ADVERTISEMENT

ಕಸದಿಂದ ರಸ: ವಿದ್ಯಾರ್ಥಿಗಳ ಕೈಚಳಕ

ಅನುಪಯುಕ್ತ ವಸ್ತುಗಳಿಂದ ಸಾಮಗ್ರಿಗಳ ತಯಾರಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 11:21 IST
Last Updated 30 ನವೆಂಬರ್ 2022, 11:21 IST
ಬಾಗೇಪಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ರಚಿಸಿರುವ ಕರಕುಶಲ ವಸ್ತುಗಳ ಜೊತೆಗೆ ವೃತ್ತಿ ತರಬೇತಿ ಶಿಕ್ಷಕಿ ಎಸ್. ರಶೀದಾ, ವಿದ್ಯಾರ್ಥಿನಿಯರು
ಬಾಗೇಪಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ರಚಿಸಿರುವ ಕರಕುಶಲ ವಸ್ತುಗಳ ಜೊತೆಗೆ ವೃತ್ತಿ ತರಬೇತಿ ಶಿಕ್ಷಕಿ ಎಸ್. ರಶೀದಾ, ವಿದ್ಯಾರ್ಥಿನಿಯರು   

ಬಾಗೇಪಲ್ಲಿ: ಅನುಪಯುಕ್ತ ವಸ್ತುಗಳನ್ನು ಬಳಸಿಕೊಂಡು ತಯಾರಿಸುವ ಕರಕುಶಲ ಸ್ಪರ್ಧೆಯಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಜಿಲ್ಲಾಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಸತತ 5ನೇ ಬಾರಿಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಶಾಲೆ ಎಂಬ ಕೀರ್ತಿಗೆ ಭಾಜನವಾಗಿದೆ.

ನವೆಂಬರ್ 25 ರಂದು ಚಿಕ್ಕಬಳ್ಳಾಪುರದ ಸೇಂಟ್ ಜೋಸೆಫ್ ಶಾಲೆಯಲ್ಲಿ ನಡೆದ ಕರಕುಶಲ ಸ್ಪರ್ಧೆಯಲ್ಲಿ ಜಿಲ್ಲೆಯಿಂದ 40 ಶಾಲೆಗಳು ಭಾಗವಹಿಸಿದ್ದವು. 21 ಹೊಲಿಗೆ ಶಾಲೆಗಳ ಪೈಕಿ ತಾಲ್ಲೂಕಿನ ಯಲ್ಲಂಪಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಹೊಲಿಗೆ, ಎಂಬ್ರಾಯಿಡರಿ ಮತ್ತು ಪರ್ಸ್‌ಗಳನ್ನು ತಯಾರಿಸಿ ಜಯಶಾಲಿಗಳಾಗಿದ್ದಾರೆ.

ಶಾಲೆಯ ವೃತ್ತಿ ತರಬೇತಿ ಶಿಕ್ಷಕಿ ಎಸ್. ರಶೀದಾ ವಾರಕ್ಕೆ 4 ತರಗತಿಗಳಲ್ಲಿ ಕರಕುಶಲ ತರಬೇತಿ ನೀಡುತ್ತಾರೆ. ಜೊತೆಗೆ ಪಠ್ಯದ ವಿಷಯಗಳನ್ನು ಪ್ರಾಯೋಗಿಕವಾಗಿ ವಸ್ತುಗಳನ್ನು ಸಿದ್ಧಪಡಿಸಿ ಬೋಧಿಸಲಾಗುತ್ತಿದೆ.

ADVERTISEMENT

ಗಣಿತ, ವಿಜ್ಞಾನ, ಕನ್ನಡ, ಸಮಾಜ ಸೇರಿದಂತೆ ವಿವಿಧ ವಿಷಯಗಳನ್ನು ಬೋಧಿಸಲು ಅನುಕೂಲವಾಗುವ ಮಹನೀಯರು, ಪಂಚೇಂದ್ರೀಯಗಳು, ಜೀರ್ಣನಾಳ, ಪ್ರಾಣಿಗಳು, ತರಕಾರಿಗಳು, ಕೃಷಿ, ತೋಟಗಾರಿಕೆ ಸೇರಿದಂತೆ ಇನ್ನಿತರ ವಸ್ತುಗಳು ವಿದ್ಯಾರ್ಥಿಗಳ ಕರಕುಶಲ ಕಲೆಯಿಂದ ಮೂಡಿಬಂದವು.

ಶಾಲೆಯಲ್ಲಿ ಕರಕುಶಲತೆಗೆ ಹೆಚ್ಚಿನ ಪ್ರೋತ್ಸಾಹವಿದೆ. ಇದು ಟೈಲರಿಂಗ್, ಎಂಬ್ರಾಯಿಡರಿ, ಕರಕುಶಲ ವಸ್ತುಗಳ ತರಬೇತಿ ಪಡೆಯಲು ಅನುಕೂಲವಾಗಿದೆ ಎಂದು ಶಾಲಾ ವಿದ್ಯಾರ್ಥಿನಿಯರಾದ ಜಿ.ಆರ್. ಮೌನಿಕಾ, ಜಿ.ಆರ್. ನವ್ಯಶ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಲೆಯಲ್ಲಿ ವೃತ್ತಿ ತರಬೇತಿ ಶಿಕ್ಷಕಿಯಾಗಿ ಕರಕುಶಲ ವಸ್ತುಗಳನ್ನು ಮಕ್ಕಳೇ ಸಿದ್ಧಪಡಿಸುವಂತೆ ಮಾಡಿದ್ದೇನೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕಲಿಕೆಗೆ ಮುಖ್ಯವಾಗಿದೆ ಎಂದು ವೃತ್ತಿ ತರಬೇತಿ ಶಿಕ್ಷಕಿ ಎಸ್. ರಶೀದಾ ತಿಳಿಸಿದ್ದಾರೆ.

ವೃತ್ತಿ ತರಬೇತಿ ಶಿಕ್ಷಕಿಯಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕರಕುಶಲ ವಸ್ತುಗಳನ್ನು ತಯಾರಿಸಿದ್ದಾರೆ. ಶಿಕ್ಷಣದ ಜೊತೆ ಕರಕುಶಲ ವಸ್ತುಗಳ ಕಲಿಕೆಯಿಂದ ವಿದ್ಯಾರ್ಥಿಗಳ ಮಾನಸಿಕವಾಗಿ ಪ್ರಗತಿ ಹೊಂದಲು ಸಾಧ್ಯ ಆಗಿದೆ ಎಂದು ಶಾಲಾ ಪ್ರಭಾರಿ ಮುಖ್ಯಶಿಕ್ಷಕ ಕೆ.ಸಿ. ಅಶ್ವಥ್ಥಪ್ಪ ತಿಳಿಸಿದ್ದಾರೆ.

ಬಣ್ಣದ ಹಾಳೆಗಳಿಂದ ಹೂವು

ಮನೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಬಿಸಾಡಿರುವ ಅನುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಸೀರೆಗಳಿಗೆ ಹೊಂದುವ ಬಣ್ಣ ಬಣ್ಣದ ಸಿಲ್ಕ್ ದಾರ, ಕುಂದನ್, ಬಟ್ಟೆಗಳನ್ನು ಉಪಯೋಗಿಸಿ ಹೊಲಿಗೆ, ಎಂಬ್ರಾಯಿಡರಿ,ಪರ್ಸ್‍ಗಳು, ಟಿವಿ, ಫ್ರಿ‍‍ಡ್ಜ್‌, ಟೀಪಾಯಿಗಳ ಮೇಲೆ ಹೊದಿಸುವ ಬಟ್ಟೆ,

ಬಣ್ಣ ಬಣ್ಣದ ಹಾಳೆ ಬಳಸಿ ಗುಲಾಬಿ ಹೂವು ಸೇರಿದಂತೆ ಇನ್ನಿತರ ಗೃಹ ಹಾಗೂ ಅಲಂಕಾರಿಕ ವಸ್ತು ತಯಾರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.