ADVERTISEMENT

ಶಿಡ್ಲಘಟ್ಟ: ಅರಣ್ಯ ಭೂಮಿ ಉಳಿವಿಗಾಗಿ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ ಏಕಾಂಗಿ ಹೋರಾಟ

ಡಿ.ಜಿ.ಮಲ್ಲಿಕಾರ್ಜುನ
Published 27 ಆಗಸ್ಟ್ 2019, 11:48 IST
Last Updated 27 ಆಗಸ್ಟ್ 2019, 11:48 IST
   

ಶಿಡ್ಲಘಟ್ಟ : ಜುಲೈ 30 ರಂದು ತೆಲಂಗಾಣದಲ್ಲಿ ಅರಣ್ಯಕ್ಕೆ ಸೇರಿರುವ ಸ್ಥಳದಲ್ಲಿ ಗಿಡಗಳನ್ನು ನೆಡಿಸಲು ಹೋದ ವಲಯ ಅರಣ್ಯಾಧಿಕಾರಿ ಅನಿತಾ ಅವರನ್ನು ಸ್ಥಳೀಯರು ದೊಣ್ಣೆಗಳಿಂದ ಹೊಡೆದರೂ ಯಾವುದೇ ಕಾರಣಕ್ಕೂ ಅರಣ್ಯದ ಸ್ಥಳವನ್ನು ಬಿಡುವುದಿಲ್ಲವೆಂದು ಛಲಬಿಡದ ಅವರ ಗಟ್ಟಿತನದ ವೀಡಿಯೋ ವೈರಲ್ ಆಗಿ ಮೆಚ್ಚುಗೆ ಪಡೆದಿತ್ತು.

ಇದೇ ರೀತಿಯ ಘಟನೆಯು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಡೆದಿದೆ. ವಲಯ ಅರಣ್ಯಾಧಿಕಾರಿ ಎಚ್.ಎಸ್.ಶ್ರೀಲಕ್ಷ್ಮಿ ಅವರು ಅರಣ್ಯ ಭೂಮಿಯನ್ನು ರಾತ್ರೋ ರಾತ್ರಿ ಉಳಲು ಬಂದವರನ್ನು ಗಟ್ಟಿತನದಿಂದ ಎದುರಿಸಿದ್ದಾರೆ. ಹಲವು ಮುಖಂಡರಿಂದ ಬೆದರಿಕೆ ಕರೆಗಳು ಬಂದರೂ ಜಗ್ಗದೆ ಒಂದು ಇಂಚು ಕೂಡ ಅರಣ್ಯದ ಜಮೀನನ್ನು ಬಿಡುವುದಿಲ್ಲ ಎಂದು ಹಠತೊಟ್ಟಿದ್ದಾರೆ.

ADVERTISEMENT

ಕಳೆದ ಆಗಸ್ಟ್ 23 ರ ಮಧ್ಯರಾತ್ರಿ ಅರಣ್ಯ ಇಲಾಖೆಯವರು ಗಿಡಗಳನ್ನು ನೆಡಲು ಗುಂಡಿಗಳನ್ನು ತೋಡಿದ್ದ ಸ್ಥಳದಲ್ಲಿ ವರದನಾಯಕನಹಳ್ಳಿಯ ಕೆಲವು ದಲಿತ ಕುಟುಂಬದವರು ರಾತ್ರಿಯ ವೇಳೆಯಲ್ಲಿ ಉತ್ತಿದ್ದಾರೆ. ಮಾರನೇ ದಿನವೂ ಉಳಲು ತೊಡಗಿದ್ದಾಗ ವಲಯ ಅರಣ್ಯಾಧಿಕಾರಿ ಎಚ್.ಎಸ್.ಶ್ರೀಲಕ್ಷ್ಮಿ ಅವರು ತಮ್ಮ ಕೆಲವೇ ಸಿಬ್ಬಂದಿಯೊಂದಿಗೆ ಹೋಗಿ ತಡೆದಿದ್ದಾರೆ. ವರ್ಗಾವಣೆ ಮಾಡಿಸುತ್ತೇನೆ ಎಂದು ಬೆದರಿಕೆ ಕರೆಗಳು ಬಂದರೂ ಜಗ್ಗದೇ ನಿಂತಿದ್ದಾರೆ.

“ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ವೆ ನಂಬರ್ 10 ರಲ್ಲಿ 325 ಎಕರೆಯಷ್ಟು ಸರ್ಕಾರಿ ಜಾಗವಿದ್ದು ಅದರಲ್ಲಿ ಅರಣ್ಯ ಇಲಾಖೆಗೆ ಸೇರಿದ 163 ಎಕರೆ ಜಾಗವಿದೆ. ಅದರಲ್ಲಿ ನಾವು ಗಿಡ ನೆಡಲು ಗುಂಡಿ ತೆಗೆದಿದ್ದೆವು. “ಈ ಸ್ಥಳ ಸರ್ಕಾರಿ ಗೋಮಾಳ, ಅಲ್ಲಿ ದಲಿತರಿಗೆ ಜಮೀನು ಮಂಜೂರು ಮಾಡಬೇಕು” ಎಂದು ವರದನಾಯಕನಹಳ್ಳಿ ಗ್ರಾಮದ ಕೆಲ ದಲಿತ ಕುಟುಂಬಗಳು ನಮ್ಮ ಕೆಲಸಕ್ಕೆ ಅಡ್ಡಿ ಪಡಿಸಿ, ಅಲ್ಲಿ ಬೆಳೆದಿದ್ದ ಗಿಡಗಳನ್ನು ಸುಟ್ಟು, ಜಮೀನನ್ನು ರಾತ್ರೋ ರಾತ್ರಿ ಉತ್ತಿದ್ದಾರೆ.

ಈ ಹಿಂದೆ ಇದೇ ದಲಿತ ಕುಟುಂಬಗಳು ನಮ್ಮ ಕಚೇರಿಯ ಮುಂದೆ ಧರಣಿ ನಡೆಸಿದಾಗ ತಹಶೀಲ್ದಾರರು ಭೇಟಿ ನೀಡಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಸರ್ವೇ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು.

ಅರಣ್ಯದ ಜಮೀನನ್ನು ನಾವು ಬಿಡುವುದು ಸಾಧ್ಯವಿಲ್ಲ. ಈ ವಿವಾದಿತ 34 ಎಕರೆ 23 ಗುಂಟೆ ಪ್ರದೇಶವು ಅರಣ್ಯ ಇಲಾಖೆಗೆ ಸೇರಿರುವ 163 ಎಕರೆ 25 ಗುಂಟೆ ಪ್ರದೇಶದಲ್ಲಿ ಬರುತ್ತದೆ. ಈ ವಿವಾದಿತ ಸ್ಥಳದ ಜೊತೆಯಲ್ಲಿ ಅರಣ್ಯ ಇಲಾಖೆಗೆ ಸೇರಿರುವ ಸುಮಾರು 79 ಎಕರೆ 10 ಗುಂಟೆ ಪ್ರದೇಶವನ್ನು 74 ಜನರಿಗೆ ಖಾತೆಯಾಗಿರುತ್ತದೆ. ಅದನ್ನು ಕೂಡ ಕಾನೂನಾತ್ಮಕವಾಗಿ ಅರಣ್ಯ ಇಲಾಖೆಯು ತನ್ನದಾಗಿಸಿಕೊಳ್ಳಲಿದೆ” ಎಂದು ವಲಯ ಅರಣ್ಯಾಧಿಕಾರಿ ಎಚ್.ಎಸ್.ಶ್ರೀಲಕ್ಷ್ಮಿ ತಿಳಿಸಿದರು.

“ಆಗಸ್ಟ್ 23 ರ ಮಧ್ಯರಾತ್ರಿ ಶಿಡ್ಲಘಟ್ಟ ತಾಲ್ಲೂಕು ಪಟ್ರಹಳ್ಳಿ ರಾಜ್ಯ ಅರಣ್ಯಕ್ಕೆ ಸೇರಿದ ವರದನಾಯಕನಹಳ್ಳಿ ಸರ್ವೆ ನಂ 10 ರ 163 ಎಕರೆ 25 ಗುಂಟೆ ಅರಣ್ಯ ಇಲಾಖೆಯಿಂದ ಮಾಡಿಸಿದ್ದ 1800 ಮೀಟರ್ ಟ್ರಂಚ್ ಹಾಗೂ 10 ಸಾವಿರ ಪಿಟ್ ಗಳನ್ನು ಆರು ಟ್ರಾಕ್ಟರ್ ಗಳನ್ನು ತಂದು ಉಳುಮೆ ಮಾಡಿ, ಅದನ್ನು ತಡೆಯಲು ಹೋದ ನನ್ನನ್ನು ಹಾಗೂ ಸಿಬ್ಬಂದಿಯನ್ನು ನಿಂದಿಸಿ ಬೆದರಿಕೆ ಹಾಕಿದ್ದಾರೆ. ಸುಮಾರು ಎರಡೂಕಾಲು ಲಕ್ಷರೂಗಳಷ್ಟು ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವುದಲ್ಲದೆ ಅರಣ್ಯ ಸಂಪತ್ತನ್ನು ಸುಟ್ಟು ನಾಶಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದೇನೆ” ಎಂದು ಅವರು ಹೇಳಿದರು.

ಈ ಬಗ್ಗೆ ಉಳುವುದಕ್ಕೆ ಹೋಗಿದ್ದ ದಲಿತ ಕುಟುಂಬಗಳ ಮುಖಂಡ ತಿರುಮಲ ಪ್ರಕಾಶ್ ಅವರನ್ನು ಮಾತನಾಡಿಸಿದಾಗ, “ಈ ಸ್ಥಳವು ಕಂದಾಯದ ದಾಖಲೆಗಳ ಪ್ರಕಾರ ಗೋಮಾಳ. 181 ಎಕರೆ ಗೋಮಾಳ ಎಂದಿದೆ, ಮ್ಯುಟೇಷನ್ ಕೂಡ ಇದೆ. ಆದರೆ ಅರಣ್ಯ ಇಲಾಖೆಯವರು ಇದು ನಮಗೆ ನೋಟಿಫಿಕೇಷನ್ ಆಗಿದೆ ಎನ್ನುತ್ತಾರೆ. ಈ ಹಿಂದೆ 1962ರಲ್ಲಿ ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ 65 ಎಕರೆ ವಾಪಸ್ ಕೊಡಬೇಕೆಂದು ಆದೇಶವಾಗಿದೆ. ಆ ಪ್ರಕಾರ ನಮ್ಮ ಜಮೀನನ್ನು ನಾವು ಉಳುಮೆ ಮಾಡುತ್ತಿದ್ದೇವೆಂಬುದು ನಮ್ಮ ವಾದ. ನಮಗೆ ರೆವಿನ್ಯೂ ದಾಖಲೆಗಳ ಪ್ರಕಾರ ಪಹಣಿ ಇದೆ, ಮ್ಯುಟೇಷನ್. ಫಾರಂ ನಂ 30 ಮತ್ತು 53 ಅರ್ಜಿ ಹಾಕಿಕೊಂಡಿದ್ದೇವೆ. 1997 ರಲ್ಲಿ ನಮ್ಮ ಜಮೀನಿನ ಮೇಲೆ ಕೆಲವು ಬಲಾಡ್ಯರು ಅತಿಕ್ರಮಣಕ್ಕೆ ಬಂದಾಗ ಅಟ್ರಾಸಿಟಿ ಕೇಸ್ ದಾಖಲಿಸಿರುವ ದಾಖಲೆಯಿದೆ. ಸರ್ಕಾರದಿಂದ 14 ಜನರಿಗೆ ಸಹಾಯಧನ ಬಂದಿರುವ ದಾಖಲೆಗಳು ಕೂಡ ನಮ್ಮಲ್ಲಿವೆ. ಅರಣ್ಯ ಇಲಾಖೆಯವರ ಬಳಿ ಪಹಣಿ ಇಲ್ಲ, ಸ್ಕೆಚ್ ಇಲ್ಲ. ಕೇವಲ ನೋಟಿಫಿಕೇಷನ್ ಎಂಬ ಹೆಸರಿನಲ್ಲಿ ನಮ್ಮನ್ನು ಹೊರಕ್ಕೆ ಕಳಿಸುತ್ತಿದ್ದಾರೆ. ಇದುವರೆಗೂ ಅರಣ್ಯ ಇಲಾಖೆಯವರು ಈ ಜಮೀನಿನಲ್ಲಿ ಏನೂ ಮಾಡಿಸಿಲ್ಲ. ನಾವು ಸಾಗುವಳಿ ಮಾಡಿಕೊಂಡು ಬರುತ್ತಿದ್ದೇವೆ” ಎಂದು ತಿಳಿಸಿದರು.

“ಕರ್ನಾಟಕ ಅರಣ್ಯ ಕಾಯ್ದೆ 1963 ಸೆಕ್ಷನ್ 17 ರ ಪ್ರಕಾರ ರಾಜ್ಯ ಅರಣ್ಯವೆಂದು ನೋಟಿಫಿಕೇಷನ್ ಆಗಿರುವ ಪ್ರದೇಶವನ್ನು ಕಂದಾಯ ಇಲಾಖೆಯ ದಾಖಲೆಗಳಲ್ಲಿ ಅರಣ್ಯದ್ದೆಂದು ನಮೂದಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇರುತ್ತದೆ. ನಮ್ಮ ಕಚೇರಿಯಿಂದ ಸುಮಾರು ೧೫ ವರ್ಷಗಳಿಂದಲೂ ತಹಶೀಲ್ದಾರ್, ಎ.ಸಿ ಹಾಗೂ ಡಿ.ಸಿ ಅವರಿಗೆ ಪತ್ರಗಳನ್ನು ಬರೆದಿದ್ದೇವೆ. ಅರಣ್ಯದ್ದೆಂದು ನಮೂದಿಸಿ ನಮಗೆ ಪಹಣಿ, ಮ್ಯುಟೇಷನ್ ಮಾಡಿಕೊಡಿ ಎಂದು ಕೋರಿದ್ದೇವೆ. ಆದರೆ ಇದುವರೆಗೂ ಮಾಡಿಕೊಟ್ಟಿಲ್ಲ”

- ವಲಯ ಅರಣ್ಯಾಧಿಕಾರಿ ಎಚ್.ಎಸ್.ಶ್ರೀಲಕ್ಷ್ಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.