ADVERTISEMENT

‘ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ’

ಅಂಗನವಾಡಿ ಕಾರ್ಯಕರ್ತೆಯರು– ಮೇಲ್ವಿಚಾರಕಿಯರಿಗೆ ಮೊಬೈಲ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 6:42 IST
Last Updated 12 ನವೆಂಬರ್ 2020, 6:42 IST
ಬಾಗೇಪಲ್ಲಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್‌ ವಿತರಿಸಿದರು
ಬಾಗೇಪಲ್ಲಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್‌ ವಿತರಿಸಿದರು   

ಬಾಗೇಪಲ್ಲಿ: ‘ಗ್ರಾಮೀಣ ಪ್ರದೇಶದ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಹಾಜರಾತಿ, ಸರ್ಕಾರದ ಯೋಜನೆಗಳನ್ನು ತಲುಪಿಸುವ ಉದ್ದೇಶದಿಂದ ಪೋಷಣ ಅಭಿಯಾನದಡಿ ಮೊಬೈಲ್ ವಿತರಿಸಲಾಗಿದೆ. ಪ್ರತಿದಿನದ ಮಾಹಿತಿಯನ್ನು ಮೊಬೈಲ್‌ನಲ್ಲಿ ಕ್ರೋಡೀಕರಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ ಹೇಳಿದರು.

ತಾಲ್ಲೂಕು ಶಿಶು ಅಭಿವೃದ್ಧಿ ಇಲಾಖೆಯ ಸಭಾಂಗಣದಲ್ಲಿ ಬುಧವಾರ ಅಂಗನವಾಡಿ ಮೇಲ್ವಿಚಾರಕಿಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಗುಣಾತ್ಮಕ ಶಿಕ್ಷಣ, ಪೌಷ್ಟಿಕ ಆಹಾರ ನೀಡಬೇಕು. ಗರ್ಭಿಣಿಯರಿಗೆ, ಬಾಣಂತಿಯರಿಗೆ ರಕ್ತಹೀನತೆ ತಡೆಗಟ್ಟಲು ತರಕಾರಿ, ಕ್ಯಾಲ್ಸಿಯಂಯುಕ್ತ ಆಹಾರ ನೀಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಶೇಕಡ 100ರಷ್ಟು ಹಾಜರಾತಿ ಇರಬೇಕು. ಪ್ರತಿದಿನದ ಆಹಾರ ವಿತರಣೆ, ದಾಖಲಾತಿಯನ್ನು ಆ್ಯಪ್‌ನಲ್ಲಿ ದಾಖಲಿಸಬೇಕು.ಈಗಾಗಲೇ ಮೇಲ್ವಿಚಾರಕಿಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಕುರಿತು ತರಬೇತಿ ನೀಡಲಾಗಿದೆ ಎಂದು ಸೂಚಿಸಿದರು.

ADVERTISEMENT

ಇಲಾಖೆಯಿಂದ ಸೀಮಂತ ಕಾರ್ಯಕ್ರಮ ಮಾಡಲಾಗಿದೆ. ಹುಟ್ಟಿದ ಮಗುವಿನಿಂದ 6 ತಿಂಗಳವರೆಗೂ ಎದೆಹಾಲು ನೀಡಬೇಕು. ತರಕಾರಿ, ಮೊಳಕೆ ಕಾಳು ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವಂತೆ ತಿಳಿಸಲಾಗಿದೆ. ತಾಲ್ಲೂಕಿನಲ್ಲಿ ಅನಕ್ಷರತೆ ಹೆಚ್ಚಿದೆ. ಮಹಿಳೆಯರಲ್ಲಿ ರಕ್ತಹೀನತೆ ಹೆಚ್ಚಾಗಿದೆ ಎಂದರು.

ಸರ್ಕಾರದ ಯೋಜನೆಗಳ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಜೊತೆಗೆ, ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆರ್.ಕೆ. ವೆಂಕಟೇಗೌಡ, ಪೋಷಣಾ ಅಭಿಯಾನದ ಜಿಲ್ಲಾ ಸಂಚಾಲಕ ಶರತ್ ಬಾಬು, ಪ್ರಥಮದರ್ಜೆ ಸಹಾಯಕ ವೆಂಕಟೇಶ್, ಮೇಲ್ವಿಚಾರಕಿಯರಾದ ಬಸಮ್ಮ, ಈರಮ್ಮ, ಅನ್ಸೂಬಾಯಿ, ಸುಜಾತಾ, ರಾಧಿಕಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.