ADVERTISEMENT

ಹಳೆಯ ಡೈಲಾಗ್‌ ಹಾಕಲು ಹೇಳಿರುವೆ

ಮಾಜಿ ಶಾಸಕರ ಬದಲಾದ ನಿಲುವು ಟೀಕಿಸಿದ ಅನರ್ಹ ಶಾಸಕ ಡಾ.ಕೆ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 20:17 IST
Last Updated 17 ಅಕ್ಟೋಬರ್ 2019, 20:17 IST
ಸಭೆಯಲ್ಲಿ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಮಾತನಾಡಿದರು.
ಸಭೆಯಲ್ಲಿ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ನಾನು ಶಾಸಕನಾಗಿದ್ದಾಗ ಈ ಹಿಂದೆ ನನ್ನ ಬಗ್ಗೆ ಪ್ರತಿ ಭಾಷಣದಲ್ಲೂ ಅಭಿವೃದ್ಧಿಯ ಹರಿಕಾರ ಎಂದು ಮಾತನಾಡುತ್ತಿದ್ದ ಮಾಜಿ ಶಾಸಕರು, ಮುಖಂಡರು ಈಗ ನನ್ನ ಬಗ್ಗೆ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಹಳೆಯ ಡೈಲಾಗ್‌ಗಳನ್ನು ತೆಗೆದು ಪ್ರಸಾರ ಮಾಡಲು ನಮ್ಮ ಸಾಮಾಜಿಕ ಜಾಲತಾಣ ತಂಡಕ್ಕೆ ಹೇಳಿರುವೆ’ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ಮಂಡಿಕಲ್ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಚಿಕ್ಕಪೈಲಗುರ್ಕಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಅವರು ಮಾತನಾಡಿದರು.

‘ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಅನಸೂಯಮ್ಮ, ಶಿವಾನಂದ ಮತ್ತು ಮುಖಂಡರಾದ ಯಲುವಹಳ್ಳಿ ರಮೇಶ್‌ ಅವರು ಈ ಹಿಂದೆ ಪ್ರತಿ ಭಾಷಣದಲ್ಲಿ ನನ್ನನ್ನು ಹೊಗಳುತ್ತಿದ್ದರು. ಶಿವಾನಂದ ಅವರಂತೂ ನನ್ನನ್ನು ಅಂಬೇಡ್ಕರ್ ಅವರಿಗೆ ಹೋಲಿಕೆ ಮಾಡಿದ್ದರು. ನಾನು ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಹೊತ್ತಿಗೆ ಅವು ಬದಲಾಗಿ ಹೋಗುತ್ತವಾ’ ಎಂದು ಪ್ರಶ್ನಿಸಿದರು.

ADVERTISEMENT

‘ಯಾಕೆ ನಾನು ರಾಜೀನಾಮೆ ನೀಡುವ ಸ್ಥಿತಿ ಬಂತು ಎಂದು ಮುಖಂಡರು ಅರ್ಥಮಾಡಿಕೊಳ್ಳಬೇಕಿತ್ತು. ನನ್ನ ಅಭಿವೃದ್ಧಿ ನೋಡಿ ಮತದಾರರು ಎರಡನೇ ಬಾರಿಗೆ 30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದರು. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮನ್ನು 14 ತಿಂಗಳು ವನವಾಸ ಮಾಡಿಸಿದರು. ಶಾಸಕನಾಗಿ ಕ್ಷೇತ್ರಕ್ಕೆ ಒಂದೇ ಒಂದು ರೂಪಾಯಿ ಅನುದಾನ ತರದ ಮೇಲೆ ನಾನು ಏಕೆ ಶಾಸಕನಾಗಿ ಇರಬೇಕು ಎಂದು ನಿರ್ಧರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ’ ಎಂದರು.

‘ನಮ್ಮಿಂದ ಹೊಸ ಸರ್ಕಾರ ಬಂದ ಮೇಲೆ ನನ್ನ ಷರತ್ತಿನ ಮೆರೆಗೆ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದೆ. ಶೀಘ್ರದಲ್ಲಿಯೇ ಅದರ ಭೂಮಿಪೂಜೆ ನೆರವೇರಲಿದೆ. ಇದರಿಂದ ಸ್ಥಳೀಯ ಜನರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅನುಕೂಲವಾಗಲಿದೆ. ಕ್ಷೇತ್ರದಲ್ಲಿ ಆರೋಗ್ಯ ಮತ್ತು ಶಿಕ್ಷಣ ವಲಯಗಳನ್ನು ನಿರ್ಮಿಸುವ ಉದ್ದೇಶವಿದೆ. ಮುದ್ದೇನಹಳ್ಳಿಗೆ ಐಐಟಿ ತರುವಂತೆ ಸಂಸದರ ಮೇಲೆ ಒತ್ತಡ ಹಾಕಿರುವೆ’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ದೊಡ್ಡಪೈಲಗುರ್ಕಿ ಅಮ್ಮೇಗಾರಹಳ್ಳಿ ರಸ್ತೆಯಲ್ಲಿ ಸೇತುವೆ ನಿರ್ಮಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಮುಖಂಡರಾದ ಕೆ.ವಿ.ನಾಗರಾಜ್, ವೆಂಕಟನಾರಾಯಣಪ್ಪ, ಗರಿಗರೆಡ್ಡಿ, ಜಿ.ಆರ್.ನಾರಾಯಣಸ್ವಾಮಿ, ಬಿ.ಎನ್.ಚಿನ್ನಪ್ಪರೆಡ್ಡಿ, ತಿರುಮಳಪ್ಪ, ಗೋವಿಂದಸ್ವಾಮಿ, ಚನ್ನಕೃಷ್ಣಾರೆಡ್ಡಿ, ಬೊಮ್ಮಹಳ್ಳಿ ಅಶ್ವತ್ಥಪ್ಪ, ಕೃಷ್ಣಪ್ಪ, ಚಂದ್ರಶೇಖರರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.