ADVERTISEMENT

ಶೆಟ್ಟಹಳ್ಳಿ ಕೆರೆಯಲ್ಲಿ ಕಾಲು ಜಾರಿ ಬಿದ್ದು ಅಪ್ಪ, ಮಗಳು ಸಾವು

ಪುತ್ರಿ ರಕ್ಷಿಸಲು ಹೋದ ತಂದೆ ಮೃತ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2025, 16:17 IST
Last Updated 26 ಏಪ್ರಿಲ್ 2025, 16:17 IST
ನಾಗೇಶ್‌
ನಾಗೇಶ್‌   

ಶಿಡ್ಲಘಟ್ಟ: ತಾಲ್ಲೂಕಿನ ಶೆಟ್ಟಹಳ್ಳಿ ಕೆರೆಯಲ್ಲಿ ಕೈಕಾಲು ತೊಳೆಯಲು ನೀರಿಗೆ ಇಳಿದ ಬಾಲಕಿ ಮೃತಪಟ್ಟಿದ್ದಾಳೆ. ಮಗಳ ರಕ್ಷಿಸಲು ಹೋದ ಅಪ್ಪ ಕೂಡ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಶೆಟ್ಟಹಳ್ಳಿ ಗ್ರಾಮದ ರೈತ ನಾಗೇಶ್(48), ಮಗಳು ಧನುಶ್ರೀ(13) ಕೆರೆಯ ನೀರಲ್ಲಿ ಮುಳುಗಿ ಮೃತಪಟ್ಟವರು.

ಶಾಲೆಗೆ ಬೇಸಿಗೆ ಕಾಲದ ರಜೆ ಇದ್ದ ಕಾರಣ ನಾಗೇಶ್ ಶುಕ್ರವಾರ ತನ್ನ ಮಗಳನ್ನು ತೋಟಕ್ಕೆ ಕರೆದುಕೊಂಡು ಹೋಗಿದ್ದರು. ಸಂಜೆ ವಾಪಸ್ ಬರುವ ವೇಳೆ ದಾರಿ ಪಕ್ಕದಲ್ಲೆ ಇದ್ದ ಕೆರೆ ನೀರಲ್ಲಿ ಕೈ ಕಾಲು ತೊಳೆಯಲು ಧನುಶ್ರೀ ನೀರಿಗೆ ಇಳಿದಿದ್ದಾಳೆ. ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. 

ADVERTISEMENT

ಮುಳಗುತ್ತಿದ್ದ ಮಗಳನ್ನು ರಕ್ಷಿಸಲು ನೀರಿಗೆ ಇಳಿದ ಅಪ್ಪ ಕೂಡ ಮಗಳೊಂದಿಗೆ ನೀರು ಪಾಲಾಗಿದ್ದಾನೆ ಎಂದು ಮೃತರ ಪುತ್ರ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಶವವನ್ನು ತಾಲ್ಲೂಕು ಕೇಂದ್ರದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿ ಶವ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಶಾಸಕ ಬಿ.ಎನ್.ರವಿಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಧನುಶ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.