ADVERTISEMENT

ಬಾಗೇಪಲ್ಲಿ | ನಮ್ಮೂರ ತಿಂಡಿ: ಬಾಯಲ್ಲಿ ನೀರು ತರಿಸುವ ಬಾಬು ಬಜ್ಜಿ

ಪಿ.ಎಸ್.ರಾಜೇಶ್
Published 16 ಫೆಬ್ರುವರಿ 2025, 6:26 IST
Last Updated 16 ಫೆಬ್ರುವರಿ 2025, 6:26 IST
ಬಾಗೇಪಲ್ಲಿಯ ಡಿವಿಜಿ ಮುಖ್ಯರಸ್ತೆಯಲ್ಲಿ ಬಜ್ಜಿ, ಬೋಂಡಾ, ವಡೆ ತಯಾರು ಮಾಡುತ್ತಿರುವ ಬಿ.ಮಹೇಶಬಾಬು
ಬಾಗೇಪಲ್ಲಿಯ ಡಿವಿಜಿ ಮುಖ್ಯರಸ್ತೆಯಲ್ಲಿ ಬಜ್ಜಿ, ಬೋಂಡಾ, ವಡೆ ತಯಾರು ಮಾಡುತ್ತಿರುವ ಬಿ.ಮಹೇಶಬಾಬು   

ಬಾಗೇಪಲ್ಲಿ: ಇಲ್ಲಿನ 7ನೇ ವಾರ್ಡ್‍ ನಿವಾಸಿ ಬಿ.ಮಹೇಶಬಾಬು ತಯಾರು ಮಾಡುವ ಬಜ್ಜಿ, ಬೋಂಡಾ ಇಲ್ಲಿನ ಸುತ್ತಮುತ್ತಲಿನ ಜನರಿಗೆ ಬಾಯಿಯಲ್ಲಿ ನೀರು ತರಿಸುತ್ತದೆ. 

ಗುಡಿಬಂಡೆ ತಾಲ್ಲೂಕಿನ ಹಂಪಸಂದ್ರ ಗ್ರಾಮದ ಹೋಟೆಲ್‍ ಎಚ್.ಎಸ್.ಬಸವರಾಜು, ವೆಂಕಟೇಶ್ವರ ಚಿತ್ರ ಮಂದಿರದ ಕ್ಯಾಂಟೀನ್‌ನಲ್ಲಿ ಬಜ್ಜಿ, ಬೋಂಡಾ, ವಡೆ, ತಿಂಡಿ–ತಿನಿಸುಗಳನ್ನು ಮಾರಾಟ ಮಾಡುತ್ತಾರೆ. 1973ರಲ್ಲಿ ಹಂಪಸಂದ್ರದಿಂದ ಇಲ್ಲಿಗೆ ಬಂದಿರುವ ಬಸವರಾಜು, ಮೂರು ವರ್ಷ ಕ್ಯಾಂಟೀನ್‌ ಕೆಲಸ ಮಾಡಿದ್ದರು. ಆ ಬಳಿಕ ಡಿವಿಜಿ ಮುಖ್ಯರಸ್ತೆಯ ವೆಂಕಟೇಶ್ವರ ಚಿತ್ರಮಂದಿರದ ಪಕ್ಕ ಬಸವರಾಜು ಹೋಟೆಲ್ ಆರಂಭಿಸಿದರು. ಅವರು ಮಾರುವ ಬಜ್ಜಿ, ಬೋಂಡಾ, ವಡೆ, ಇಡ್ಲಿ, ದೋಸೆ, ಪಲಾವ್, ಪೂರಿ ಸೇರಿದಂತೆ ಇನ್ನಿತರ ತಿನಿಸುಗಳು ಸುತ್ತಮುತ್ತಲಿನ ಜನರ ಅಚ್ಚುಮೆಚ್ಚಿನದ್ದಾಗಿವೆ. 

ಇದೀಗ ಬಸವರಾಜು ಅವರ ಮಗ ಬಿ. ಮಹೇಶಬಾಬು ಇದೇ ಹೋಟೆಲ್‌ನಲ್ಲಿ ತಂದೆ ಮತ್ತು ತಾಯಿ ಜೊತೆ ಕೆಲಸ ಮಾಡಿ ತಿಂಡಿ ತಿನಿಸು ಮಾಡುವುದನ್ನು ಕಲಿತಿದ್ದಾರೆ. ತಂದೆ ನಿಶಕ್ತರಾದ ಬಳಿಕ ಬಿ.ಮಹೇಶಬಾಬು ಹೋಟೆಲ್ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ರಸ್ತೆ ಅಭಿವೃದ್ಧಿಯಿಂದಾಗಿ ಮಹೇಶಬಾಬು ಅವರು, ಆಟೊದಲ್ಲಿ ತಿಂಡಿ ತಿನಿಗಳನ್ನು ಮಾರಾಟ ಮಾಡುತ್ತಿದ್ದಾರೆ. 

ADVERTISEMENT

ವಾರದಲ್ಲಿ ಮೂರು ದಿನ ಬಾಬು ಬಜ್ಜಿ, ಬೋಂಡಾ, ಮಸಾಲಪುರಿ, ಗೋಬಿ ಮಂಜೂರಿ ಮಾಡುತ್ತಾರೆ. ಕೃಷಿ ಮಾರುಕಟ್ಟೆಯಲ್ಲಿ ರೈತರಿಂದ ನೇರವಾಗಿ ಬಜ್ಜಿ ಮೆಣಸಿನಕಾಯಿ, ಗೋಬಿ ಖರೀದಿಸುತ್ತಾರೆ. 10 ಕೆ.ಜಿ ಕಡಲೆಹಿಟ್ಟು, 10 ಲೀಟರ್ ಕಡಲೆಕಾಯಿ ಎಣ್ಣೆ, 5 ಕೆ.ಜಿ ಗೋಬಿ, ಬಜ್ಜಿ ಮೆಣಸಿನಕಾಯಿ ಹಾಕಿ ಬಜ್ಜಿ, ಬೋಂಡಾ, ವಡೆ, ಗೋಬಿ ಮಂಜೂರಿ, ಪಾನಿಪೂರಿ, ಮಸಾಲಪುರಿ, ಬಾದ್‍ಶಾ, ಜಿಲೇಬಿಯಂತಹ ತಿಂಡಿತಿನಿಸುಗಳನ್ನು ಮಾಡುತ್ತಾರೆ. ಹಲವು ಮಂದಿ ರಸ್ತೆಯಲ್ಲೇ ನಿಂತು ತಿಂಡಿ ತಿನ್ನುವ ಜೊತೆಗೆ ಮನೆ ಮಂದಿಗೆಲ್ಲಾ ತಿನಿಸುಗಳನ್ನು ಪಾರ್ಸೆಲ್ ಕಟ್ಟಿಸಿಕೊಂಡು ಹೋಗುತ್ತಾರೆ. ಪ್ರತಿದಿನ ₹5,000–₹6,000ದವರೆಗೆ ವ್ಯಾಪಾರವಾಗುತ್ತದೆ ಎನ್ನುತ್ತಾರೆ ಮಹೇಶಬಾಬು. 

‘ಬಾಬು ಬಜ್ಜಿ, ಬೋಂಡಾ ಅಂದ್ರೆ ಇಷ್ಟ. ಸಂಜೆಯಾಗುತ್ತಿದ್ದಂತೆ ಇಲ್ಲಿಗೆ ಸ್ನೇಹಿತರ ಜೊತೆಗೆ ಬಂದು ಬಜ್ಜಿ, ಬೋಂಡಾ ತಿನ್ನುವುದೇ ಒಂದು ಖುಷಿ. ರಾಸಾಯನಿಕ ಮಿಶ್ರಣ ಅಥವಾ ಕಲಬೆರಕೆ ಇರುವುದಿಲ್ಲ. ಗುಣಮಟ್ಟದ ಹಿಟ್ಟು, ಎಣ್ಣೆ, ಗೋಬಿ ಬಳಸಿ ತಿಂಡಿ ತಯಾರಿಸುವುದರಿಂದ ಗ್ರಾಹಕರಿಗೆ ಪ್ರಿಯವಾಗಿದೆ’ ಎಂದು ಅಬ್ದುಲ್ ಅಜರ್ ನವಾಬ್ ಎಂಬುವರು ತಿಳಿಸಿದ್ದಾರೆ. 

ಬಜ್ಜಿಗಳು

ನಮ್ಮ ತಂದೆ ಬಸವರಾಜು ತಯಾರು ಮಾಡಿದಂತೆ ನಾನು ಬಜ್ಜಿ, ಬೋಂಡಾ, ವಡೆ, ಗೋಬಿ ಮಂಜೂರಿ, ಪಾನಿಪೂರಿ ಮಾಡಿದ್ದೇನೆ. 10 ರೂಪಾಯಿಗೆ 3 ಬಜ್ಜಿ, ಬೋಂಡಾ,ವಡೆ ನೀಡುತ್ತಾರೆ. ಕಡಲೆಹಿಟ್ಟು, ಎಣ್ಣೆ, ಗೋಬಿ, ಮೆಣಸಿನಕಾಯಿಯ ಧರಗಳು ಹೆಚ್ಚಾಗಿದೆ. ಖರ್ಚು ಆಗಿ, ಒಂದು ಸಾವಿರ ರೂಪಾಯಿಗಳು ಉಳಿತಾಯ ಆಗುತ್ತದೆ. ಎಲ್ಲಾ ಜನರು ಸೇರಿದಂತೆ ಮದ್ಯಪ್ರಿಯರು ಬಜ್ಜಿ, ಬೋಂಡಾ, ವಡೆಗಳನ್ನು ಖರೀದಿ ಮಾಡುತ್ತಾರೆ ಎಂದು ತಿಂಡಿತಿನಿಸುಗಳ ತಯಾರಕರಾದ ಬಿ.ಮಹೇಶಬಾಬು 'ಪ್ರಜಾವಾಣಿ'ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.