ADVERTISEMENT

ಚಿಕ್ಕಬಳ್ಳಾಪುರ: ಸರ್ಕಾರಿ ಕಾಲೇಜು ಆವರಣಕ್ಕೆ ಕಸ!

ತಡೆಗೋಡೆ ನಿರ್ಮಿಸುವಂತೆ ಕಾಲೇಜಿನ ಸಿಬ್ಬಂದಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 3:43 IST
Last Updated 13 ಆಗಸ್ಟ್ 2021, 3:43 IST
ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದ ಒಂದು ಬದಿಯಲ್ಲಿ ಕಸದ ರಾಶಿ
ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದ ಒಂದು ಬದಿಯಲ್ಲಿ ಕಸದ ರಾಶಿ   

ಚಿಕ್ಕಬಳ್ಳಾಪುರ: ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣ ಕಸದ ತೊಟ್ಟಿ ಆಗುತ್ತಿದೆ.

ಹೀಗೆ ಅಸಮಾಧಾನ ಮತ್ತು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಕಾಲೇಜಿನ ಸಿಬ್ಬಂದಿ.

ಕಾಲೇಜು ಆವರಣದಲ್ಲಿ ದಿನದಿಂದ ದಿನಕ್ಕೆ ಕಸ ಹೆಚ್ಚುತ್ತಿರುವುದೇ ಈ ಬೇಸರಕ್ಕೆ ಕಾರಣ. ಬಿ.ಬಿ ರಸ್ತೆಯಿಂದ ಕೆಳಗಿನ ತೋಟಗಳತ್ತ ಸಾಗುವ ದಾರಿಯಲ್ಲಿ ಕಾಲೇಜು ಆವರಣದ ತಡೆಗೋಡೆಯನ್ನು ಬಹಳ ದಿನಗಳ ಹಿಂದೆ ತೆರವುಗೊಳಿಸಲಾಗಿದೆ. ಈ ಮಾರ್ಗದ ಮೂಲಕ ಸಾರ್ವಜನಿಕರು ಮುಕ್ತವಾಗಿ ಕಾಲೇಜು ಆವರಣಕ್ಕೆ ಪ್ರವೇಶಿಸಬಹುದು. ಇತ್ತೀಚೆಗೆ ಕೆಳಗಿನ ತೋಟಗಳ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲಾಯಿತು. ಈ ವೇಳೆ ಈ ರಸ್ತೆ ಸಹ ಬಂದ್ ಮಾಡಲಾಗಿತ್ತು.

ADVERTISEMENT

ಈಗ ಸಮೀಪದ ಮಾರುಕಟ್ಟೆಯ ತ್ಯಾಜ್ಯವನ್ನು ಹೇರಳವಾಗಿಯೇ ಕಾಲೇಜು ಆವರಣಕ್ಕೆ ತಂದು ಸುರಿಯಲಾಗುತ್ತಿದೆ. ಕಾಲೇಜು ಆವರಣದ ಒಂದು ಬದಿ ಕಸದ ತೊಟ್ಟಿಯಂತೆ ಕಾಣುತ್ತದೆ. ಪ್ಲಾಸ್ಟಿಕ್ ಕವರ್‌ಗಳು, ತರಕಾರಿ ಕಸ ಹೀಗೆ ವಿವಿಧ ತ್ಯಾಜ್ಯಗಳು ರಾಶಿ ರಾಶಿಯಾಗಿವೆ. ಹೀಗೆ ಸಾರ್ವಜನಿಕರು ಮುಕ್ತವಾಗಿ ಕಾಲೇಜು ಆವರಣ ಪ್ರವೇಶಕ್ಕೆ ಅವಕಾಶವಾಗಿರುವುದು ಕಸ ಹೆಚ್ಚಲು ಸಹ ಕಾರಣವಾಗಿದೆ.

ಲಾಕ್‌ಡೌನ್ ಸಮಯದಲ್ಲಿ ಕಾಲೇಜು ಆವರಣದಲ್ಲಿ ತಾತ್ಕಾಲಿಕವಾಗಿ ಮಾರುಕಟ್ಟೆಯಾಗಿ ರೂಪಿಸಲಾಯಿತು. ಆ ಸಮಯದಲ್ಲಿ ಎಸೆದ ಕಸ ಸಹ ಅಪಾರವಾಗಿದೆ. ಈಗಲೂ ವ್ಯಾಪಾರಿಗಳು ಇಲ್ಲಿಗೆ ಕಸವನ್ನು ತಂದು ಎಸೆಯುತ್ತಿದ್ದಾರೆ. ಈ ಬಗ್ಗೆ ನಗರಸಭೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಿಬ್ಬಂದಿ ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.