ADVERTISEMENT

ಚೌದರಿ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ ಅಂತ್ಯ: ಕಾರ್ಮಿಕರಿಗೆ ವೇತನ ಸಹಿತ PF

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 6:58 IST
Last Updated 4 ಸೆಪ್ಟೆಂಬರ್ 2025, 6:58 IST
ಬಾಗೇಪಲ್ಲಿ ಹೊರವಲಯದ ಚೌದರಿ ಗಾರ್ಮೆಂಟ್ಸ್ ಮುಂದೆ ಕಾರ್ಮಿಕರು ಪ್ರತಿಭಟನೆ ಹಮ್ಮಿಕೊಂಡಿದ್ದರು 
ಬಾಗೇಪಲ್ಲಿ ಹೊರವಲಯದ ಚೌದರಿ ಗಾರ್ಮೆಂಟ್ಸ್ ಮುಂದೆ ಕಾರ್ಮಿಕರು ಪ್ರತಿಭಟನೆ ಹಮ್ಮಿಕೊಂಡಿದ್ದರು    

ಬಾಗೇಪಲ್ಲಿ: ಪಟ್ಟಣದ ಹೊರವಲಯದ ಚೌದರಿ ಗಾರ್ಮೆಂಟ್ಸ್ 130 ಕಾರ್ಮಿಕರ ವಜಾ ಖಂಡಿಸಿ ಕಾರ್ಮಿಕರ ಪ್ರತಿಭಟನೆ ಬುಧವಾರಕ್ಕೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, 40 ಕಾರ್ಮಿಕರಿಗೆ ವೇತನ ಸಹಿತ ಪಿಎಫ್ ಹಣ ನೀಡಲು, ಉಳಿದ ಕಾರ್ಮಿಕರು ಕೆಲಸಕ್ಕೆ ಸೇರಿಸಲು ಗಾರ್ಮೆಂಟ್ಸ್ ಆಡಳಿತ ಒಪ್ಪಿಗೆ ನೀಡಿದ್ದರಿಂದ ಕಾರ್ಮಿಕರು ಪ್ರತಿಭಟನೆ ವಾಪಸ್‌ ಪಡೆದರು.

ಕಾರ್ಮಿಕರ ಪ್ರತಿಭಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗನ್ನಾಥ್ ರೈ, ಉಪಾಧೀಕ್ಷಕ ಶಿವಕುಮಾರ್, ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಶಬನಾ ಆಜ್ಮಿ, ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ, ತಾಲ್ಲೂಕು ಕಾರ್ಮಿಕ ಇಲಾಖೆ ಅಧಿಕಾರಿ ರಾಕೇಶ್, ಗಾರ್ಮೆಂಟ್ಸ್ ಆಡಳಿತ ಮಂಡಳಿಯವರು ಆಗಮಿಸಿ ಸಮಸ್ಯೆ ಆಲಿಸಿದರು. ಕಾರ್ಮಿಕರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ವಜಾ ಮಾಡಿದ ಕಾರ್ಮಿಕರಿಗೆ ವೇತನ ಸಹಿತ ಪಿಎಫ್ ಹಣ ವಿತರಿಸಬೇಕು ಎಂದು ಕಾರ್ಮಿಕರು ಪಟ್ಟು ಹಿಡಿದರು.

ಕಂಪನಿಯವರು ಅವಶ್ಯ ಇದ್ದಾಗ ಕೆಲಸಕ್ಕೆ ಕರೆಯುತ್ತಾರೆ. ಕೆಲಸ ಹೆಚ್ಚು ನೀಡಿ ದುಡಿಸುತ್ತಾರೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲ್ಲ. ಪಿಎಫ್ ವಿತರಣೆ ಮಾಡಿಲ್ಲ. ಹಬ್ಬ, ಆರೋಗ್ಯದ ಸಮಸ್ಯೆ ಇದ್ದರೂ ಕಾರ್ಮಿಕರಿಗೆ ರಜಾ ಇಲ್ಲ. ಇದೀಗ ಕೆಲಸಕ್ಕೆ ಬೇಡ ಎಂದು ಏಕಾಏಕಿ ವಜಾ ಮಾಡಿದ್ದಾರೆ ಎಂದು ಕಾರ್ಮಿಕರು ಹೇಳಿದರು.

ADVERTISEMENT

ಪೊಲೀಸ್ ಉಪಾಧೀಕ್ಷಕ ಶಿವಕುಮಾರ್ ಮಾತನಾಡಿ, ‘ಕಾರ್ಮಿಕರ ಸಮಸ್ಯೆಗಳ ಬಗ್ಗೆ ಕಾರ್ಮಿಕ ಇಲಾಖೆಗೆ ಮನವಿ ನೀಡಿದರೆ, ಆಡಳಿತ ಮಂಡಳಿ ಜೊತೆ ಚರ್ಚೆ ಮಾಡೋಣ’ ಎಂದು ಕಾರ್ಮಿಕರಿಗೆ ಸೂಚನೆ ನೀಡಿದರು.

ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಶಬಾನಾ ಅಜ್ಮಿ ಅವರಿಗೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರು. ಪೊಲೀಸ್, ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾರ್ಮಿಕರು ಆಡಳಿತ ಮಂಡಳಿ ಜೊತೆ ಚರ್ಚೆ ಮಾಡಿದರು.

45 ಕಾರ್ಮಿಕರು ವೇತನ ಸಹಿತ ಪಿಎಫ್ ವಿತರಿಸಿದರೆ ಕೆಲಸಕ್ಕೆ ಬರುವುದಿಲ್ಲ ಎಂದರು. 130 ಕಾರ್ಮಿಕರ ಪೈಕಿ ಸುಮಾರು 40 ಮಂದಿಗೆ ವೇತನ ಸಹಿತ, ಪಿಎಫ್ ನೀಡುತ್ತೇವೆ ಎಂದು ಆಡಳಿತ ಮಂಡಳಿ ಒಪ್ಪಿಗೆ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.