ADVERTISEMENT

ಗೌರಿಬಿದನೂರು: 2025ರಲ್ಲಿ ಘಟಿಸಿದ ಪ್ರಮುಖ ವಿದ್ಯಮಾನಗಳಿವು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 7:19 IST
Last Updated 24 ಡಿಸೆಂಬರ್ 2025, 7:19 IST
ಮಂಚೇನಹಳ್ಳಿ ಠಾಣೆ ಎದುರು ಪ್ರತಿಭಟಿಸಿದ ರೈತರು ಮತ್ತು ಕನಗಾನಕೊಪ್ಪ ಗ್ರಾಮಸ್ಥರು
ಮಂಚೇನಹಳ್ಳಿ ಠಾಣೆ ಎದುರು ಪ್ರತಿಭಟಿಸಿದ ರೈತರು ಮತ್ತು ಕನಗಾನಕೊಪ್ಪ ಗ್ರಾಮಸ್ಥರು   

ಗೌರಿಬಿದನೂರು:  ಡಾ.ಎಚ್.ನರಸಿಂಹಯ್ಯ (ಎಚ್ ಎನ್ ಪ್ರಾಧಿಕಾರ) ಅಭಿವೃದ್ಧಿ ‍ಪ್ರಾಧಿಕಾರ ಗೌರಿಬಿದನೂರು ತಾಲ್ಲೂಕಿನ ಜನರ ಬಹುದಿನಗಳ ಬೇಡಿಕೆ. ತಾಲ್ಲೂಕಿನ ಹೊಸೂರಿನವರಾದ ಶಿಕ್ಷಣ ತಜ್ಞ, ಗಾಂಧಿವಾದಿ ನರಸಿಂಹಯ್ಯ ಅವರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎನ್ನುವ ಆಗ್ರಹ ಹಲವು ವರ್ಷಗಳಿಂದ ಇತ್ತು. ಈ ಆಗ್ರಹ ಸರ್ಕಾರದಿಂದ ಸಾಕಾರವಾದ ವರ್ಷ 2025.

ಫೆ.2ರಂದು ಎಚ್.ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವ. ಅವರ ಹುಟ್ಟೂರಾದ ಹೊಸೂರಿನಲ್ಲಿ ಜನ್ಮ ಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ವೈಜ್ಞಾನಿಕ ಚಿಂತನೆಗಳ ವಿದ್ಯಾರ್ಥಿಗಳಲ್ಲಿ ಮೂಡಿಸಲು ಸರ್ಕಾರವು ಡಾ. ಎಚ್ ಎನ್ ಪ್ರಾಧಿಕಾರ ರಚನೆಗೆ ಮಾ.29 ರಂದು ಮಸೂದೆ ಅಂಗೀಕರಿಸಿತು. ಏಪ್ರಿಲ್‌ನಲ್ಲಿ ಗೆಜೆಟ್ ನಲ್ಲಿ ಅಂಗೀಕರಿಸಿತು. ಮಾಜಿ ಸಚಿವ ಎನ್.ಎಚ್ ಶಿವಶಂಕರ ರೆಡ್ಡಿ ಪ್ರಾಧಿಕಾರದ ಮೊದಲ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.

ADVERTISEMENT

ಹೀಗೆ ವರ್ಷದ ಎರಡನೇ ತಿಂಗಳಲ್ಲಿಯೇ ಗೌರಿಬಿದನೂರು ತಾಲ್ಲೂಕಿಗೆ ಸರ್ಕಾರದಿಂದ ಮಹತ್ವದ ಘೋಷಣೆ ಹೊರಬಿದ್ದಿತು. 

ವರ್ಷದ ಆರಂಭದಲ್ಲಿಯೇ ಕಪ್ಪು ಚುಕ್ಕಿ ಎನ್ನುವಂತೆ ತೊಂಡೇಬಾವಿ ಬಳಿಯ ಬೆಳಚಿಕ್ಕನಹಳ್ಳಿಯಲ್ಲಿ ಘಟನೆ ತಾಲ್ಲೂಕಿನಲ್ಲಿನ ಜಾತಿ ಸಂಘರ್ಷವನ್ನೂ ತೆರೆದಿಟ್ಟಿತು. ಜ.11ರಂದು  ಬೆಳಚಿಕ್ಕನಹಳ್ಳಿಯಲ್ಲಿ ಪರಿಶಿಷ್ಟ ಜಾತಿ ಯುವಕನಿಗೆ ದೇವಸ್ಥಾನ ಪ್ರವೇಶ ನಿರಾಕರಿಸಲಾಯಿತು. 

ಗ್ರಾಮದ ಗೋಪಾಲಪ್ಪ, ವೈಕುಂಠ ಏಕಾದಶಿ ಪ್ರಯುಕ್ತ ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಪೂಜೆಗೆಂದು ಹೋಗಿದ್ದರು. ದೇವಾಲಯದ ಬಾಗಿಲಿನಲ್ಲೇ ಕೆಲವು ಗ್ರಾಮಸ್ಥರು ಅವರನ್ನು ತಡೆದು ‘ನೀನು ಮಾದಿಗ ಜಾತಿಗೆ ಸೇರಿದವ. ದೇವಾಲಯದ ಒಳಗೆ ಹೋಗಬಾರದು’ ಎಂದು ಅವಾಚ್ಯ ಶಬ್ದಗಳಿಂದ ಸಾರ್ವಜನಿಕವಾಗಿ ನಿಂದಿಸಿದ್ದರು. ಈ ಪ್ರಕರಣ ಜಿಲ್ಲೆಯಷ್ಟೇ ಅಲ್ಲ ರಾಜ್ಯ ಮಟ್ಟದಲ್ಲಿಯೂ ಸದ್ದು ಮಾಡಿತ್ತು.

ರಾಜ್ಯದಲ್ಲಿ ಮೈಕ್ರೊ ಫೈನಾನ್ಸ್ ಕಿರುಕುಳದ ವಿಚಾರ ಮಾರ್ಚ್‌ನಲ್ಲಿ ತೀವ್ರ ಸದ್ದು ಮಾಡಿತ್ತು. ಅದೇ ಹೊತ್ತಿನಲ್ಲಿ ಗೌರಿಬಿದನೂರು ತಾಲ್ಲೂಕಿನ ‌ಎಂ. ಜಾಲಹಳ್ಳಿಯ ಮಂಜುನಾಥ್ ಮೈಕ್ರೊ ಫೈನಾನ್ಸ್‌ಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಜಿಲ್ಲೆಯಲ್ಲಿ ಮೈಕ್ರೊ ಫೈನಾನ್ಸ್‌ಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಮೊದಲ ಪ್ರಕರಣವಿದು.

ಏ.23ರಂದು ಶೂಟೌಟ್‌: ಮಂಚೇನಹಳ್ಳಿ ತಾಲ್ಲೂಕಿನ ಕನಗಾನಕೊಪ್ಪ ಗ್ರಾಮ ಸಮೀಪದ ಬೆಟ್ಟದಲ್ಲಿ ಕಲ್ಲುಗಣಿಗಾರಿಕೆ ಹಾಗೂ ಗಣಿಗಾರಿಕೆ ಲಾರಿಗಳ ಓಡಾಟಕ್ಕೆ ದಾರಿ ಮಾಡುವ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ರೈತರೊಬ್ಬರ ಮೇಲೆ ಗುಂಡು ಹಾರಿಸಲಾಯಿತು.

ಸಕಲೇಶ್ ಎಂಬಾತ ಸ್ಥಳೀಯ ರೈತ ರವಿಕುಮಾರ್ ಮೇಲೆ ಗುಂಡು ಹಾರಿಸಿದ್ದರು. ಈ ವಿಚಾರ ಸಹ ರಾಜ್ಯ ಮಟ್ಟದಲ್ಲಿ ಸದ್ದು ಮಾಡಿತ್ತು. ಮಂಚೇನಹಳ್ಳಿ ಬಂದ್, ಗಣಿಗಾರಿಕೆ ನಡೆಸದಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ, ರಾಜಕೀಯ ನಾಯಕರ ಭೇಟಿ ಹೀಗೆ ನಾನಾ ವಿದ್ಯಮಾನಗಳು ಕನಗಾನಕೊಪ್ಪ ಶೂಟೌಟ್ ಪ್ರಕರಣದ ಸುತ್ತ ಜೋರಾಗಿ ನಡೆದವು.

ಗೌರಿಬಿದನೂರು ತಾಲ್ಲೂಕಿನಲ್ಲಿ ಈ ವರ್ಷ ಹೆಚ್ಚು ಸದ್ದು ಮಾಡಿದ್ದು ವಾಟದಹೊಸಹಳ್ಳಿ ಕೆರೆ ನೀರಿನ ಸಂಘರ್ಷ. ಮೇನಲ್ಲಿ ಆರಂಭವಾದ ಈ ಸಂಘರ್ಷ ಮೂರು ತಿಂಗಳಿಗೂ ಹೆಚ್ಚಿನ ಸಮಯ ಕಾವು ಪಡೆದಿತ್ತು. ಇದು ಜಿಲ್ಲೆಯಲ್ಲಿಯೇ ದೊಡ್ಡ ಕೆರೆ ಎನಿಸಿದೆ.

117 ಹೆಕ್ಟೇರ್ ವಿಸ್ತೀರ್ಣದ ಈ ಕೆರೆಯು 345 ಎಂಸಿಎಫ್‌ಟಿ ನೀರಿನ ಶೇಖರಣಾ ಸಾಮರ್ಥ್ಯ ಹೊಂದಿದೆ. ಈ ಕೆರೆ ನೀರನ್ನು ಗೌರಿಬಿದನೂರಿಗೆ ಕೊಂಡೊಯ್ದು ಅಲ್ಲಿನ ಜನರ ನೀರಿನ ದಾಹ ನೀಗಿಸಲು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮುಂದಾಗಿದ್ದರು.

ಅಮೃತ್ 2 ಯೋಜನೆಯಡಿ ವಾಟದಹೊಸಹಳ್ಳಿ ಕೆರೆ ನೀರನ್ನು ನಗರಕ್ಕೆ ಹರಿಸಲು ಭೂಮಿ ಪೂಜೆ ಸಹ ನಡೆಸಿದರು. ಆದರೆ ಇದಕ್ಕೆ ವಾಟದಹೊಸಹಳ್ಳಿ ಕೆರೆ ಅಚ್ಚುಕಟ್ಟುದಾರರ ಸಂಘವು ತೀವ್ರ ವಿರೋಧಿಸಿತ್ತು. ತಾಲ್ಲೂಕು ಕಚೇರಿ ಮುಂದೆ 69 ದಿನ ಪ್ರತಿಭಟನೆ ಸಹ ನಡೆಯಿತು. 

ಶಾಸಕ ಪುಟ್ಟಸ್ವಾಮಿ ಗೌಡ ಅವರು, ವಾಟದಹೊಸಹಳ್ಳಿ ಕೆರೆಗೆ ಎತ್ತಿನಹೊಳೆ ನೀರು ಹರಿಸಿಯೇ ಸಿದ್ಧ ಎಂದು ಭರವಸೆ ನೀಡಿದರು. ಹೀಗಿದ್ದರೂ ಪಂಜಿನ ಮೆರವಣಿಗೆ, ರ‍್ಯಾಲಿ ಸೇರಿದಂತೆ ವಿವಿಧ ರೀತಿಯಲ್ಲಿ ಪ್ರತಿಭಟನೆಗಳು ನಡೆದವು. ಇದು ರಾಜಕೀಯ ಜಟಾಪಟಿಗೂ ಕಾರಣವಾಯಿತು.

ಹೀಗೆ ವಾಟದಹೊಸಹಳ್ಳಿ ಕೆರೆ ನೀರಿನ ವಿಚಾರವು 2025ರಲ್ಲಿ ಗೌರಿಬಿದನೂರಿನಲ್ಲಿ ವಾತಾವರಣವನ್ನು ಬಿಸಿಗೊಳಿಸಿತ್ತು. ಪರ ವಿರೋಧದ ವಾಕ್ಸಮರ, ಪ್ರತಿಭಟನೆಗಳು ಸಾಲು ಸಾಲಾಗಿ ನಡೆದವು. 

ಈಗ ಇದೇ ವಾಟದ ಹೊಸಹಳ್ಳಿ ಕೆರೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ದೋಣಿ ವಿಹಾರ ಸಹ ನಡೆಯುತ್ತಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಆರಂಭವಾದ ಮೊದಲ ದೋಣಿ ವಿಹಾರ ಯೋಜನೆಯೂ ಇದಾಗಿದೆ. ಹೀಗೆ ವಾಟದಹೊಸಹಳ್ಳಿ ಕೆರೆಯ ಗೌರಿಬಿದನೂರು ತಾಲ್ಲೂಕಿನಲ್ಲಿ ಈ ವರ್ಷ ಪ್ರಧಾನವಾಗಿ ಚರ್ಚೆಗೆ ಒಳಗಾಯಿತು.

ಇರಾನ್–ಇಸ್ರೇಲ್ ಯುದ್ಧ; ಅಲೀಪುರದಲ್ಲಿ ಆತಂಕ: ಜೂನ್‌ನಲ್ಲಿ ಇರಾನ್ ಮತ್ತು ಇಸ್ರೇಲ್ ದೇಶಗಳ ನಡುವೆ ಯುದ್ಧ ನಡೆಯಿತು. ಈ ಯುದ್ಧ ತಾಲ್ಲೂಕಿನ ಅಲೀಪುರದಲ್ಲಿ ಆಂತಕಕ್ಕೆ ಕಾರಣವಾಗಿತ್ತು. ಇಲ್ಲಿನ ಜನರು ಇರಾನ್ ಪರ ಪ್ರಾರ್ಥನೆ ಸಲ್ಲಿಸಿದರು. 

ಜೂನ್‌ನಲ್ಲಿ ಮಾಧ್ಯಮಗಳು ಸಹ ಅಲೀಪುರದತ್ತ ಎಡತಾಕಿದವು. ಇರಾನ್‌ನಲ್ಲಿದ್ದ ಈ ಗ್ರಾಮದ 150 ಜನರು ಮರಳಿ ತಮ್ಮ ಊರಿಗೆ ವಾಪಸ್ಸಾದರು. ಹೀಗೆ ಇರಾನ್ ಜೊತೆಗಿನ ಸಂಬಂಧದ ಕಾರಣ ಅಲೀಪುರ ರಾಜ್ಯದಲ್ಲಿ ಗಮನ ಸೆಳೆಯಿತು.  ಜುಲೈನಲ್ಲಿ ಸರ್ಕಾರವು ಅಲೀಪುರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿತು.

ಹೀಗೆ ಗೌರಿಬಿದನೂರು ತಾಲ್ಲೂಕಿನ ಮಟ್ಟಿಗೆ 2025 ನಾನಾ ಬೆಳವಣಿಗೆಗಳನ್ನು ಕಂಡಿತು. ಈಗ 2026ರನ್ನು ಸ್ವಾಗತಿಸಲು ತಾಲ್ಲೂಕಿನ ಜನರು ಸಜ್ಜಾಗಿದ್ದಾರೆ.

ಕುಸುಮ್‌ಗೆ ಚಾಲನೆ

ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಪಿಎಂ–ಕುಸುಮ್‌’ ಯೋಜನೆ ರೂಪಿಸಿದೆ. ಸೌರಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಹಾಗೂ ಕೃಷಿಯನ್ನು ಲಾಭದಾಯಕವಾಗಿಸುವುದು ಯೋಜನೆಯ ಗುರಿ. ಇಂತಹ ಮಹತ್ವದ ಯೋಜನೆಗೆ ಜಿಲ್ಲೆಯಲ್ಲಿ ಜೂ.11ರಂದು ಚಾಲನೆ ದೊರೆಯಿತು. ಈ ಮೂಲಕ ರಾಜ್ಯದಲ್ಲಿ ಕಾರ್ಯಾರಂಭ ಮಾಡುತ್ತಿರುವ ಮೊದಲ ಪಿ.ಎಂ ಕುಸುಮ್–ಬಿ (‌ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ತಾನ್ ಮಹಾ ಅಭಿಯಾನ್) ಕಾಂಪೊನೆಂಟ್ ‘ಸಿ’ ಸೌರವಿದ್ಯುತ್ ಯೋಜನೆ ಇದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಈ ಯೋಜನೆಗೆ ಚಾಲನೆ ನೀಡಿದರು.

ಪುತ್ಥಳಿ ಸಂಘರ್ಷ 

ಹಂಪಸಂದ್ರ ಗ್ರಾಮದಲ್ಲಿ ಅಂಬೇಡ್ಕರ್ ಮತ್ತು ವಾಲ್ಮೀಕಿ ಅವರ ಪುತ್ಥಳಿ ವಿವಾದ ತೀವ್ರ ಸಂಘರ್ಷದ ಸ್ವರೂಪ ಪಡೆದಿದ್ದು ಸಹ ಇದೇ ವರ್ಷದಲ್ಲಿ. ಏ.27ರಂದು ಗ್ರಾಮದಲ್ಲಿ ಉದ್ವಿಗ್ವ ಸ್ಥಿತಿ ಇದ್ದು ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ 150 ಕ್ಕೂ ಹೆಚ್ಚು ಪೊಲೀಸರು ಬೀಡು ಬಿಟ್ಟಿದ್ದರು. ಎರಡೂ ಸಮುದಾಯಗಳ ನಡುವೆ ಮಾತಿನ ಚಕಮಕಿ ನಡೆದು ಕಲ್ಲು ತೂರಾಟ ನಡೆಸುವ ಹಂತಕ್ಕೂ ಪರಿಸ್ಥಿತಿ ತಲುಪಿತ್ತು. ಈ ವಿವಾದ ಜಿಲ್ಲೆಯಲ್ಲಿ ಫಲಕಗಳು ಪುತ್ಥಳಿಗಳ ಅಳವಡಿಕೆಯ ಕುರಿತು ಮಾರ್ಗಸೂಚಿಯ ಬಗ್ಗೆ ಚರ್ಚೆಗಳಿಗೂ ಕಾರಣವಾಯಿತು.

ಗೌರಿಬಿದನೂರಿಗೆ ನೀರು ಹರಿಸುವುದನ್ನು ವಿರೋಧಿಸಿ ವಾಟದಹೊಸಹಳ್ಳಿ ರೈತರ ಪಂಜಿನ ಮೆರವಣಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.