹೊಳೆ ಯೋಜನೆ ಹಾಗೂ ಕೃಷ್ಣಾ ನದಿ ನೀರಿನ ಪಾಲನ್ನು ಜಿಲ್ಲೆಗೆ ಹರಿಸಲು ಕ್ರಮಕೈಗೊಳ್ಳಬೇಕು. ಸೇರಿದಂತೆ ರೈತರ ಹಲವು ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದರು.

ADVERTISEMENT

ರೈತಸಂಘದ ರಾಜ್ಯ ವಿಭಾಗೀಯ ಮಟ್ಟದ ಪ್ರಧಾನ ಕಾರ್ಯದರ್ಶಿ ಯಾಕುಬ್ ಷರೀಫ್ ಮಾತನಾಡಿ, ‘ಕೃಷ್ಣಾ ನದಿ ನೀರನ್ನು ಈಗಾಗಲೇ ಜಿಲ್ಲೆಯ ಗಡಿ ಅಂಚಿನಲ್ಲಿರುವ ಆಂಧ್ರಪ್ರದೇಶದ ರೈತರು ಕೃಷಿಗೆ ಬಳಕೆ ಮಾಡುತ್ತಿದ್ದಾರೆ. ಆದರೆ, ಜಿಲ್ಲೆಗೆ ಕೃಷ್ಣಾ ನದಿ ನೀರು ತರವಲ್ಲಿ ನಮ್ಮ ಜನಪ್ರತಿನಿಧಿಗಳು ಪ್ರಯತ್ನ ಮಾಡದೇ ಸ್ವಾರ್ಥ ರಾಜಕಾರಣ ಮಾಡುತ್ತ, ಚುನಾವಣೆಗಳಲ್ಲಿ ಹಣ ಸುರಿದು ಅಧಿಕಾರಕ್ಕೆ ಬರುತ್ತಿದ್ದಾರೆ. ಅವರು ಜಿಲ್ಲೆಯ ರೈತರ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ. ರೈತರ ಜೀವನ ಸುಧಾರಣೆ ಆಗದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಸಂಘದಿಂದಲೇ ಚುನಾವಣೆಗಳನ್ನು ಎದುರಿಸಲಾಗುವುದು’ ಎಂದು ಹೇಳಿದರು. ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.