ADVERTISEMENT

ಚಿಕ್ಕಬಳ್ಳಾಪುರ: ಹಗಲಿನಲ್ಲಿ ಲಾಕ್‌ಡೌನ್ ಪೂರ್ಣ ತೆರವು

ಇಂದಿನಿಂದ ಸಂಜೆ 5ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ; ಬಸ್ ಸಂಚಾರವೂ ಆರಂಭ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 4:15 IST
Last Updated 21 ಜೂನ್ 2021, 4:15 IST
ಭಾನುವಾರ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸ್ಯಾನಿಟೈಸ್ ಮಾಡಿದ ಸಿಬ್ಬಂದಿ
ಭಾನುವಾರ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸ್ಯಾನಿಟೈಸ್ ಮಾಡಿದ ಸಿಬ್ಬಂದಿ   

ಚಿಕ್ಕಬಳ್ಳಾಪುರ: ಕೊರೊನಾ ಸೋಂಕಿನ ಪ್ರಮಾಣ ಶೇ 5ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ಸಂಜೆ 5ರವರೆಗೆ ತೆರವುಗೊಳಿಸಲಾಗಿದೆ. ಸಂಜೆ 5ರವರೆಗೂ ವ್ಯಾಪಾರ ವಹಿವಾಟಿಗೆ ಅವಕಾಶವಿದೆ. ಸೋಮವಾರದಿಂದ ಸರ್ಕಾರದ ಈ ಆದೇಶ ಜಾರಿಯಾಗಲಿದೆ.

ಇಷ್ಟು ದಿನ ಮುಚ್ಚಿದ್ದ ಬಟ್ಟೆ ಅಂಗಡಿಗಳು, ಚಿನ್ನಾಭರಣ ಅಂಗಡಿಗಳ ವ್ಯಾಪಾರಿಗಳು, ಜೆರಾಕ್ಸ್ ಸೆಂಟರ್‌ಗಳು, ಮೊಬೈಲ್ ಅಂಗಡಿಗಳ ಮಾಲೀಕರು ಭಾನುವಾರ ಅಂಗಡಿಗಳನ್ನು ಸ್ವಚ್ಛಗೊಳಿಸಿದರು. ಎರಡು ತಿಂಗಳಿನಿಂದ ಅಂಗಡಿಗಳನ್ನು ಮುಚ್ಚಿದ್ದರು. ಭಾನುವಾರ ಸ್ವಚ್ಛತೆಯ ವೇಳೆ ಅವರ ಮುಖದಲ್ಲಿ ಮಂದಹಾಸವಿತ್ತು.

‘ವ್ಯಾಪಾರವೇ ಇಲ್ಲದೆ ಮನೆಗಳಲ್ಲಿ ಇದ್ದೆವು. ಯಾವಾಗ ನಿರ್ಬಂಧಗಳನ್ನು ಸಡಿಲಿಸುವರು. ನಮಗೂ ವಹಿವಾಟು ನಡೆಸಲು ಅವಕಾಶ ನೀಡುವರು ಎನಿಸಿತ್ತು. ವಹಿವಾಟು ನಡೆಸಲು ಅವಕಾಶ ನೀಡಿರುವುದು ಸಂತಸ ತಂದಿದೆ. ಮನೆಯಲ್ಲಿ ಇದ್ದು ಬೇಸರವಾಗಿತ್ತು. ಈಗ ತಕ್ಷಣವೇ ವ್ಯಾಪಾರ ಯಥಾಸ್ಥಿತಿಗೆ ಬರುವುದಿಲ್ಲ. ಸ್ವಲ್ಪ ದಿನವಾದರೂ ಬೇಕು’ ಎನ್ನುವರು ನಗರದ ಚಿನ್ನಾಭರಣ ವ್ಯಾಪಾರಿ ರತನ್.

ADVERTISEMENT

ಬಿ.ಬಿ.ರಸ್ತೆ, ಬಜಾರ್ ರಸ್ತೆ ಹೀಗೆ ವಿವಿಧ ಕಡೆಗಳಲ್ಲಿ ಬಟ್ಟೆ ಅಂಗಡಿಗಳ ದ್ವಾರವನ್ನು ಸಿಬ್ಬಂದಿ ಸ್ವಚ್ಛಗೊಳಿಸಿದರು. ಅಂಗಡಿಗಳ ಮುಂಭಾಗದಲ್ಲಿದ್ದ ದೂಳು ಹೊಡೆದರು.

ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಸಂಚಾರ: ಕೆಎಸ್‌ಆರ್‌ಟಿಸಿ ಘಟಕದಲ್ಲಿದ್ದ ಬಸ್‌ಗಳನ್ನು ಒಂದು ವಾರದಿಂದಲೇ ಸ್ವಚ್ಛಗೊಳಿಸಲಾಗಿದೆ. ಕಳೆದ ವಾರವೇ ಬಸ್ ಸಂಚಾರಕ್ಕೆ ಅವಕಾಶ ನೀಡುವರು ಎನಿಸಿ ಸಿಬ್ಬಂದಿ ಬಸ್‌ಗಳನ್ನು ಸಂಚಾರಕ್ಕೆ ಸಿದ್ಧಗೊಳಿಸಿದ್ದಾರೆ. ಭಾನುವಾರ ಸಿಬ್ಬಂದಿ ಬಸ್‌ಗಳಿಗೆ ಸ್ಯಾನಿಟೈಸ್ ಮಾಡಿದರು. ಮೆಕ್ಯಾನಿಕ್‌ಗಳು ಮುಂದೆ ನಿಂತು ಬ್ಯಾಟರಿ, ವಾಹನದ ಚಾಲನೆಯ ಸ್ಥಿತಿಗಳನ್ನು ಪರಿಶೀಲಿಸಿದರು.

ಕೆಎಸ್‌ಆರ್‌ಟಿಸಿ ಡಿಪೊದಲ್ಲಿ ಎರಡು ತಿಂಗಳಿನಿಂದ ನಿಂತಿದ್ದ ಬಸ್‌ಗಳನ್ನು ಪ್ರಾಯೋಗಿಕವಾಗಿ ಓಡಿಸಲಾಯಿತು. ಮೆಕ್ಯಾನಿಕ್‌ಗಳು ಖುದ್ದು ಮುಂದೆ ನಿಂತು ಬಸ್‌ಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದರು.

‘ಪ್ರತಿ ಡಿಪೊದಲ್ಲಿಯೂ ಸರಾಸರಿ 30 ಬಸ್‌ಗಳನ್ನು ಸೋಮವಾರದಿಂದ ಓಡಿಸಬೇಕು ಎಂದುಕೊಂಡಿದ್ದೇವೆ. ಪ್ರಯಾಣಿಕರು ಹೆಚ್ಚು ಬಂದರೆ ಮತ್ತಷ್ಟು ಬಸ್‌ಗಳು ಸಂಚರಿಸಲಿವೆ.
ಪ್ರಯಾಣಿಕರ ಸಂಖ್ಯೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಬಸ್‌ಗಳನ್ನು ಓಡಿಸಲಾಗುವುದು. ಬೆಂಗಳೂರು, ತುಮಕೂರು, ಮಂಡ್ಯ, ರಾಮನಗರ, ಗೌರಿಬಿದನೂರು, ಬಾಗೇಪಲ್ಲಿ, ದೊಡ್ಡಬಳ್ಳಾಪುರ ಇತ್ಯಾದಿ ಕಡೆಗಳಿಗೆ ಬಸ್ ಓಡಿಸಲುವ ಆಲೋಚನೆ ಇದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜು ತಿಳಿಸಿದರು.

ಗ್ರಾಮಾಂತರ ಪ್ರದೇಶಗಳಿಗೂ ಬಸ್ ಸಂಚರಿಸಲಿವೆ. ಅಂತರರಾಜ್ಯ ಸಾರಿಗೆ ಇರುವುದಿಲ್ಲ. ಈಗಾಗಲೇ ಒಂದು ವಾರದಿಂದ ಬಸ್‌ಗಳ ಸ್ವಚ್ಛತಾ ಕಾರ್ಯ ನಡೆದಿದೆ. ಎಲ್ಲ ಬಸ್‌ಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಪ್ರತಿ ದಿನ ಅವು ಘಟಕಕ್ಕೆ ಬಂದ ವೇಳೆಯೂ ಸ್ಯಾನಿಟೈಸ್ ಮಾಡಲಾಗುವುದು. ಶೇ 50ರಷ್ಟು ಅಂದರೆ 30 ಪ್ರಯಾಣಿಕರನ್ನು ಮಾತ್ರ ಬಸ್‌ಗೆ ಹತ್ತಿಸಿಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.