ಗೌರಿಬಿದನೂರು: ಸಂಚಾರ ನಿಯಮ ಅರಿವವನ್ನು ಜನ ಸಾಮಾನ್ಯರಲ್ಲಿ ಬಿತ್ತಬೇಕಾದ ವಿದ್ಯಾರ್ಥಿಗಳೇ ಎಲ್ಲ ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾರೆ.
ಸಂಚಾರ ನಿಯಮಗಳಿರುವುದು ನಮ್ಮ ರಕ್ಷಣೆಗೆ, ಹೆಲ್ಮೆಟ್ ಜೀವ ರಕ್ಷಕ, ಬೈಕ್‌ನಲ್ಲಿ ಇಬ್ಬರಿಗಿಂತ ಹೆಚ್ಚು ಜನ ಸವಾರಿ ಮಾಡಬಾರದು, ಪರನವಾಗಿ ಇಲ್ಲದೆ ವಾಹನ ಚಲಾಯಿಸಬಾರದು, 18 ವರ್ಷದ ಕೆಳಗಿನವರು ವಾಹನ ಚಲಾಯಿಸಬಾರದು... ಇವು ಕಾನೂನಿಗಷ್ಟೇ ಸೀಮಿತ. ಪಾಲನೆಗೆ ಅಲ್ಲ ಎಂಬುದು ನಗರದ ಶಾಲೆ–ಕಾಲೇಜುಗಳತ್ತ ಸುಳಿದರೆ ಕಾಣಸಿಗುತ್ತದೆ.
ಮಕ್ಕಳನ್ನು ಶಾಲೆ–ಕಾಲೇಜಿಗೆ ಕಳುಹಿಸುವಾಗ ಸುರಕ್ಷತೆ ಪೋಷಕರ ಮೊದಲ ಆದ್ಯತೆಯಾಗಬೇಕು. ಆದರೆ ಆದರೆ ಇತ್ತೀಚೆಗೆ ಬಹಳಷ್ಟು ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ಬೈಕ್ ನೀಡಿ ಬೇಜವಾಬ್ದಾರಿ ತೋರುತ್ತಿದ್ದಾರೆ. ತಾವೂ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ.
‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ’ ಎಂಬ ಗಾದಿ ಮಾತಿದೆ. ವಿದ್ಯಾರ್ಥಿದಿಸೆಯಲ್ಲೇ ದೇಶದ ಕಾನೂನು ಪಾಲಿಸಿದವರು, ತಮ್ಮ ರಕ್ಷಣೆಗೆ ಇರುವ ನಿಯಮವನ್ನು ಮುರಿಯುವವರು ಮುಂದೆ ಏನಾಗುತ್ತಾರೆ ಎಂಬ ಅಸಹನೆ ಹಿರಿಯ ನಾಗರಿಕರಲ್ಲಿ ಮೂಡಿದೆ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಬೈಕ್ ಚಲಾಯಿಸುವುದು ನಗರದಲ್ಲಿ ಮೀತಿ ಮೀರಿದೆ. ಶಾಲಾ– ಕಾಲೇಜು ಮತ್ತು ಟ್ಯೂಷನ್‌ಗೆ ಅತೀ ವೇಗವಾಗಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾರೆ. ಅಲ್ಲದೆ ಹೆಲ್ಮೆಟ್ ಧರಿಸುತ್ತಿಲ್ಲ. ಒಂದೇ ಬೈಕ್‌ನಲ್ಲಿ ಮೂವರು, ಮೂವರಿಗಿಂತ ಹೆಚ್ಚು ವಿದ್ಯಾರ್ಥಿಗಳು ಕುಳಿತು ಓಡಾಡುವುದು ನಗರದ ಹಲವೆಡೆ ಕಂಡು ಬರುತ್ತಿದೆ.
ಪೋಷಕರು ತಮ್ಮ ಮಕಳನ್ನು ಸಾರ್ವಜನಿಕ ವಾಹನದಲ್ಲಿ ಕಳುಹಿಸದೆ, ತಾವೂ ಕರೆದೊಯ್ಯದೆ ಮಕ್ಕಳಿಗೆ ಬೈಕ್ ಕೊಡಿಸುತ್ತಿದ್ದಾರೆ. ಬಹುತೇಕರು ತಾವು ಸಿನಿಮೀಯ ಶೈಲಿನಲ್ಲಿ ಬೈಕ್ ಓಡಿಸಬೇಕೆಂಬ ಮಕ್ಕಳ ಹಟಕ್ಕೆ ಸೋತ ಪೋಷಕರು ಮಕ್ಕಳಿಗಾಗಿಯೇ ಬೈಕ್ ಖರೀದಿಸುತ್ತಿದ್ದಾರೆ. ಇಲ್ಲವೇ ತಮ್ಮ ವಾಹನವನ್ನೇ ನೀಡುತ್ತಿದ್ದಾರೆ.
ಮಕ್ಕಳು ಹೆಲ್ಮೆಟ್ ಧರಿಸದೆ, ವೇಗವಾಗಿ, ಹಾಗೂ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡುತ್ತಿದ್ದಾರೆ. ಇವೆಲ್ಲವನ್ನೂ ನೋಡುತ್ತಿದ್ದರೂ ಪೊಲೀಸರು ಜಾಣ ಮೌನವಹಿಸಿದ್ದಾರೆ ಎಂಬುದು ಸಾರ್ವಜನಿಕರ ದೂರು.
ನಿಯಮ ಉಲ್ಲಂಘಿಸಿ ಅಪ್ರಾಪ್ತ ವಯಸ್ಸಿನವರು ದ್ವಿಚಕ್ರ ವಾಹನ ಚಲಾಯಿಸುವುದರಿಂದ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು. ಅವಘಡ ಸಂಭವಿಸಿದರೆ ಮುಗ್ದ ಜೀವಗಳ ಪ್ರಾಣಕ್ಕೆ ಸಂಚಕಾರ ಬರುತ್ತದೆ. ಇತರೆ ವಾಹನ ಸವಾರರು ಮತ್ತು ಪಾದಚಾರಿಗಳು ಬಲಿಪಶು ಆಗಬೇಕಾಗುತ್ತದೆ. ಇದಕ್ಕೆ ಪೋಷಕರು ನೇರ ಹೊಣೆ ಆಗುತ್ತದೆ. ನಿಯಮ ಉಲ್ಲಂಘನೆ ತಡೆಯಬೇಕಾದ ಪೊಲೀಸರು ಸಹ ಹೊಣೆಗಾರರಾಗುತ್ತಾರೆ ಎನ್ನುತ್ತಾರೆ ಪ್ರಜ್ಞಾವಂತರು.
ನಗರದ ಸರ್ಕಾರಿ ಮತ್ತು ಪ್ರತಿಷ್ಠಿತ ಖಾಸಗಿ ಶಾಲಾ–ಕಾಲೇಜುಗಳ ಕೆಲವು ಅಪ್ರಾಪ್ತ ವಯಸ್ಸಿನ ಮಕ್ಕಳು ಬೈಕ್ ಚಾಲನೆ ಮಾಡುವುದರ ಜೊತೆಗೆ ಜನನಿಬಿಡ ಬಿಎಎಚ್ ರಸ್ತೆ, ಎಂಜಿ ರಸ್ತೆ, ಸಾಯಿಬಾಬಾ ರಸ್ತೆ, ಬಜಾರ್ ರಸ್ತೆ, ರಸ್ತೆಗಳಲ್ಲಿ ಹೆಲ್ಮೆಟ್ ಧರಿಸದೆ ವೇಗವಾಗಿ ವಾಹನ ಓಡಿಸುತ್ತಿದ್ದಾರೆ. ಇದಕ್ಕೆ ಶಾಲಾ ಆಡಳಿತ ಮಂಡಳಿ, ಪೊಲೀಸ್ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ಶಾಲಾ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡುವ ಮತ್ತು ಜಾಗೃತಿ ಮೂಡಿಸುವ ಕೆಲಸವನ್ನು ಶೈಕ್ಷಣಿಕ ಸಂಸ್ಥೆಗಳು ಮತ್ತು ಪೊಲೀಸರು ತುರ್ತಾಗಿ ಮಾಡಬೇಕಿದೆ.
ಅಪ್ರಾಪ್ತ ವಯಸ್ಸಿನವರಿಗೆ ಬೈಕ್ ಕೊಡುವ ಪೋಷಕರು ಮೀತಿ ಮೀರಿದ ವಿದ್ಯಾರ್ಥಿಗಳ ನಿಯಮ ಉಲ್ಲಂಘನೆ ಶಾಲೆ–ಕಾಲೇಜು, ಪೊಲೀಸರ ನಿರ್ಲಕ್ಷ್ಯ
ಕಾಲೇಜು ವಿದ್ಯಾರ್ಥಿಗಳಿಗೆ ಹಲವು ಬಾರಿ ತಿಳಿ ಹೇಳಲಾಗಿದೆ. ಕೆಲವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಆದರೂ ಕೆಲವರು ಪರವಾನಗಿ ಇಲ್ಲದೇ ವಾಹನ ಚಾಲನೆ ಮಾಡುತ್ತಿದ್ದಾರೆ ಶೀಘ್ರದಲ್ಲಿ ಅವರಿಗೆ ಅರಿವು ಮೂಡಿಸಲಾಗುವುದು
-ಗೋಪಾಲ್ ಪಿಎಸ್‌ಐ ನಗರ ಠಾಣೆ
ವಾಹನ ಚಾಲನೆ ಮಾಡಿದ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಹಲವು ಬಾರಿ ದಂಡ ವಿಧಿಸಲಾಗಿದೆ. ವಾಹನ ಪರವಾನಗಿ ರದ್ದು ಮಾಡಿ ದಂಡವನ್ನು ದುಪ್ಪಟ್ಟು ವಿಧಿಸಲಾಗುತ್ತಿದೆ. ಜೊತೆಗೆ ಪೋಷಕರ ಮೇಲೂ ಸಹ ಮೊಕದ್ದಮ್ಮೆ ದಾಖಲಿಸಲಾಗುವುದು.
-ಕೆ.ಪಿ. ಸತ್ಯನಾರಾಯಣ್ವೃ ವೃತ್ತ ನಿರೀಕ್ಷಕ
ಮೋಟಾರ್ ವಾಹನ ಕಾಯ್ದೆ ಏನು ಹೇಳುತ್ತದೆ ಮೋಟಾರ್ ವಾಹನ ಕಾಯ್ದೆ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವಾಹನ ನೀಡಿದರೆ ಮಕ್ಕಳ ಪೋಷಕರು ಅಥವಾ ವಾಹನದ ಮಾಲೀಕರೇ ಹೊಣೆ. ಮಕ್ಕಳಿಗೆ ದಂಡ ವಿಧಿಸುವ ಜೊತೆಗೆ ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳನ್ನು ಬಂಧಿಸಿ ರಿಮ್ಯಾಂಡ್ ಹೋಮ್‌ಗೆ ಕಳುಹಿಸಲು ಅವಕಾಶ ಇದೆ.
ಹೊಣೆ ಯಾರು ಶಾಲೆಗೆ ಬೆಳಗ್ಗೆ ಮಕ್ಕಳನ್ನು ಬಿಡಲು ಬರುವಾಗ ಅನೇಕ ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳಲ್ಲಿ ಇಬ್ಬರನ್ನು ಮೂವರನ್ನು ಕೂರಿಸಿಕೊಂಡು ವೇಗವಾಗಿ ಬರುತ್ತಾರೆ. ಏನಾದರು ಅಪಘಾತ ಸಂಭವಿಸಿದರೆ ಯಾರು ಹೊಣೆ?. ಕೂಡಲೇ ಪೊಲೀಸರು ಇದಕ್ಕೆ ಕಡಿವಾಣ ಹಾಕಬೇಕು. ಅನಿತಾ ಪೋಷಕರು ಗೌರಿಬಿದನೂರು ಎಚ್ಚರಿಕೆಗೂ ಬಗುತ್ತಿಲ್ಲ ವಿದ್ಯಾರ್ಥಿಗಳಿಗೆ ಹಲವು ಬಾರಿ ಬೈಕ್ ಚಾಲನೆ ಮಾಡುವಾಗಾ ಹೆಲ್ಮೆಟ್ ಧರಿಸದೆ ಹಾಗೂ ತ್ರಿಬಲ್ ರೈಡಿಂಗ್ ಮಾಡುವವರಿಗೆ ಎಚ್ಚರಿಕೆ ನೀಡಲಾಗಿದೆ. ಆದರೆ ಕಣ್ತಪ್ಪಿಸಿ ಮತ್ತೆ ಅದೇ ಕೆಲಸ ಮಾಡುತ್ತಿದ್ದಾರೆ ಮತ್ತೊಮ್ಮೆ ಕಠಿಣ ಎಚ್ಚರಿಕೆ ನೀಡಲಾಗುವುದು. ಹೆಸರೇಳದ ಶಿಕ್ಷಕ ಗೌರಿಬಿದನೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.