ADVERTISEMENT

23ರಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:34 IST
Last Updated 21 ನವೆಂಬರ್ 2025, 6:34 IST
ಶಿಡ್ಲಘಟ್ಟದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಸಾಮೂಹಿಕ ನಾಯಕತ್ವ) ಮತ್ತು ದಲಿತ ಸಂಘರ್ಷ ಸಮಿತಿ  ಬೀಮಮಾರ್ಗ ಸದಸ್ಯರು ಹಕ್ಕೊತ್ತಾಯಗಳ ಪಟ್ಟಿ ಪ್ರದರ್ಶಿಸಿದರು
ಶಿಡ್ಲಘಟ್ಟದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಸಾಮೂಹಿಕ ನಾಯಕತ್ವ) ಮತ್ತು ದಲಿತ ಸಂಘರ್ಷ ಸಮಿತಿ  ಬೀಮಮಾರ್ಗ ಸದಸ್ಯರು ಹಕ್ಕೊತ್ತಾಯಗಳ ಪಟ್ಟಿ ಪ್ರದರ್ಶಿಸಿದರು   

ಶಿಡ್ಲಘಟ್ಟ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಇದೇ 23ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ತಿಳಿಸಿದರು. 

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳಲ್ಲಿ 2,823 ಎಕರೆ ಜಮೀನು ಕೈಗಾರಿಕಾ ಪ್ರದೇಶಾವಬಿವೃದ್ಧಿ ಮಂಡಳಿ ಮೂಲಕ ಸರ್ಕಾರ ಪ್ರಾರ್ಥಮಿಕ  ಅಧಿಸೂಚನೆ ಹೊರಡಿಸಿದೆ. ಶೇ 80ರಷ್ಟು ರೈತರು ಭೂ ಸ್ವಾಧೀನಕ್ಕೆ ಸ್ವಇಚ್ಛೆಯಿಂದ ಒಪ್ಪಿಗೆಯನ್ನು ಸೂಚಿಸಿದ್ದಾರೆ. ಹಾಗಾಗಿ ಸರ್ಕಾರವು ಈ ಸಂಬಂಧ ಕೂಡಲೇ ಅಂತಿಮ ಅದಿಸೂಚನೆ ಹೊರಡಿಸಬೇಕು. ಈ ನಿಟ್ಟಿನಲ್ಲಿ ಜಂಗಮಕೋಟೆ ಕೆಐಎಡಿಬಿ 13 ಹಳ್ಳಿಗಳ ರೈತರ ಹೋರಾಟ ಸಮಿತಿಯು ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಕರೆಕೊಟ್ಟಿದೆ. ಈ ವಿಚಾರದಲ್ಲಿ ರೈತರ ಹೋರಾಟಕ್ಕೆ ನಾವು ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದರು. 

ADVERTISEMENT

ಹಕ್ಕೊತ್ತಾಯಗಳು:

* ಜಂಗಮಕೋಟೆ ಹೋಬಳಿ ವ್ಯಾಪ್ತಿಯ 2,823 ಎಕರೆ ಜಮೀನು ಸ್ವಾಧೀನಕ್ಕೆ ಸರ್ಕಾರವು ಪ್ರಾಥಮಿಕ ಅದಿಸೂಚನೆ ಹೊರಡಿಸಿದೆ. ಈ ಪೈಕಿ 1,115 ಎಕರೆ ಜಮೀನು ನೀರಾವರಿ ಮತ್ತು ಫಲವತ್ತತೆಯಿಂದ ಕೂಡಿದೆ. ಈ ಜಮೀನುಗಳನ್ನು ಸ್ವಾಧೀನ ಪ್ರಕ್ರಿಯೆಯಿಂದ ಹೊರಗಿಡಬೇಕು. ಸರ್ಕಾರ ಸ್ವಾಧೀನ ಮಾಡಿಕೊಳ್ಳುವ ಪ್ರತಿ ಎಕರೆಗೆ ₹3 ಕೋಟಿ ಪರಿಹಾರ ನೀಡಬೇಕು. 

* 2823 ಎಕರೆ ಜಮೀನಿನ ಪೈಕಿ 525 ಎಕರೆ ಜಮೀನು ಪಿ.ಎಸ್.ಎಲ್ ಕಂಪನಿಗೆ ಸೇರಿದೆ. ಮಧ್ಯವರ್ತಿಗಳು ಆ ಕಂಪನಿಯ ಹೆಸರಿನಲ್ಲಿ ರೈತರಿಗೆ ಅಲ್ಪ–ಸ್ವಲ್ಪ ಹಣ ಕೊಟ್ಟು ಮೋಸ ಮಾಡಿದ್ದಾರೆ. ಹೀಗಾಗಿ, ಮೋಸದಿಂದ ಮಾಡಿಕೊಳ್ಳಲಾದ ಒಪ್ಪಂದಗಳನ್ನು ರದ್ದುಪಡಿಸಿ, ಸರ್ಕಾರದ ಭೂಪರಿಹಾರದ ಪ್ರಯೋಜನವು ಮೂಲ ರೈತರಿಗೆ ಸಿಗಬೇಕು.

* ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡಿದ ಸಾಲಮನ್ನಾ ಆಗಬೇಕು. ಜಿಲ್ಲಾ ಡಿಸಿಸಿ ಬ್ಯಾಂಕ್‌ನಿಂದ ಮಹಿಳಾ ಸ್ವಸಹಾಯ ಸಂಘಗಳ ಸಬಲೀಕರಣಕ್ಕೆ ಸಾಲ ಮಂಜೂರು ಮಾಡಬೇಕು.

* ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಜನರು ಸ್ವಂತ ಸೂರು ಇಲ್ಲದೆ, ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು, ಎಲ್ಲ ಜಾತಿ ಬಡವರಿಗೆ ನಿವೇಶನ ನೀಡಲು ಕ್ರಮ ವಹಿಸಬೇಕು.

* ಮೆಕ್ಕೆಜೋಳದ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ರೈತರು ಕಂಗಲಾಗಿದ್ದಾರೆ. ಇಡೀ ರಾಜ್ಯದಲ್ಲಿ ಮೆಕ್ಕೆಜೋಳ ಬೆಳೆಯುವ ರೈತರು ಬೀದಿಗೆ ಬರುತ್ತಿದ್ದಾರೆ. ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮ ವಹಿಸಬೇಕು.

ಶಿಡ್ಲಘಟ್ಟ ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಬೇಕು. ಕೆಟ್ಟು ನಿಂತಿರುವ ಘಟಕಗಳನ್ನು ದುರಸ್ತಿಗೆ ಕ್ರಮ ಕೈಗೊಳ್ಳಬೇಕು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಸಾಮೂಹಿಕ ನಾಯಕತ್ವ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಕಾರ್ಯಾಧ್ಯಕ್ಷ ಎಚ್.ಎನ್.ಕದಿರೇಗೌಡ, ತಾಲ್ಲೂಕು ಅಧ್ಯಕ್ಷ ಮುನೇಗೌಡ, ಯುವ ಘಟಕ ಜಿಲ್ಲಾಧ್ಯಕ್ಷ ನಲ್ಕೇನಹಳ್ಳಿ ಸುಬ್ರಮಣಿ, ಅಜ್ಜಕದಿರೇನಹಳ್ಳಿ ರಾಮಸ್ವಾಮಿ, ಪ್ರದೀಪ್, ಈರಪ್ಪ, ಬಸವಪಟ್ಟಣ ವೆಂಕಟೇಶ್, ನಾಗವೇಣಿ, ರಾಜೇಶ್, ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.