ಚೇಳೂರು: ತಾಲ್ಲೂಕಿನಾದ್ಯಂತ ಚೇಳೂರು ಪಟ್ಟಣ ಸೇರಿದಂತೆ, ಚಾಕವೇಲು, ಚಿಲಕಲನೇರ್ಪು, ನಲ್ಲಗುಟ್ಲಪಲ್ಲಿ, ಏನಿಗದಲೆ, ಬುರುಡಗುಂಟೆ ಮತ್ತು ಸೋಮನಾಥಪುರಗಳಲ್ಲಿರುವ ಬೇಕರಿಗಳು, ಹೋಟೆಲ್‌ಗಳು ಹಾಗೂ ಕಬಾಬ್ ಅಂಗಡಿಗಳು ಬಣ್ಣ ಬಣ್ಣದ ಆಹಾರ ಪದಾರ್ಥಗಳ ಮೂಲಕ ಸಾರ್ವಜನಿಕರ ಆರೋಗ್ಯದೊಂದಿಗೆ ಅಪಾಯಕಾರಿ ಆಟವಾಡುತ್ತಿರುವ ಗಂಭೀರ ಆರೋಪಗಳು ಕೇಳಿಬಂದಿವೆ.
ಆಹಾರ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ, ನಿಷಿದ್ಧ ಕೃತಕ ಬಣ್ಣ ಯಥೇಚ್ಛವಾಗಿ ಬಳಸಲಾಗುತ್ತಿದ್ದರೂ, ಆಹಾರ ಸುರಕ್ಷತಾ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರವು ಸ್ಪಷ್ಟವಾಗಿ ಆಹಾರ ಪದಾರ್ಥಗಳಿಗೆ ಬಣ್ಣ ಬೆರಕೆ ಮಾಡುವುದನ್ನು ನಿಷೇಧಿಸಿದೆ. ಆದಾಗ್ಯೂ, ತಾಲ್ಲೂಕಿನಾದ್ಯಂತ ವ್ಯಾಪಾರಿಗಳು, ಮುಖ್ಯ ರಸ್ತೆಗಳ ಪಕ್ಕದಲ್ಲೇ ತಮ್ಮ ಆಹಾರ ಪದಾರ್ಥಗಳನ್ನು ಸಾರ್ವಜನಿಕರಿಗೆ ಆಕರ್ಷಕವಾಗಿ ಕಾಣುವಂತೆ ಮಾಡಲು ಹೆಚ್ಚುವರಿ ಬಣ್ಣಗಳನ್ನು ಬಳಸುತ್ತಿದ್ದಾರೆ.
ಸ್ಥಳೀಯ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹಲವು ಬೇಕರಿಗಳು ಮತ್ತು ಹೋಟೆಲ್‌ಗಳು ಕಡ್ಡಾಯವಾಗಿ ಪಡೆಯಬೇಕಾದ ಆಹಾರ ಮಾರಾಟ ಪರವಾನಗಿಯನ್ನು ಪಡೆದಿಲ್ಲ.
ವಾಣಿಜ್ಯ ಉದ್ದೇಶಗಳಿಗೆ ಬಳಸಬೇಕಾದ ಸಿಲಿಂಡರ್ ಬದಲಿಗೆ, ಹೆಚ್ಚು ಸಬ್ಸಿಡಿ ಇರುವ ಗೃಹ ಬಳಕೆಯ ಸಿಲಿಂಡರ್‌ಗಳನ್ನು ಆಹಾರ ತಯಾರಿಕೆಗೆ ಬಳಸಲಾಗುತ್ತಿದೆ.
ಆಹಾರ ಸುರಕ್ಷತಾ ಅಧಿಕಾರಿಗಳ ನಡೆ ತಾಲ್ಲೂಕಿನ ನಾಗರಿಕಲ್ಲಿ ಹಲವು ಅನುಮಾನಗಳಿಗೂ ಕಾರಣವಾಗಿದೆ. ಕಲಬೆರಕೆ ನಡೆಯುತ್ತಿದ್ದರೂ ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುವರು.
ಆಹಾರ ಸುರಕ್ಷತೆ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗುತ್ತಿರುವಾಗಲೂ, ಸರ್ಕಾರದ ಆದೇಶಗಳನ್ನು ಪಾಲಿಸಬೇಕಾದ ಅಧಿಕಾರಿ ವರ್ಗವೇ ಭ್ರಷ್ಟಾಚಾರದಲ್ಲಿ ಮುಳುಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಚೇಳೂರು ತಾಲ್ಲೂಕಿನ ಅನಧಿಕೃತ ಆಹಾರ ಮಳಿಗೆಗಳ ಮೇಲೆ ಸಮಗ್ರ ದಾಳಿ ನಡೆಸಿ, ನಿಷಿದ್ಧ ವಸ್ತುಗಳ ಬಳಕೆಗೆ ಕಡಿವಾಣ ಹಾಕಿ, ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.