ಬಾಗೇಪಲ್ಲಿ: ಪಟ್ಟಣದ ಹೊರವಲಯದ ಪಾತಬಾಗೇಪಲ್ಲಿ ರಸ್ತೆಯಲ್ಲಿನ ಗೌಸೇ-ಎ-ಪಾಕ್ ಆಸ್ತಾನದಲ್ಲಿ ಸೂಫಿ ಸಂತ ಮೆಹಬೂಬ್-ಎ-ಸುಬಹಾನಿ ಅವರ ಸ್ಮರಣೆ ಪ್ರಯುಕ್ತ ಹಿಂದೂ ಮತ್ತು ಮುಸ್ಲಿಂ ಭಕ್ತರ ಸಮ್ಮುಖದಲ್ಲಿ ಗ್ಯಾರವಿ ಹಬ್ಬವನ್ನು ಭಾನುವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಪಟ್ಟಣದ ಗೂಳೂರು ರಸ್ತೆಯಿಂದ ಡಿವಿಜಿ ಮುಖ್ಯರಸ್ತೆಯಲ್ಲಿ ಮೆಕ್ಕಾ, ಮದೀನಾ ಆಕೃತಿಗಳ ಜೊತೆಗೆ ತೆರೆದ ಅಲಂಕೃತ ವಿದ್ಯುತ್ ದೀಪಾಲಂಕಾರದಲ್ಲಿ ಗಂಧದ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ನೆರೆಯ ಆಂಧ್ರಪ್ರದೇಶದ ಪೆನುಕೊಂಡದ ಸೂಫಿ ಸಂತರು, ಫಕೀರರು ಡೇರಾ ಹೊಡೆಯುತ್ತಾ, ಸೂಫಿ ಹಾಡುಗಳನ್ನು ಹಾಡಿದರು. ಲೋಕಕಲ್ಯಾಣಾರ್ಥಕ್ಕೆ ಮತ್ತು ಜಗತ್ತಿನಲ್ಲಿ ಶಾಂತಿ ನೆಲೆಸಲು ಪ್ರಾರ್ಥನೆ ಮಾಡಿದರು.
ಆಸ್ತಾನದ ಮುಂದೆ ಫಕೀರರು ತಮ್ಮ ಭಕ್ತಿ ಸಮರ್ಪಿಸಲು ಹರಿತವಾದ ಸೂಜಿಗಳನ್ನು ದೇಹದ ಭಾಗಗಳಿಗೆ ಚುಚ್ಚಿಕೊಂಡರು. ಆಸ್ತಾನದ ಹಜರತ್ ಇಸ್ಮಾಯಿಲ್ ಷಾ ಖಾದ್ರಿ ಅವರು ಫಕೀರರ ಸಮ್ಮುಖದಲ್ಲಿ ಆಸೀಫ್ ಷಾ ಖಾದ್ರಿ ಅವರು ಹಜರತ್ ಮೆಹಬೂಬ್ ಎ ಸುಭಹಾಣಿ ಅವರ ನಶಾನ್ ಎ ಗೌಸ್ ಎ ಪಾಕ್‌ಗೆ ಹೂವಿನ ಚಾದರ್ ಹಾಗೂ ಗಂಧ ಸಮರ್ಪಿಸಿದರು. ಆಸ್ತಾನದ ಒಳಗೆ, ಹೊರಗೆ ಹಾಗೂ ದಾರಿಯುದ್ದಕ್ಕೂ ದೀಪಾಲಂಕಾರ ಮಾಡಲಾಗಿತ್ತು. ಧ್ವನಿವರ್ಧಕದ ಮೂಲಕ ಖವ್ವಾಲಿಗಳನ್ನು ಹಾಡಿಸಲಾಯಿತು.
ಭಾನುವಾರ ರಾತ್ರಿ ಆಸ್ತಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ, ಮುಸ್ಲಿಂ ಸಮುದಾಯದ ನೂರಾರು ಮಂದಿ ಭಾಗವಹಿಸಿದ್ದರು. ಕಡಲೆ, ಸಕ್ಕರೆ, ಸಿಹಿಬೂಂದಿ ಇಟ್ಟು ಪ್ರಾರ್ಥಿಸಿದರು.
ಆಸ್ತಾನದ ಹಜರತ್ ಇಸ್ಮಾಯಿಲ್ ಷಾ ಖಾದ್ರಿ ಮಾತನಾಡಿ, ಜಗತ್ತಿನಲ್ಲಿ ಜಾತಿ, ಧರ್ಮಗಳ ನಡುವೆ ಕೋಮು ಕದಡುವ ಘಟನೆಗಳು ಹೆಚ್ಚುತ್ತಿವೆ. ಎಲ್ಲ ಜಾತಿ, ಧರ್ಮಗಳವರು ಸಹೋದರತೆ, ಸಹಬಾಳ್ವೆ ಮತ್ತು ಸಮಾನತೆಯಿಂದ ಇರಬೇಕು. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಮನಕುಲಕ್ಕೆ ಒಳಿತು ಆಗಲು ಗ್ಯಾರವಿ ಹಬ್ಬ ಆಚರಿಸಲಾಗಿದೆ. ಇಲ್ಲಿ ಯಾವುದೇ ಭೇಧ ಭಾವ ಇಲ್ಲ. ಎಲ್ಲರೂ ಸಮಾನರು ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಈ ಸಂಧರ್ಭದಲ್ಲಿ ಸೂಫಿ ಆರಾಧಕ ಡಾ.ಕೆ.ಎಂ.ನಯಾಜ್ ಅಹಮದ್, ಆಸೀಫ್ ಷಾ ಖಾದ್ರಿ, ಮುಹೀದ ಷಾ ಖಾದ್ರಿ, ಮೆಕಾನಿಕ್‍ಬಾಬು, ಸೈಪುಲ್ಲಾ, ದಸ್ತಗೀರ್, ಸುಭಹಾನ್, ಎಂ.ಎನ್.ರಘುರಾಮರೆಡ್ಡಿ, ಅಶ್ವಥ್ಥಪ್ಪ, ಕೆ.ಮುನಿಯಪ್ಪ, ಒಬಳರಾಜು, ಮಂಜುನಾಥರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.