ADVERTISEMENT

ಚಿಕ್ಕಬಳ್ಳಾಪುರ: ಗೊಬ್ಬರಕ್ಕಾಗಿ ಸಾಲುಗಟ್ಟಿ ನಿಂತ ರೈತರು

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 6:37 IST
Last Updated 9 ಜೂನ್ 2021, 6:37 IST
ಗೊಬ್ಬರಕ್ಕಾಗಿ ಸರದಿಯಲ್ಲಿ ನಿಂತ ರೈತರು
ಗೊಬ್ಬರಕ್ಕಾಗಿ ಸರದಿಯಲ್ಲಿ ನಿಂತ ರೈತರು   

ಚಿಕ್ಕಬಳ್ಳಾಪುರ: ರಸಗೊಬ್ಬರಕ್ಕಾಗಿ ಇಲ್ಲಿನ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘದ ಅಂಗಡಿ ಮುಂದೆ ರೈತರು ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದಾರೆ. ಈ ವೇಳೆ ಅಂತರ ಸಹ ಕಾಯ್ದುಕೊಂಡಿರಲಿಲ್ಲ. ಆರಂಭದಲ್ಲಿ ಗೊಬ್ಬರ ಖರೀದಿಗಾಗಿ ನೂಕು ನುಗ್ಗಲು ಇತ್ತು.

ಸ್ಥಳಕ್ಕೆ ಬಂದ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಡಿವೈಎಸ್‌ಪಿ ರವಿಶಂಕರ್ ಹಾಗೂ ಪೊಲೀಸ್ ಸಿಬ್ಬಂದಿ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದರು. ಖರೀದಿಗೆ ಬಂದ ಎಲ್ಲ ರೈತರಿಗೂ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಿಸಿದ ನಂತರ ಟೋಕನ್ ನೀಡಿ ಗೊಬ್ಬರ ವಿತರಿಸಲಾಯಿತು.

ಡಿಎಪಿ ಗೊಬ್ಬರಕ್ಕಾಗಿ ಬೆಳಿಗ್ಗೆಯಿಂದ ಕಾಯುತ್ತಿದ್ದೇವೆ. ಬೆಳಿಗ್ಗೆ ಐದು ಮೂಟೆ ಕೊಡುತ್ತಿದ್ದರಂತೆ. ಈಗ ಎರಡು ಮೂಟೆ ಕೊಡುತ್ತಿದ್ದಾರೆ ಎಂದು ರೈತ ವೆಂಕಟೇಶ್ ಹೇಳಿದರು.

ADVERTISEMENT

ಮೂರ್ನಾಲ್ಕು ರಸಗೊಬ್ಬರ ಅಂಗಡಿಗಳಲ್ಲಿ ವಿಚಾರಿಸಿದೆವು. ಅಲ್ಲಿ ಗೊಬ್ಬರ ದೊರೆಯಲಿಲ್ಲ. ಕೆಲವು ಕಡೆ ಇದ್ದರೂ ಒಂದು ಮೂಟೆ ಡಿಎಪಿಗೆ ₹ 1,900 ಹೇಳುತ್ತಿದ್ದಾರೆ. ಇಲ್ಲಿ ₹ 1,200 ಇದೆ. ಒಂದು ಚೀಲಕ್ಕೆ ₹ 500 ಕಡಿಮೆ ಆಗುತ್ತದೆ ಎಂದು ಇಲ್ಲಿಗೆ ಬಂದಿದ್ದೇವೆ ಎಂದು ರೈತ ರಮೇಶ್ ತಿಳಿಸಿದರು.

ಜಿಲ್ಲೆಯ ಪ್ರಸಕ್ತ ಮುಂಗಾರು ಬೆಳೆಗಳಿಗೆ 29,000 ಟನ್ ರಸಗೊಬ್ಬರಕ್ಕೆ ಬೇಡಿಕೆ ಇದೆ. ಸದ್ಯ 5,530.13 ಟನ್ ರಸಗೊಬ್ಬರ ಲಭ್ಯವಿದೆ.

ಮುಂಗಾರು ಬೆಳೆಗಳಿಗೆ ಅಗತ್ಯವಾದ ಯೂರಿಯಾ, ಡಿಎಪಿ, ಎಂಒಪಿ, ಎಸ್‌ಎಸ್‌ಪಿ ಹಾಗೂ ಎನ್‌ಪಿಕೆ ಕಾಂಪ್ಲೆಕ್ಸ್ ರಸಗೊಬ್ಬರವನ್ನು ದಾಸ್ತಾನಿಡಲಾಗಿದೆ. ಮಾರಾಟ ಮಂಡಳದಲ್ಲಿ 555.95 ಟನ್, ಸಹಕಾರ ಸಂಘಗಳಲ್ಲಿ 611.12 ಟನ್ ಹಾಗೂ ರಸಗೊಬ್ಬರ ಖಾಸಗಿ ಮಾರಾಟ ಅಂಗಡಿಗಳಲ್ಲಿ 4,363.06 ಟನ್ ರಸಗೊಬ್ಬರ ಸದ್ಯ ಲಭ್ಯವಿದೆ. ಮುಂಗಾರು ಚಟುವಟಿಕೆಗಳು ಆರಂಭವಾದ ತರುವಾಯ ಮತ್ತಷ್ಟು ಗೊಬ್ಬರ ಜಿಲ್ಲೆಗೆ ಬರಲಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.