ADVERTISEMENT

ಕುಡಿಯುವ ನೀರಿಗೂ ರೈತರ ಪರದಾಟ

ಚಿಕ್ಕಬಳ್ಳಾಪುರ ತಾಲ್ಲೂಕಿನ ವರದಹಳ್ಳಿಯ ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 2:36 IST
Last Updated 3 ಮಾರ್ಚ್ 2021, 2:36 IST
ರಾಗಿ ಖರೀದಿ ಕೇಂದ್ರದ ಬಳಿ ಸಾಲುಗಟ್ಟಿರುವ ಟ್ರ್ಯಾಕ್ಟರ್‌ಗಳು
ರಾಗಿ ಖರೀದಿ ಕೇಂದ್ರದ ಬಳಿ ಸಾಲುಗಟ್ಟಿರುವ ಟ್ರ್ಯಾಕ್ಟರ್‌ಗಳು   

ಚಿಕ್ಕಬಳ್ಳಾಪುರ: ತಾಲ್ಲೂಕಿನ ವರದಹಳ್ಳಿಯ ಗೋದಾಮಿನಲ್ಲಿ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರ ತೆರೆದಿದೆ. ಆದರೆ ಇಲ್ಲಿಗೆ ರಾಗಿ ಮಾರಾಟಕ್ಕೆ ಬರುವ ರೈತರಿಗೆ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಖರೀದಿ ಕೇಂದ್ರಗಳಲ್ಲಿ ಕಾರ್ಮಿಕರ ಸಂಖ್ಯೆಯೂ ಕಡಿಮೆ ಇದೆ. ಟ್ರಾಕ್ಟರ್‌ಗಳಲ್ಲಿ ಬರುವ ರಾಗಿ ಇಳಿಸಲು ಗಂಟೆಗಟ್ಟಲೇ ಕಾಯಬೇಕಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

‘ನಾವು ಬೆಳಿಗ್ಗೆ 6ಕ್ಕೆ ಖರೀದಿ ಕೇಂದ್ರ ಬಳಿ ಬಂದಿದ್ದೇವೆ. ಇಲ್ಲಿಂದ ಚಿಕ್ಕಬಳ್ಳಾಪುರಕ್ಕೆ ವೇಬ್ರಿಡ್ಜ್‌ ಮಾಡಿಕೊಂಡಿ 12ಕ್ಕೆ ಮರಳಿ ಬಂದೆವು. ಮೂರೂವರೆ ಆದರೂ ನಮ್ಮ ಟ್ರ್ಯಾಕ್ಟರ್‌ನಿಂದ ರಾಗಿ ಇಳಿಸಿಲ್ಲ. ಇನ್ನೂ 50ರಿಂದ 60 ಗಾಡಿಗಳು ಇವೆ. ಇಲ್ಲಿ ಕುಡಿಯಲು ನೀರಿನ ವ್ಯವಸ್ಥೆಯೂ ಇಲ್ಲ. ಊಟಕ್ಕೆ ಎರಡು ಕಿಲೋ ಮೀಟರ್ ನಡೆದು ಹೋಗಬೇಕಾಗಿದೆ’ ಎಂದು ಕೇಶವಾರದ ರೈತ ಮುನೇಗೌಡ ಅಸಮಾಧಾನ ವ್ಯಕ್ತಪಡಿಸುವರು.

ADVERTISEMENT

‘ಬಾಡಿಗೆಗೆ ಟ್ರ್ಯಾಕ್ಟರ್ ಮಾಡಿಕೊಂಡು ಬಂದಿದ್ದೇವೆ. ಟ್ರಾಕ್ಟರ್‌ನವರು ತಡವಾದರೆ ಮತ್ತಷ್ಟು ಬಾಡಿಗೆಯನ್ನು ಹೆಚ್ಚು ಪಡೆಯುವರು. ಟ್ರ್ಯಾಕ್ಟರ್ ಬಿಟ್ಟು ಹೋಗುವಂತೆಯೂ ಇಲ್ಲ. ಕಾರ್ಮಿಕರು ಕಡಿಮೆ ಸಂಖ್ಯೆಯಲ್ಲಿ ಇರುವ ಕಾರಣ ರಾಗಿ ಚೀಲಗಳನ್ನು ಬೇಗ ಇಳಿಸಿಕೊಳ್ಳುತ್ತಿಲ್ಲ‘ ಎಂದು ಹೇಳಿದರು.

ರೈತ ಕಮ್ಮತ್ತನಹಳ್ಳಿಯ ರಮೇಶ್ ಸಹ, ಖರೀದಿ ಕೇಂದ್ರದ ಬಳಿ ರೈತರಿಗೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

’ನಾವು ಬೆಳಿಗ್ಗೆ ಐದು ಗಂಟೆಯಲ್ಲಿ ಮನೆ ಬಿಟ್ಟಿದ್ದೇವೆ. ವೇಬ್ರಿಡ್ಜ್‌ನಲ್ಲಿ ತೂಕ ಹಾಕಿಸಿಕೊಂಡು ಮಧ್ಯಾಹ್ನ ಬಂದೆವು. ಸಂಜೆ ನಾಲ್ಕು ಗಂಟೆಯಾದರೂ ರಾಗಿ ತೆಗೆದುಕೊಂಡಿಲ್ಲ. ಬೆಳಿಗ್ಗೆ ಮೂರು ಇಡ್ಲಿ ತಿಂದಿದ್ದೇನೆ ಅಷ್ಟೇ. ಇಲ್ಲಿ
ಕುಡಿಯಲು ನೀರು ಸಹ ಇಲ್ಲ‘ ಎಂದರು.

’ಸಮಸ್ಯೆಯನ್ನು ಯಾರಿಗೂ ಹೇಳಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ. ನಮ್ಮನ್ನು ಕಾಡಿಗೆ ತಂದು ಬಿಟ್ಟಂತಿದೆ‘ ಎಂದು ಹೇಳಿದರು.

ರಾಗಿ ಮಾರಾಟಕ್ಕೆ ಖರೀದಿ ಕೇಂದ್ರದ ಬಳಿ ಟ್ರಾಕ್ಟರ್‌ಗಳು ಸಾಲುಗಟ್ಟಿದ್ದು ಬೆಳಿಗ್ಗೆ ಬಂದ ರೈತರು ರಾತ್ರಿಯವರೆಗೂ ಕಾಯಬೇಕಾದ ಸ್ಥಿತಿ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.