ADVERTISEMENT

ಚಿಕ್ಕಬಳ್ಳಾಪುರ | ರೈತರಿಗೆ ತೊಂದರೆಯಾಗದಂತೆ ಕ್ರಮ: ಜಿಲ್ಲಾಧಿಕಾರಿ ರವೀಂದ್ರ

ವಾಟದಹೊಸಹಳ್ಳಿ ಕೆರೆ ನೀರಿನ ಸಮಸ್ಯೆ: ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 12:54 IST
Last Updated 30 ಜೂನ್ 2025, 12:54 IST
ವಾಟದಹೊಸಹಳ್ಳಿ ಕೆರೆ
ವಾಟದಹೊಸಹಳ್ಳಿ ಕೆರೆ   

ಗೌರಿಬಿದನೂರು: ವಾಟದಹೊಸಹಳ್ಳಿ ಕೆರೆಯ ನೀರಿನ ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಯಾರಿಗೂ ತೊಂದರೆಯಾಗದಂತೆ ಪರಿಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು. 

ಅಮೃತ್ 2 ಯೋಜನೆಯಡಿ ವಾಟದಹೊಸಹಳ್ಳಿ ಕೆರೆ ನೀರನ್ನು ನಗರಕ್ಕೆ ಹರಿಸುವ ಕುರಿತು ಕೆರೆ ಅಚ್ಚುಕಟ್ಟು ರೈತರು ಮತ್ತು ನಗರದ ಜನಪ್ರತಿನಿಧಿಗಳೊಂದಿಗೆ  ನಗರದ ಪ್ರಜಾ ಸೌಧದಲ್ಲಿ ಕಾರ್ಯಕ್ರಮ ನಡೆಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರದಲ್ಲಿ 60 ಸಾವಿರ ಜನರಿದ್ದಾರೆ. ಆಗ್ಗಾಗ್ಗೆ ನಗರಕ್ಕೆ ಬಂದು ಹೋಗುವವರನ್ನು ಸೇರಿಸಿದರೆ, ಜನಸಂಖ್ಯೆ 70–85 ಸಾವಿರ ಆಗುತ್ತದೆ. ಕೆರೆಯು 2005, 2010 ಮತ್ತು 2015ರಲ್ಲಿ ಮಾತ್ರ ತುಂಬಿತ್ತು. ಒಮ್ಮೆ ಕೆರೆ ತುಂಬಿದರೆ 345 ಎಂಸಿಎಫ್‌ಟಿಯಷ್ಟು ನೀರು ಶೇಖರಣೆಯಾಗುತ್ತದೆ. ಆದರೆ, ಈಗ 19 ಅಡಿಯಷ್ಟು ಹೂಳು ತುಂಬಿದೆ. ಕೆರೆಯಲ್ಲಿ ನೀರಿನ ಲಭ್ಯತೆ, 10 ವರ್ಷಗಳಲ್ಲಿ ನೀರಿನ ಶೇಖರಣೆ, ಹಳ್ಳಿಗಳ ಜನರಿಗೆ ಕುಡಿಯಲು ಅಗತ್ಯವಿರುವ ನೀರಿನ ಪ್ರಮಾಣ, ಕೆರೆ ಸಾಮರ್ಥ್ಯ, ನೀರು ಹರಿಯುವ ಅಚ್ಚುಕಟ್ಟು ಪ್ರದೇಶ, ನಗರಕ್ಕೆ ಅಗತ್ಯವಿರುವ ನೀರಿನ ಪ್ರಮಾಣ, ನೀರನ್ನು ನಗರಕ್ಕೆ ಎತ್ತುವಳಿ ಮಾಡುವ ಸಾಧಕ–ಬಾಧಕಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. 

ADVERTISEMENT

ಕರ್ನಾಟಕ ರಾಜ್ಯ ರೈತ ಸಂಘ ತಾಲ್ಲೂಕು ಅಧ್ಯಕ್ಷ ಮಾಳಪ್ಪ ಮಾತನಾಡಿ, 120 ವರ್ಷ ಇತಿಹಾಸದ ಈ ಕೆರೆಯಿಂದ 1,800 ಹೆಕ್ಟರ್‌ಗಳಷ್ಟು ಅಚ್ಚುಕಟ್ಟು ಪ್ರದೇಶ ಹೊಂದಿದೆ. ಯಾವುದೇ ಪರ್ಯಾಯ ನದಿ ನಾಲೆಗಳಿಲ್ಲ. ರೈತರು ಕೆರೆಯ ನೀರನ್ನೇ ಆಶ್ರಯಿಸಿದ್ದಾರೆ. ಈಗ ಏಕಾಏಕಿ ನೀರನ್ನು ನಗರಕ್ಕೆ ಹರಿಸಿದರೆ ಈ ಭಾಗದ ರೈತರಿಗೆ ತೊಂದರೆಯಾಗುತ್ತದೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೂ ತಿಳಿಸಲಾಗಿದೆ ಎಂದರು. 

ಶಾಸಕರು ಎತ್ತಿನ ಹೊಳೆ ನೀರನ್ನು ಕೆರೆಗೆ ತುಂಬಿಸಿ ನಗರಕ್ಕೆ ನೀರು ಹರಿಸಲಾಗುವುದು ಎಂದು ತಿಳಿಸುತ್ತಿದ್ದಾರೆ. ಎತ್ತಿನ ಹೊಳೆ ನೀರು ಜಿಲ್ಲೆಗೆ ಹರಿಯುವುದು ಕಷ್ಟ ಸಾಧ್ಯ ಎಂದು ಅನೇಕ ವರದಿಗಳು ತಿಳಿಸುತ್ತಿವೆ. ನಗರದಲ್ಲಿರುವಷ್ಟು ಜನಸಂಖ್ಯೆ, ವಾಟಾದಹೊಸಹಳ್ಳಿ ಭಾಗದಲ್ಲೂ ಇದ್ದಾರೆ. 24 ಕಿ.ಮೀ. ನಿಂದ ನಗರಕ್ಕೆ ನೀರು ಹರಿಸುವ ಬದಲು ಅಲ್ಲಿಯೇ ಇರುವ ಕಲ್ಲೂಡಿ, ಗೊಟಕನಾಪುರ ಮತ್ತು ಮರಳೂರು ಕೆರೆಗಳನ್ನು ಅಭಿವೃದ್ಧಿಪಡಿಸಿದರೆ, ನಗರಕ್ಕೆ ನೀರಿನ ಸರಬರಾಜು ಮಾಡುವ ಜೊತೆಗೆ ಅಂತರ್ಜಲ ವೃದ್ಧಿಯಾಗುತ್ತದೆ ಎಂದರು.

ಇದೇ ವೇಳೆ ತಹಶೀಲ್ದಾರ್ ಮಹೇಶ್ ಎಸ್ ಪತ್ರಿ, ನಗರಸಭೆ ಪೌರಾಯುಕ್ತರಾದ ಡಿ.ಎಂ. ಗೀತಾ, ಸಣ್ಣ ನೀರಾವರಿ ಇಲಾಖೆ ಎಇಇ ಮಂಜುನಾಥ್ ಪ್ರಸಾದ್, ವೃತ್ತ ನಿರೀಕ್ಷಕ ಕೆ.ಪಿ. ಸತ್ಯನಾರಾಯಣ, ರೈತ ಮುಖಂಡರು ಮತ್ತು ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

ಗೌರಿಬಿದನೂರು ನಗರದ ಪ್ರಜಾಸೌಧದ ಆವರಣದಲ್ಲಿ ರೈತರ ಮತ್ತು ನಗರದ ಜನಪ್ರತಿನಿಧಿಗಳ ಸಭೆ ಸೋಮವಾರ ಹಮ್ಮಿಕೊಳ್ಳಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.