
ಗೌರಿಬಿದನೂರು: ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಭಾಗದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ತಾಲ್ಲೂಕು ಪಂಚಾಯಿತಿ ಅವರಣದಿಂದ ಕೃಷಿ ಉತ್ಪನ್ನ ಮಾರುಕಟ್ಟೆವರೆಗೆ ಕಾಲ್ನಡಿಗೆ ಜಾಥಾ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬಂದ ಪ್ರತಿಭಟನಕಾರರು, ಮಾರುಕಟ್ಟೆ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿದರು,
ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಣ್ ಮಾತನಾಡಿ, ತಾಲ್ಲೂಕಿನ ರೈತರು ಮಳೆ, ಚಳಿ, ಗಾಳಿ ಎನ್ನದೆ ಬೆವರು ಸುರಿಸಿ ಮೆಕ್ಕೆಜೋಳ ಬೆಳೆದಿದ್ದಾರೆ. ರಾಜ್ಯದ 224 ಶಾಸಕರು, ಅಬಕಾರಿ, ಸಕ್ಕರೆ ಕಾರ್ಖಾನೆ, ಮತ್ತು ಶಿಕ್ಷಣ ಸಂಸ್ಥೆಗಳ ಲಾಬಿಗಳಲ್ಲಿ ತೊಡಗಿದ್ದಾರೆ. ಯಾರೊಬ್ಬರೂ ಸಹ ಅನ್ನದಾತನ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮತಗಳಿಗಾಗಿ ಮಾತ್ರವೇ ರೈತರನ್ನು ಬಳಸಿಕೊಳ್ಳುತ್ತಿರುವ ಜನಪ್ರತಿನಿಧಿಗಳು, ರೈತರ ಸಮಸ್ಯೆಗಳನ್ನು ಪರಿಹರಿಸಲು ಯತ್ನ ಮಾಡುತ್ತಿಲ್ಲ. ಇದೀಗ ರೈತರ ಆಕ್ರೋಶದ ಜ್ವಾಲೆ ಸ್ಫೋಟವಾಗುವ ಸಮಯ ಬಂದಿದೆ ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕಿನಲ್ಲಿ 2012ರಿಂದ ಖರೀದಿ ಕೇಂದ್ರ ತೆಗೆಯಲು ಮನವಿ ಮಾಡಲಾಗಿದೆ. ಆದರೆ, ಈವರೆಗೆ ಖರೀದಿ ಕೇಂದ್ರ ತೆರೆಯಲು ಸರ್ಕಾರ ಮುಂದಾಗಿಲ್ಲ. ಸರ್ಕಾರವು ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಮೆಕ್ಕೆಜೋಳದ ಪ್ರತಿ ಕ್ವಿಂಟಲ್‌ಗೆ ₹2,400 ಬೆಂಬಲ ಬೆಲೆ ಘೋಷಣೆ ಮಾಡಬೇಕು. ಅಲ್ಲದೆ, ರಾಜ್ಯ ಸರ್ಕಾರವು ₹600 ಸೇರಿಸಿ ಒಟ್ಟು ₹3,000 ನಿಗದಿಪಡಿಸಬೇಕು. ಬೆಳೆ ವಿಮೆಯಲ್ಲಿನ ತಾರತಮ್ಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಆರ್.ಎನ್. ರಾಜು, ಕರವೇ ಪ್ರಭು, ರಾಮಚಂದ್ರರೆಡ್ಡಿ, ಆವಲ ಮೂರ್ತಿ, ನಾಗರಾಜ್, ಮುದ್ದು ಗಂಗಪ್ಪ, ಸನತ್ ಕುಮಾರ್, ನರಸರೆಡ್ಡಿ, ಬಾಬು, ಗೋಪಿ, ನಂದನ್, ಅನಂತು, ಪ್ರಭಾಕರ್, ವೆಂಕಟೇಶ್ ಆದಿನಾರಾಯಣಪ್ಪ, ಪ್ರಸನ್ನ ಕುಮಾರ್, ಸುರೇಶ್ ಕುಮಾರ್, ಜಯಣ್ಣ, ಶ್ರೀನಿವಾಸ್, ನರಸಿಂಹ ರೆಡ್ಡಿ ಮುಂತಾದ ರೈತರು ಪಾಲ್ಗೊಂಡಿದ್ದರು.
ಬೇಡಿಕೆ ಈಡೇರುವವರೆಗೆ ಪ್ರತಿಭಟನೆ
ತಾಲ್ಲೂಕಿನಲ್ಲಿ 53 ಸಾವಿರ ಎಕರೆಯಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಶೇ 90ರಷ್ಟು ಬೆಳೆ ಕಟಾವಿಗೆ ಸಿದ್ಧವಾಗಿದೆ. ಸರ್ಕಾರ ₹3000 ಬೆಂಬಲ ಬೆಲೆ ನೀಡಬೇಕು ಎಂದು ತಾಲ್ಲೂಕು ಅಧ್ಯಕ್ಷ ಲೋಕೇಶ್ ಗೌಡ ಒತ್ತಾಯಿಸಿದರು. ರೈತರ ಉತ್ಪಾದನಾ ವೆಚ್ಚವೇ ಹೆಚ್ಚಾಗಿರುವುದರಿಂದ ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಿಸಬೇಕು. ಅಲ್ಲದೆ ಸರ್ಕಾರವು ನಾಳೆಯಿಂದಲೇ ಖರೀದಿ ಪ್ರಾರಂಭಿಸಬೇಕು. ವಿಳಂಬ ಮಾಡಿದಲ್ಲಿ ಇದರ ಲಾಭ ಪಡೆಯುವ ದಲ್ಲಾಳಿಗಳು ರೈತರಿಂದ ಮೆಕ್ಕೆಜೋಳ ಖರೀದಿಸುವ ಸಾಧ್ಯತೆ ಇದೆ. ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ‘ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ನಮ್ಮ ಮನವಿ ಪತ್ರ ಸ್ವೀಕರಿಸುವವರೆಗೆ ನಮ್ಮ ಪ್ರತಿಭಟನೆ ಮುಂದುವರೆಯುತ್ತದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.