ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ.8ರಂದು ಶಿಡ್ಲಘಟ್ಟ ತಾಲ್ಲೂಕಿಗೆ ಭೇಟಿ ನೀಡುವರು. ಇಲ್ಲಿ ಜಿಲ್ಲೆಗೆ ಸಂಬಂಧಿಸಿದ ₹ 1 ಸಾವಿರ ಕೋಟಿ ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸುವರು.
ಇದೇ ಕಾರ್ಯಕ್ರಮದಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಗಂಟ್ಲಮಲ್ಲಮ್ಮ ಅಣೆಕಟ್ಟೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲು ಸಚಿವ ಡಾ.ಎಂ.ಸಿ.ಸುಧಾಕರ್ ಒಲವು ತೋರಿದ್ದಾರೆ. ಆದರೆ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಸ್ವಕ್ಷೇತ್ರ ಬಾಗೇಪಲ್ಲಿಯಲ್ಲಿಯೇ ಅಣೆಕಟ್ಟೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲು ದೃಢ ನಿರ್ಧಾರ ಮಾಡಿದ್ದಾರೆ. ಈ ವಿಚಾರ ಶಾಸಕರು ಮತ್ತು ಸಚಿವರ ನಡುವೆ ತಿಕ್ಕಾಟಕ್ಕೂ ಕಾರಣವಾಗಿದೆ ಎನ್ನುತ್ತವೆ ಶಾಸಕರ ಆಪ್ತ ಮೂಲಗಳು.
‘ಗಂಟ್ಲಮಲ್ಲಮ್ಮ’ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಹುದೊಡ್ಡ ಯೋಜನೆ. ನಂದಿಗಿರಿಧಾಮದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅಂಗೀಕಾರ ದೊರೆಯಿತು. ಕಾಮಗಾರಿಗೆ ಕಾರ್ಯಾದೇಶವೂ ಆಗಿದೆ. ₹ 200 ಕೋಟಿ ವೆಚ್ಚದಲ್ಲಿ ಅಣೆಕಟ್ಟೆ ನಿರ್ಮಾಣವಾಗಲಿದೆ.
ಶಾಸಕ ಸುಬ್ಬಾರೆಡ್ಡಿ ಅವರ ದಶಕಗಳ ಕನಸು ಈಗ ನನಸಾಗುತ್ತಿದೆ. ಈ ಹಿಂದಿನಿಂದಲೂ ಅವರು ಗಂಟ್ಲಮಲ್ಲಮ್ಮ ಅಣೆಕಟ್ಟೆ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಇಂತಹ ಮಹತ್ವದ ಯೋಜನೆಯ ಶಂಕುಸ್ಥಾಪನೆ ತಮ್ಮ ಕ್ಷೇತ್ರದಲ್ಲಿಯೇ ಆಗಬೇಕು ಎನ್ನುವುದು ಸುಬ್ಬಾರೆಡ್ಡಿ ಅವರ ಪಟ್ಟು ಮತ್ತು ಇಚ್ಛೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಜಿಲ್ಲೆಯ ಎಲ್ಲ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಮತ್ತು ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಅವರಿಂದ ಮಾಡಿಸಲು ಮುಂದಾಗಿದ್ದಾರೆ.
ಈ ಸಂಬಂಧ ಇತ್ತೀಚೆಗೆ ಜಿಲ್ಲಾಡಳಿತ ಭವನದಲ್ಲಿ ಸಭೆ ನಡೆಸಿದ ಸಚಿವರು, ‘₹ 1 ಸಾವಿರ ಕೋಟಿಗೂ ಹೆಚ್ಚು ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿ ಚಾಲನೆ ನೀಡುವರು’ ಎಂದಿದ್ದರು. ಹೀಗೆ ಚಾಲನೆ ನೀಡುವ ಪಟ್ಟಿಯಲ್ಲಿ ಗಂಟ್ಲಮಲ್ಲಮ್ಮ ಅಣೆಕಟ್ಟೆಯ ವಿಚಾರವನ್ನೂ ಪ್ರಸ್ತಾಪಿಸಿದ್ದರು.
ಮುಖ್ಯಮಂತ್ರಿ ಅವರ ಕಾರ್ಯಕ್ರಮದಲ್ಲಿ ಗಂಟ್ಲಮಲ್ಲಮ್ಮ ಅಣೆಕಟ್ಟೆಯ ಭೂಮಿ ಪೂಜೆ ಕಾಮಗಾರಿ ನಡೆಯುವುದೇ ಅಥವಾ ಬಾಗೇಪಲ್ಲಿಯಲ್ಲಿ ಉಪಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಅಣೆಕಟ್ಟೆಗೆ ಶಂಕುಸ್ಥಾಪನೆ ನೆರವೇರಲಿದೆಯೇ ಎನ್ನುವ ಚರ್ಚೆ ಬಾಗೇಪಲ್ಲಿ ಕ್ಷೇತ್ರದಲ್ಲಿ ಜೋರಾಗಿದೆ.
‘ನಮ್ಮ ಕ್ಷೇತ್ರದ ಕಾರ್ಯಕ್ರಮವನ್ನು ನಮ್ಮಲ್ಲಿಯೇ ಮಾಡುತ್ತೇವೆ ಎಂದು ಶಾಸಕರು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಿದ್ದರೂ ಶಿಡ್ಲಘಟ್ಟದಲ್ಲಿ ಶಂಕುಸ್ಥಾಪನೆ ನೆರವೇರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಏನೇ ಆದರೂ ಬಾಗೇಪಲ್ಲಿಯಲ್ಲಿ ಗಂಟ್ಲಮಲ್ಲಮ್ಮ ಅಣೆಕಟ್ಟೆ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯುತ್ತದೆ’ ಎಂದು ಶಾಸಕರ ಆಪ್ತರು ತಿಳಿಸುವರು.
ಬಹುಕಾಲದ ಬೇಡಿಕೆ: ಗಂಟ್ಲಮಲ್ಲಮ್ಮ ಅಣೆಕಟ್ಟೆ, ಪಾತಪಾಳ್ಯ ಮತ್ತು ಚೇಳೂರು ಭಾಗದ ಜನರ ಬಹುಕಾಲದ ಬೇಡಿಕೆ. ಪಾತಪಾಳ್ಯ ಮಾರ್ಗವಾಗಿ ಬಾಗೇಪಲ್ಲಿಗೆ ಸಂಚರಿಸುವಾಗ ಪಾತಕೋಟೆ ಗ್ರಾಮವಿದೆ. ಈ ಗ್ರಾಮದ ಬಳಿಯ ಗಂಟ್ಲಮಲ್ಲಮ್ಮ ಕಣಿವೆಯಲ್ಲಿ ನೀರು ವ್ಯರ್ಥವಾಗಿ ಹರಿಯುತ್ತಿದೆ. ಕಣಿವೆ ಮಧ್ಯದಲ್ಲಿ ಎರಡು ಕಡೆ ಬೆಟ್ಟಗುಡ್ಡಗಳು ಇವೆ. ಬೆಟ್ಟಗುಡ್ಡಗಳಿಂದ ಹರಿದು ನೀರು ಕಣಿವೆ ಸೇರುತ್ತಿವೆ.
ಇಲ್ಲಿ ಅಣೆಕಟ್ಟು ನಿರ್ಮಿಸಿ ಸಂಗ್ರಹವಾಗುವ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಪಾತಪಾಳ್ಯಕ್ಕೆ ನೀಡಲು ಸುಬ್ಬಾರೆಡ್ಡಿ ನಿರ್ಧರಿಸಿದ್ದಾರೆ.
‘ಹಲವು ವರ್ಷಗಳ ಕನಸು; ಡಿಸಿಎಂ ಶಂಕುಸ್ಥಾಪನೆ’
ಗಂಟ್ಲಮಲ್ಲಮ್ಮ ಅಣೆಕಟ್ಟೆ ನಿರ್ಮಾಣ ನನ್ನ ಹಲವು ವರ್ಷಗಳ ಕನಸು. ಈಗ ಅದು ಈಡೇರುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಮಯ ಕೇಳಿದ್ದೇನೆ. ಈ ವಾರದಲ್ಲಿ ಸಮಯ ನಿಗದಿ ಮಾಡಿಕೊಂಡು ಬಾಗೇಪಲ್ಲಿಯಲ್ಲಿಯೇ ಅದ್ಧೂರಿಯ ಕಾರ್ಯಕ್ರಮ ನಡೆಸಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ತಿಳಿಸಿದ್ದೇನೆ. ಅವರು ಸಹ ಒಪ್ಪಿದ್ದಾರೆ. ಬಾಗೇಪಲ್ಲಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಉದ್ಘಾಟನೆ ಬಾಗೇಪಲ್ಲಿಯಲ್ಲಿಯೇ ನಡೆಯಲಿದೆ ಎಂದರು. ₹ 30 ಕೋಟಿ ವೆಚ್ಚದಲ್ಲಿ ಅಲ್ಪಸಂಖ್ಯಾತ ವಸತಿ ಶಾಲೆ ನಿರ್ಮಾಣವಾಗುತ್ತಿದ್ದು ಸಚಿವ ಜಮೀರ್ ಅಹಮದ್ ಭೂಮಿ ಪೂಜೆ ನೆರವೇರಿಸುವರು. ₹ 42 ಕೋಟಿ ವೆಚ್ಚದ ಕಾರ್ಮಿಕ ವಸತಿಯ ಭೂಮಿ ಪೂಜೆಯನ್ನು ಸಂತೋಷ್ ಲಾಡ್ ನೆರವೇರಿಸುವರು. ಈ ಬಗ್ಗೆ ಆಯಾ ಸಚಿವರ ಜೊತೆ ಮಾತುಕತೆ ಸಹ ನಡೆಸಿದ್ದೇನೆ ಎಂದರು. ಎಚ್.ಎನ್.ವ್ಯಾಲಿ ನೀರು ಬಾಗೇಪಲ್ಲಿಗೆ ಬರುತ್ತಿದೆ. ಗುಡಿಬಂಡೆ ಕೆರೆಯ ಬಳಿ ₹ 10 ಕೋಟಿಯಲ್ಲಿ ವೆಚ್ಚದಲ್ಲಿ ಸೇತುವೆ ನಿರ್ಮಾವಾಗಿದೆ. ಈ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಸಚಿವ ಬೋಸರಾಜು ಪಾಲ್ಗೊಳ್ಳುವರು. ಕೈಗಾರಿಕೆಗಳ ಆರಂಭಕ್ಕೆ ಹೆಜ್ಜೆ ಇಟ್ಟಿದ್ದು ಅದು ಸಾಕಾರವಾಗುತ್ತಿದೆ. ಆಗ ಮುಖ್ಯಮಂತ್ರಿ ಅವರನ್ನು ಬಾಗೇಪಲ್ಲಿಗೆ ಕರೆಯಿಸಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.