ADVERTISEMENT

ಭೀತಿಯ ನಡುವೆ ಚಿಕ್ಕಬಳ್ಳಾಪುರದಲ್ಲಿ ಗಣೇಶ ಹಬ್ಬದ ಸಂಭ್ರಮ

ನಗರದ ಎಂ.ಜಿ ರಸ್ತೆ, ಬಸ್ ನಿಲ್ದಾಣ, ಎಪಿಎಂಸಿ ಮಾರುಕಟ್ಟೆ, ಬಿ.ಬಿ ರಸ್ತೆಯಲ್ಲಿ ಜನ ಜಂಗುಳಿ

ಎ.ಎಸ್.ಜಗನ್ನಾಥ್
Published 22 ಆಗಸ್ಟ್ 2020, 6:28 IST
Last Updated 22 ಆಗಸ್ಟ್ 2020, 6:28 IST
ಚಿಕ್ಕಬಳ್ಳಾಪುರ ನಗರದಲ್ಲಿ ಯುವಕರು ಗಣೇಶ ಮೂರ್ತಿಯನ್ನು ಕೊಂಡು ಗ್ರಾಮದತ್ತ ಕೊಂಡೊಯ್ಯುತ್ತಿರುವುದು
ಚಿಕ್ಕಬಳ್ಳಾಪುರ ನಗರದಲ್ಲಿ ಯುವಕರು ಗಣೇಶ ಮೂರ್ತಿಯನ್ನು ಕೊಂಡು ಗ್ರಾಮದತ್ತ ಕೊಂಡೊಯ್ಯುತ್ತಿರುವುದು   

ಚಿಕ್ಕಬಳ್ಳಾಪುರ: ಕೊರೊನಾ ಭೀತಿಯ ನಡುವೆಯೂ ನಗರದ ಜನರು ಗೌರಿ ಮತ್ತು ಗಣೇಶ ಹಬ್ಬವನ್ನು ಆಚರಿಸಲು ತಯಾರಿ ನಡೆಸಿದರು. ನಿರ್ಭೀತಿಯಿಂದ ಮಾರುಕಟ್ಟೆಗೆ ತಂಡೋಪತಂಡವಾಗಿ ಬಂದು ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿದರು.

ನಗರದ ಎಂ.ಜಿ ರಸ್ತೆ, ಬಸ್ ನಿಲ್ದಾಣ, ಎಪಿಎಂಸಿ ಮಾರುಕಟ್ಟೆ, ಬಿ.ಬಿ ರಸ್ತೆ ಸೇರಿದಂತೆ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಜನ ಜಂಗುಳಿಯಿಂದ ಕೂಡಿತ್ತು. ಹೂ, ಹಣ್ಣು, ತರಕಾರಿ, ಬಟ್ಟೆ, ಬಳೆ, ಅಲಂಕಾರಿಕ ವಸ್ತುಗಳು ಸೇರಿದಂತೆ ವಿವಿಧ ಬಗೆಯ ತಿನಿಸು, ವಸ್ತುಗಳನ್ನು ಮಹಿಳೆಯರು, ಹಿರಿಯರು ಮಾರುಕಟ್ಟೆಯಲ್ಲಿ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ನಗರದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಇದರ ಅರಿವೇ ಇಲ್ಲದಂತೆ ಅನೇಕರು ಮಾಸ್ಕ್‌ ಧರಿಸದೇ ಮಾರುಕಟ್ಟೆಯಲ್ಲಿ ಓಡಾಡುತ್ತಿದ್ದ, ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು. ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ವ್ಯಾಪಾರಸ್ಥರು ಅಂಗಡಿಗಳನ್ನು ತೆರೆದಿದ್ದ ಪರಿಣಾಮವಾಗಿ ಹಲವೆಡೆ ‌ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಹೆಚ್ಚು ಗುಂಪು ಸೇರದಂತೆ, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಪೊಲೀಸರು ಶ್ರಮಿಸಿದರು.

ADVERTISEMENT

ಶನಿವಾರ ಮತ್ತು ಭಾನುವಾರ ರಜೆ ಇರುವ ಕಾರಣ ಹಬ್ಬದ ಆಚರಣೆಗಾಗಿ ನಗರ ಪ್ರದೇಶದಿಂದ ಗ್ರಾಮೀಣ ಭಾಗಕ್ಕೆ ತೆರಳುವ ಸಂಖ್ಯೆ ಹೆಚ್ಚಾಗಿದೆ. ಶುಕ್ರವಾರ ಸಂಜೆಯಿಂದಲೇ ಬೆಂಗಳೂರು ಕಡೆಯಿಂದ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು.

ಗ್ರಾಮಗಳಲ್ಲಿನ ಯುವಕರು ಹಾಗೂ ಶಾಲಾ ವಿದ್ಯಾರ್ಥಿಗಳು ಸರ್ಕಾರದ ನಿಯಮಾವಳಿಗಳ ನಡುವೆಯೂ ಹಣ ಹೊಂದಿಸಿಕೊಂಡು ನಗರಕ್ಕೆ ಬಂದು ಗಣೇಶ ಮೂರ್ತಿ ಹಾಗೂ ಅದರ ಪ್ರತಿಷ್ಟಾಪನೆಗಾಗಿ ಬೇಕಾದ ಅವಶ್ಯಕ‌ ವಸ್ತುಗಳನ್ನು ಕೊಂಡು ಗ್ರಾಮಗಳತ್ತ ತೆರಳುತ್ತಿದ್ದರು.

ನಗರದ ವಿವಿಧ ವಾರ್ಡ್‌ಗಳಲ್ಲಿ ಹಾಗೂ ಮುಖ್ಯ ರಸ್ತೆಗಳಲ್ಲಿ‌ ಪ್ರತೀ ವರ್ಷ ಸಂಘ ಸಂಸ್ಥೆಗಳು ಹಾಗೂ ಯುವಕರ ತಂಡದ ವತಿಯಿಂದ ವಿಜೃಂಭಣೆಯಿಂದ ವಿಭಿನ್ನ ರೀತಿಯ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಿ ಸುಮಾರು ಒಂದು ವಾರದ ಕಾಲ ಜನಕ್ಕೆ ಮನರಂಜನೆ‌ ನೀಡುತ್ತಿದ್ದವರು ಈ ಬಾರಿ ಕೊರೊನಾ ಪರಿಣಾಮವಾಗಿ ನಿರುತ್ಸಾಹಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.