ADVERTISEMENT

ಗೌರಿಬಿದನೂರು | ತ್ಯಾಜ್ಯ ಸಂಸ್ಕರಣೆಗೆ ‘ಟ್ರ್ಯಾಷ್ ಕಾನ್’

ಕಾರ್ಯಾರಂಭಕ್ಕೆ ಸಿದ್ಧವಾಗಿದೆ ನೂತನ ತಂತ್ರಜ್ಞಾನ

ಎ.ಎಸ್.ಜಗನ್ನಾಥ್
Published 21 ಮೇ 2020, 6:41 IST
Last Updated 21 ಮೇ 2020, 6:41 IST
ಹೊಸೂರು ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗಿರುವ ‘ಕ್ರಾಷ್ ಕಾನ್’ ತ್ಯಾಜ್ಯ ಸಂಸ್ಕರಣಾ ಘಟಕ
ಹೊಸೂರು ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗಿರುವ ‘ಕ್ರಾಷ್ ಕಾನ್’ ತ್ಯಾಜ್ಯ ಸಂಸ್ಕರಣಾ ಘಟಕ   

ಗೌರಿಬಿದನೂರು: ಗ್ರಾಮೀಣ ಭಾಗದಲ್ಲಿ ನಿತ್ಯ ಸಂಗ್ರಹವಾಗುವ ಒಣ ಮತ್ತು ಹಸಿ‌ ತ್ಯಾಜ್ಯವನ್ನು ಸ್ವಯಂಚಾಲಿತವಾಗಿ ಪ್ರತ್ಯೇಕಿಸಿ, ಮರು ಬಳಕೆ ಮಾಡಲು ಸಹಕಾರಿಯಾಗುವಂತಹ ಆಧುನಿಕ ತಂತ್ರಜ್ಞಾನ ಆಧಾರಿತ ‘ಟ್ರ್ಯಾಷ್ ಕಾನ್’ ತ್ಯಾಜ್ಯ ಸಂಸ್ಕರಣಾ ಘಟಕವು ಹೊಸೂರು‌ ಗ್ರಾಮದಲ್ಲಿ ಕಾರ್ಯಾರಂಭಕ್ಕೆ ಸಿದ್ಧವಾಗಿದೆ.

‌ತಾಲ್ಲೂಕಿನ ಹೊಸೂರು, ಮುದುಗೆರೆ ಮತ್ತು ಸೋನಗಾನಹಳ್ಳಿ ಗ್ರಾಮ ಪಂಚಾಯಿತಿ ‌ವ್ಯಾಪ್ತಿಯ ಸುಮಾರು 24 ಹಳ್ಳಿಗಳಲ್ಲಿ ನಿತ್ಯ ಸಂಗ್ರಹವಾಗುವ ತ್ಯಾಜ್ಯವನ್ನು ಪಂಚಾಯಿತಿ ಸಿಬ್ಬಂದಿ ಮನೆಮನೆಗೆ ತೆರಳಿ ಸಂಗ್ರಹಿಸಿ ತರುತ್ತಾರೆ.

ಘಟಕದ ಒಂದು ಹಂತದಲ್ಲಿ ನಿರ್ಮಾಣ ಮಾಡಲಾಗಿರುವ ತೊಟ್ಟಿಯಲ್ಲಿ ತ್ಯಾಜ್ಯ ಸುರಿಯಲಾಗುವುದು. ಘಟಕವೇ ಅದನ್ನು ಹಸಿ‌ ಮತ್ತು ಒಣ ತ್ಯಾಜ್ಯವನ್ನಾಗಿ ಪ್ರತ್ಯೇಕಿಸುತ್ತದೆ. ಹಸಿ ತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿಸಿ ರೈತರ ಜಮೀನಿಗೆ ಬಳಕೆ ಮಾಡಲಾಗುವುದು. ಒಣ ತ್ಯಾಜ್ಯದಲ್ಲಿನ ಪ್ಲಾಸ್ಟಿಕ್, ಗಾಜು, ರಬ್ಬರ್ ಸೇರಿದಂತೆ ‌ಇನ್ನಿತರ ವಸ್ತುಗಳನ್ನು ಪ್ರತ್ಯೇಕಿಸಿ ಸಣ್ಣ ಸಣ್ಣ ಚೂರುಗಳಾಗಿ ಮಾಡಿ ಮರುಬಳಕೆ ವಸ್ತುಗಳ ತಯಾರಿಕೆಗೆ ಬಳಸಲಾಗುತ್ತದೆ.

ADVERTISEMENT

ಮೂರು ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅನುದಾನದಿಂದ ₹ 22 ಲಕ್ಷದ ‘ಟ್ರ್ಯಾಷ್ ಕಾನ್’ ಯಂತ್ರ ಖರೀದಿಸಲಾಗಿದೆ. ಒಟ್ಟು ಘಟಕವು ₹ 60ರಿಂದ ₹ 70 ಲಕ್ಷ ವೆಚ್ಚದಲ್ಲಿ‌ ನಿರ್ಮಾಣವಾಗಿದೆ.

ಜಿ.ಪಂ ಮಾಜಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಪ್ರತಿಕ್ರಿಯಿಸಿ, 4 ವರ್ಷಗಳಿಂದ ಘನ ತ್ಯಾಜ್ಯ ಘಟಕ ನಿರ್ಮಾಣದ ಕನಸಿತ್ತು. ಇಂದು ನೆರೆಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನರ ಸಹಕಾರದಿಂದ ಸಾಕಾರಗೊಂಡಿದೆ. ಈ ಭಾಗದ 24ಕ್ಕೂ ಹೆಚ್ಚು ಹಳ್ಳಿಗಳಲ್ಲಿನ ಕಸವನ್ನು ಮರುಬಳಕೆ ಮಾಡಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.