ಪುಟ್ಟಸ್ವಾಮಿಗೌಡ
ಗೌರಿಬಿದನೂರು: ತಾಲ್ಲೂಕಿನ ವಾಟದಹೊಸಹಳ್ಳಿ ಕೆರೆಯಿಂದ ನಗರಕ್ಕೆ ನೀರು ಹರಿಸುವ ಯೋಜನೆಗೆ ಜು.26ರಂದು ಗೊಟಕನಾಪುರ ಕೆರೆ ಬಳಿ ಶಂಕು ಸ್ಥಾಪನೆ ನೆರವೇರಿಸಲಾಗುವುದು ಎಂದು ಶಾಸಕ ಕೆ.ಎಚ್ ಪುಟ್ಟಸ್ವಾಮಿ ಗೌಡ ತಿಳಿಸಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲದ ವೇಳೆ ನಗರದಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತಿತ್ತು. ಇದನ್ನು ಮನಗಂಡು, ಸರ್ಕಾರದ ಮೇಲೆ ಒತ್ತಡ ಹಾಕಿ ಈ ಯೋಜನೆಯನ್ನು ರೂಪಿಸಲಾಗಿದೆ. ಉತ್ತಮ ಯೋಜನೆಗೆ ಅಡ್ಡಿಪಡಿಸಿ, ಪ್ರತಿಭಟನೆ, ಪಂಜಿನ ಮೆರವಣಿಗೆ ಮಾಡಿಸಿದ್ದಾರೆ ಎಂದು ದೂರಿದರು.
ನಗರದ ಜನರ ಕುಡಿಯುವ ನೀರಿಗಾಗಿ, ಅಮೃತ್ 2 ಯೋಜನೆ ಅಡಿಯಲ್ಲಿ ₹ 65 ಕೋಟಿ ಅನುದಾನ ತಂದು ಯೋಜನೆ ರೂಪಿಸಲಾಗಿದೆ. ಎತ್ತಿನಹೊಳೆ ನೀರನ್ನು ತಂದು ವಾಟದಹೊಸಹಳ್ಳಿ ಕೆರೆಗೆ ತುಂಬಿಸದೆ ನಗರಕ್ಕೆ ವಾಟದಹೊಸಹಳ್ಳಿ ಕೆರೆಯ ನೀರು ತೆಗೆದುಕೊಂಡು ಹೋಗುವುದಿಲ್ಲ ಎಂದರು.
ವಾಟದಹೊಸಹಳ್ಳಿ ಭಾಗದ ರೈತರಿಗೆ ಈ ಬಗ್ಗೆ ಯಾವುದೇ ಅನುಮಾನ ಬೇಡ. ಎತ್ತಿನ ಹೊಳೆ ನೀರನ್ನು ಕೆರೆಗೆ ಹರಿಸದಿದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಎತ್ತಿನ ಹೊಳೆ ನೀರನ್ನು ಕೆರೆಗೆ ತುಂಬಿಸಿ ಅದರಲ್ಲಿ ಅರ್ಧದಷ್ಟು ನೀರನ್ನು ಮಾತ್ರ ನಗರಕ್ಕೆ ಹರಿಸಲಾಗುವುದು. ವಾಟದಹೊಸಹಳ್ಳಿ ಸುತ್ತಮುತ್ತಲಿನ ಹಳ್ಳಿಗಳಿಗೆ ಮತ್ತು ಹುದುಗೂರು ಸುತ್ತಮುತ್ತಲಿನ 8 ಹಳ್ಳಿಗಳಿಗೆ ಈ ನೀರನ್ನು ಹರಿಸಲಾಗುವುದು. ಆದರೆ ಉತ್ತಮ ಕಾರ್ಯಕ್ಕೆ ಕೆಲವು ರಾಜಕಾರಣಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದರು.
ವಾಟದಹೊಸಹಳ್ಳಿ ಕೆರೆ, ಕಲ್ಲೂಡಿ ಕೆರೆ ಮತ್ತು ಗೊಟಕನಾಪುರ ಕೆರೆಗಳಿಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಪಡಿಸಿ, ಅಲ್ಲಿನ ನೀರನ್ನು ನಗರಕ್ಕೆ ಸರಬರಾಜು ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.