ಗೌರಿಬಿದನೂರು: ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಡಾ.ಕೆ ಸುಧಾಕರ್ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ತಾಲ್ಲೂಕಿನಲ್ಲಿ 12 ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರದ ಅನುದಾನ ನೀಡಿದೆ. ನಗರಸಭೆ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಐ ಮಾಸ್ಟ್ ದೀಪಗಳನ್ನು ಅಳವಡಿಸುವಿಕೆ ಸೇರಿದಂತೆ ಒಟ್ಟು 12 ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಗೌರಿಬಿದನೂರು ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಹೈ ಮಾಸ್ಟ್ ದೀಪಗಳನ್ನು ಅಳವಡಿಸುವ ಒಟ್ಟು 12 ಕಾಮಗಾರಿ ಕೈಗೊಳ್ಳಲು ₹52 ಲಕ್ಷ ಅನುದಾನ ನೀಡಲಾಗಿದೆ. ಕೇಂದ್ರ ರಸ್ತೆ ನಿಧಿ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 94ರಿಂದ ನಕ್ಕಲಹಳ್ಳಿ ಕಾಟನಕಲ್ಲು ಜಿಲಾಕುಂಟೆ ಮಾರ್ಗವಾಗಿ ನಗರಗೆರೆ ಸೇರುವ 8 ಕಿ.ಮೀ ರಸ್ತೆ ಅಭಿವೃದ್ಧಿಗೆ ₹6ಕೋಟಿ ಅನುದಾನ ನೀಡಲಾಗಿದೆ ಎಂದರು.
ಜಲಜೀವನ್ ಮಿಷನ್ ಯೋಜನೆಯಡಿ ತಾಲ್ಲೂಕಿನಾದ್ಯಂತ 296 ಗ್ರಾಮಗಳಲ್ಲಿ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ₹102.50 ಕೋಟಿ ಅನುದಾನ ನೀಡಲಾಗಿದೆ. 2024-25ನೇ ಸಾಲಿನ ಅಮೃತ್ 2.0 ಯೋಜನೆಯಡಿ ಗೌರಿಬಿದನೂರು ನಗರ ನೀರು ಸರಬರಾಜು ಕಾಮಗಾರಿಗೆ ₹66.60 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ 69 ಮಧುಗಿರಿ- ಮುಳಬಾಗಿಲಿನ ಗೌರಿಬಿದನೂರು ಚಿಕ್ಕಬಳ್ಳಾಪುರ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ₹398.48 ಕೋಟಿ ಅನುದಾನ ಒದಗಿಸಿದೆ. ನಗರದ ಬೈಪಾಸ್ ರಸ್ತೆ ಅಭಿವೃದ್ಧಿಗೆ ₹40.68 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತಾಲ್ಲೂಕಿನಲ್ಲಿ 571 ಜನ ರೈತರಿಗೆ ರಾಗಿ ಬೆಳೆಗಾಗಿ ₹3 ಕೋಟಿ ಅನುದಾನ ಒದಗಿಸಿ 8497.50 ಕ್ವಿಂಟಲ್ ರಾಗಿ ಖರೀದಿಸಲಾಗಿದೆ ಎಂದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಆದಿ ಆದರ್ಶ ಗ್ರಾಮ ಯೋಜನೆಯಡಿ ತಾಲ್ಲೂಕಿನ ಮಾಚೇನಹಳ್ಳಿ ಲಕ್ಕಸಂದ್ರ ಹಾಗೂ ದೊಡ್ಡ ಮಲ್ಲೆಕೆರೆ ಗ್ರಾಮಗಳನ್ನು ಆಯ್ಕೆ ಮಾಡಿದ್ದು 2024-25ನೇ ಸಾಲಿನಲ್ಲಿ ತಲಾ ಒಟ್ಟು ₹61.14 ಲಕ್ಷ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ನಗರ ಸಭೆ ಅಧ್ಯಕ್ಷ ಲಕ್ಷ್ಮಿನಾರಾಯಣಪ್ಪ, ನಗರಸಭೆ ಆಯುಕ್ತೆ ಗೀತಾ ಡಿ.ಎಂ, ಡಾ.ಶಶಿಧರ್, ರವಿನಾರಾಯರೆಡ್ಡಿ, ಸಿ.ಆರ್ ನರಸಿಂಹ ಮೂರ್ತಿ, ನಗರಸಭೆ ಸದಸ್ಯರು ಉಪಸ್ಥಿತರಿದ್ದರು.
ಆಸ್ಪತ್ರೆಗೆ ಸೌಲಭ್ಯ ಕಲ್ಪಿಸಿಲ್ಲ
ನಗರದಲ್ಲಿ ನಿರ್ಮಾಣ ಮಾಡಿರುವ ಸಾರ್ವಜನಿಕ ಆಸ್ಪತ್ರೆಗೆ ಕಾಂಗ್ರೆಸ್ ಸರ್ಕಾರ ಈವರೆಗೆ ಉಪಕರಣ ಮಾನವ ಸಂಪನ್ಮೂಲ ಒದಗಿಸಿಲ್ಲ ಎಂದು ಸಂಸದ ಕೆ.ಸುಧಾಕರ್ ಕಿಡಿ ಕಾರಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ 200 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಯಿತು. ಮಂಚೇನಹಳ್ಳಿಯಲ್ಲಿ ಸಾರ್ವಜನಿಕ ಆಸ್ಪತ್ರೆ ಮತ್ತು ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಒಂದೇ ಸಂಕೀರ್ಣದಲ್ಲಿ ನಿರ್ಮಿಸಲಾಗಿದೆ. ಕಟ್ಟಡ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿವೆ. ಆದರೆ ಕಾಂಗ್ರೆಸ್ ಸರ್ಕಾರ ಈವರೆಗೆ ಆಸ್ಪತ್ರೆಗೆ ಬೇಕಾದ ಉಪಕರಣ ಮತ್ತು ಮಾನವ ಸಂಪನ್ಮೂಲದ ಟೆಂಡರ್ ಪ್ರಕ್ರಿಯೆ ಮಾಡಿಲ್ಲ ಎಂದರು. ಟೆಂಡರ್ ಪ್ರಕ್ರಿಯೆ ಮುಗಿಸಿದರೆ ಆಸ್ಪತ್ರೆ ಕಾಮಗಾರಿ ಮುಗಿಯುವ ವೇಳೆಗೆ ಸಾರ್ವಜನಿಕರಿಗೆ ಮುಕ್ತವಾಗುತ್ತದೆ. ಈಗ ಆಸ್ಪತ್ರೆ ಕಟ್ಟಡದಲ್ಲಿ ಇಲಿ ಹೆಗ್ಗಣ ಓಡಾಡುವಂತಾಗಿವೆ. ಕಾಂಗ್ರೆಸ್ ಆಡಳಿತವು ಮಂದಗತಿಯಲ್ಲಿ ಸಾಗುತ್ತಿದೆ. ಕಾಂಗ್ರೆಸ್ ಸರ್ಕಾರ ರೂಪಿಸುವ ಯೋಜನೆ ಕೇವಲ ರಾಜಕೀಯ ಉದ್ದೇಶದಿಂದ ಕೂಡಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.