
ಬಾಗೇಪಲ್ಲಿ: ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳದೆ ತಾಲ್ಲೂಕಿನ ಗಂಟ್ಲಮಲ್ಲಮ್ಮ ಕಣಿವೆ ಬಳಿಯ ಜಲಾಶಯ ನಿರ್ಮಿಸಬೇಕು. ಜಲಾಶಯಕ್ಕೆ ಯಾವುದೇ ಕಾರಣಕ್ಕೂ ತಮ್ಮ ಕೃಷಿ ಜಮೀನುಗಳನ್ನು ನೀಡಲಾಗದು ಎಂದು ಗಂಟ್ಲಮಲ್ಲಮ್ಮ ಜಲಾಶಯ ಸಂತ್ರಸ್ತ ರೈತರ ಹೋರಾಟ ಸಮಿತಿ ಹೇಳಿದೆ.
ತಾಲ್ಲೂಕಿನ ಹಿರಣ್ಯೇಶ್ವರ ದೇವಾಲಯದ ಆವರಣದಲ್ಲಿ ಬುಧವಾರ ಗಂಟ್ಲಮಲ್ಲಮ್ಮ ಕಣಿವೆ ಜಲಾಶಯ ಸಂತ್ರಸ್ಥ ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಮತ್ತು ಮುಖಂಡರ ಸಭೆ ನಡೆಯಿತು. ಸಭೆಯಲ್ಲಿ ಸಮಿತಿ ಅಧ್ಯಕ್ಷ ಆಗಿ ಚಂದ್ರ, ಕಾರ್ಯದರ್ಶಿಯಾಗಿ ತಿಪ್ಪರಾಜು, ಗೌರವಾಧ್ಯಕ್ಷರಾಗಿ ಡಿ.ಟಿ. ಮುನಿಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು.
ಗಂಟ್ಲಮಲ್ಲಮ್ಮ ಕಣಿವೆ ಜಲಾಶಯ ನಿರ್ಮಿಸಿ, ಪಾತಪಾಳ್ಯ, ಚೇಳೂರು, ಗೂಳೂರು ಭಾಗಗಳಿಗೆ ನೀರು ವಿತರಿಸಬೇಕು ಎಂಬುದು ತಮ್ಮ ಬೇಡಿಕೆ. ನೀರು ಕಲ್ಪಿಸುವ ಯೋಜನೆಗೆ ರಾಜ್ಯ ಸರ್ಕಾರ ₹200 ಕೋಟಿ ಹಣ ಅನುದಾನ ನೀಡಿದೆ. ಆದರೆ, ಈಗಿನ ಕಟ್ಟೆ ಮೇಲೆ ಜಲಾಶಯ ನಿರ್ಮಿಸುವುದನ್ನು ಬಿಟ್ಟು, ಜಲಾಶಯದ ಕಟ್ಟೆಗಾಗಿ 34 ಮಂದಿಯ ರೈತರ ಜಮೀನುಗಳ ಸ್ವಾಧೀನಕ್ಕೆ ಗುರುತಿಸಲಾಗಿದೆ. ಪ್ರಾಸ್ತಾಪಿತ ಮುಳುಗಡೆಯಾಗುವ ಜಮೀನುಗಳ ಸರ್ವೆ ನಂಬರ್, ರೈತರ ಹೆಸರುಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.
ಸಮಿತಿ ಕಾರ್ಯದರ್ಶಿ ಸಂಗಟಪಲ್ಲಿಯ ತಿಪ್ಪೇಸ್ವಾಮಿ ಮಾತನಾಡಿ, ‘ಅನೇಕ ವರ್ಷಗಳಿಂದ ಭೂಮಿ ನಂಬಿ ಜೀವನ ನಡೆಸುತ್ತಿದ್ದೇವೆ. ಗಂಟ್ಲಮಲ್ಲಮ್ಮ ಜಲಾಶಯ ನಿರ್ಮಾಣದ ಹೆಸರಿನಲ್ಲಿ ರೈತರ ಜಮೀನು ಸ್ವಾಧೀನಪಡಿಸಿಕೊಂಡರೆ, ಮುಂದೆ ನಮ್ಮ ಗತಿ ಏನು’ ಎಂದು ಪ್ರಶ್ನಿಸಿದರು.
‘ಜಲಾಶಯ ನಿರ್ಮಿಸಲು ನಮ್ಮ ತಕರಾರು ಇಲ್ಲ. ಆದರೆ ಕಟ್ಟೆಯ ದೂರದ 34 ರೈತರ ಜಮೀನುಗಳಲ್ಲಿ ಜಲಾಶಯದ ಕಟ್ಟಡ ನಿರ್ಮಾಣಕ್ಕೆ ಹೊರಟಿರುವುದಕ್ಕೆ ನಮ್ಮ ತಕಾರರು ಇದೆ’ ಎಂದರು.
ಸಮಿತಿಯ ಅಧ್ಯಕ್ಷ ಚಂದ್ರ ಮಾತನಾಡಿ, ‘ನಮ್ಮ ಜಮೀನುಗಳನ್ನು ಸ್ವಾಧೀನಪಡಿಸಲು ಬಿಡಲ್ಲ. ಈ ಸಂಬಂಧ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗುವುದು’ ಎಂದರು.
ಸಮಿತಿ ಸಭೆಯಲ್ಲಿ ಕೃಷಿಕೂಲಿ ಸಂಘದ ಎಂ.ಪಿ.ಮುನಿವೆಂಕಟಪ್ಪ, ಬಿಳ್ಳೂರು ನಾಗರಾಜ್, ಅಶ್ವಥ್ಥಪ್ಪ, ಎಲ್.ವೆಂಕಟೇಶ್, ಸಂತ್ರಸ್ತರ ರೈತರಾದ ಬಾಬು, ನಾರಾಯಣಪ್ಪ, ರಾಮಪ್ಪ, ಚಿನ್ನರಾಮಚಂದ್ರಪ್ಪ, ಮುನೆಪ್ಪ, ಶಿವಣ್ಣ, ಕದಿರಪ್ಪ, ಸುಶೀಲಮ್ಮ, ಮಹಮದ್‍ಹುಸೇನ್, ಹುಸೇನ್‍ಸಾಬ, ಎಂ.ಹೈದರ್‍ವಲಿ, ಗಂಗುಲಪ್ಪ, ಲಕ್ಷ್ಮಿದೇವಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.