ಚಿಂತಾಮಣಿ: ತಾಲ್ಲೂಕಿನ ಮುರುಗಮಲ್ಲ ಗ್ರಾಮದ ಜಂಗ್ಲೀಫೀರ್ ದರ್ಗಾ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ವರದಾಪುರ ಗ್ರಾಮದ ಗಣೇಶ್ ಮತ್ತು ವಾಸೀಂಖಾನ್ ಬಂಧಿತರು. ಬಂಧಿತರಿಂದ ಮಾರಾಟ ಮಾಡಲು ತಂದಿದ್ದ ಒಂದು ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಮುರುಗಮಲ್ಲ ಗ್ರಾಮದ ಜಂಗ್ಲೀಫೀರ್ ದರ್ಗಾದ ಬಳಿ ಇಬ್ಬರು ವ್ಯಕ್ತಿಗಳು ಗಾಂಜಾ ಮಾರಾಟ ಮಾಡಲು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕೆಂಚಾರ್ಲಹಳ್ಳಿ ಠಾಣೆ ಸಬ್ ಇನ್‌ಸ್ಪೆಕ್ಟರ್ ಎಂ.ಶಿವಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾರೆ. ಪೊಲೀಸರನ್ನು ಕಂಡ ಕೂಡಲೇ ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಪೊಲೀಸರು ಬೆನ್ನಟ್ಟಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಅಪರಾಧ ಪತ್ತೆ ಸಿಬ್ಬಂದಿ ಲಕ್ಷ್ಮಿಪತಿ ಮತ್ತು ಶ್ರೀನಾರಾಯಣ ದಾಳಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.