ಗೌರಿಬಿದನೂರು: ಮನುಷ್ಯ, ಪ್ರಾಣಿ–ಪಕ್ಷಿ ಮತ್ತು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಹೊರ ರಾಜ್ಯಗಳಲ್ಲಿ ನಿಷೇಧಿಸಿರುವ ‘ಕೊನೊಕಾರ್ಪಸ್’ ಎಂಬ ಅಲಂಕಾರಿಕ ಗಿಡವನ್ನು ಖಾಸಗಿ ಬಡಾವಣೆಗಳ ಮಾಲೀಕರು ಬೆಳೆಸಿರುವುದಕ್ಕೆ ಸಾರ್ವಜನಿಕರು ಮತ್ತು ಪರಿಸರ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರ ಬೆಳೆದಂತೆ ರಿಯಲ್ ಎಸ್ಟೇಟ್ ಉದ್ಯಮವೂ ವ್ಯಾಪಾಕವಾಗಿ ಬೆಳೆಯುತ್ತಿದೆ. ಎಲ್ಲಾ ಕಡೆಗಳಲ್ಲೂ ಕೃಷಿಭೂಮಿಗಳನ್ನು ಬಡಾವಣೆಗಳಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಹೊಸ ಬಡಾವಣೆಗಳ ಅಂದ ಹೆಚ್ಚಿಸಲು ‘ಕೊನೊಕಾರ್ಪಸ್’ ಎಂಬ ಅಲಂಕಾರಿಕ ಗಿಡವನ್ನು ಬೆಳೆಸಲಾಗುತ್ತಿದೆ. ಇದರಿಂದ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ ಎಂದು ಪರಿಸರ ಪ್ರೇಮಿಗಳು ದೂರಿದ್ದಾರೆ.
ನಗರದ ಬೈಪಾಸ್ ರಸ್ತೆ, ಕರೇಕಲ್ಲಹಳ್ಳಿ, ನಾಗಸಂದ್ರ ರಸ್ತೆ, ತಾಲ್ಲೂಕು ಕಚೇರಿ ಮುಂಭಾಗ, ತೊಂಡೇಭಾವಿಯ ಎಸಿಸಿ ಕಾರ್ಖಾನೆ ಸೇರಿದಂತೆ ಹಲವು ಖಾಸಗಿ ಬಡಾವಣೆಗಳಲ್ಲಿ ಸೌಂದರ್ಯದ ದೃಷ್ಟಿಯಿಂದ ಕೊನೊಕಾರ್ಪಸ್ ಗಿಡಗಳನ್ನು ಬೆಳೆಸಲಾಗಿದೆ. ಸರ್ಕಾರಿ ಜಾಗ ಮತ್ತು ರಸ್ತೆ ಬದಿಯಲ್ಲಿ ತ್ವರಿತವಾಗಿ ಹಸಿರು ಹೊದಿಕೆ ಹೆಚ್ಚಿಸಲು ಈ ಗಿಡಗಳನ್ನು ಬೆಳೆಸಲಾಗಿದೆ.
ಈ ಗಿಡಗಳು ಹಚ್ಚ ಹಸಿರಿನಿಂದ ಕೂಡಿದ್ದು, ನೋಡಲು ಅಂದವಾಗಿ ಪೊದೆಯಾಕಾರದಲ್ಲಿ ಬೆಳೆಯುತ್ತದೆ. ನಿರ್ವಹಣೆ ಇಲ್ಲದಿದ್ದರೂ ಅಲ್ಪ ಪ್ರಮಾಣದ ನೀರಿನಿಂದ ಸಮೃದ್ಧವಾಗಿ ಬೆಳೆಯುತ್ತವೆ. ಹೆಚ್ಚಿನ ತಾಪಮಾನ ತಡೆದುಕೊಂಡು ಕಡಿಮೆ ಸಮಯದಲ್ಲಿ ದೊಡ್ಡ ಮರವಾಗುತ್ತದೆ.
ಗಿಡದ ಅಕ್ಕಪಕ್ಕದಲ್ಲಿ ಓಡಾಡುವ ವಾಯು ವಿಹಾರಿಗಳಿಗೆ, ಪಾದಚಾರಿಗಳಿಗೆ ಆಸ್ತಮಾ, ಅಲರ್ಜಿ, ಶೀತ ಸೇರಿದಂತೆ ವಿವಿಧ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುತ್ತಿವೆ ಎಂದು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಗುಜರಾತ್ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ಈ ಗಿಡ ನೆಡುವುದನ್ನು ನಿಷೇಧಿಸಿವೆ. ಬೆಳೆದಿರುವ ಗಿಡಗಳನ್ನು ಸಹ ತೆರವುಗೊಳಿಸಲು ಆದೇಶಿಸಿವೆ.
ಮನುಷ್ಯ ಮತ್ತು ಪ್ರಾಣಿ ಪಕ್ಷಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಗಿಡಗಳನ್ನು ಲೇಔಟ್ ಗಳಿಂದ ತೆರವುಗೊಳಿಸಬೇಕು ಹಾಗೂ ಎಲ್ಲೂ ನಾಟಿ ಮಾಡದಂತೆ ಜನರಲ್ಲಿ ಅರಿವು ಮೂಡಿಸಬೇಕು, ಎಂಬುದು ಪರಿಸರ ಪ್ರಿಯರ ಆಗ್ರಹ.
ನಗರ ವ್ಯಾಪ್ತಿಯಲ್ಲಿರುವ ಕೊನೊಕಾರ್ಪಸ್ ಗಿಡಗಳನ್ನು ಬೆಳೆಸಿರುವ ಬಡಾವಣೆ ಮಾಲೀಕರಿಗೆ ನೋಟೀಸ್ ಜಾರಿ ಮಾಡಿ ಗಿಡಗಳನ್ನು ತೆರವುಗೊಳಿಸಲಾಗುವುದುಡಿ.ಎಂ. ಗೀತಾ ಪೌರಾಯುಕ್ತರು ನಗರಸಭೆ
ಜೀವವೈವಿಧ್ಯತೆಗೆ ಧಕ್ಕೆ
ಈ ಗಿಡಗಳು ಹೆಚ್ಚಿನ ಆಮ್ಲಜನಕ ಹೀರಿಕೊಂಡು ಕಡಿಮೆ ಇಂಗಾಲವನ್ನು ಹೊರ ಸೂಸುತ್ತವೆ. ಇದರ ಎಲೆಗಳನ್ನು ಯಾವುದೇ ಜಾನುವಾರುಗಳು ತಿನ್ನುವುದಿಲ್ಲ. ಜೇನುನೊಣಗಳು ಮತ್ತು ಚಿಟ್ಟೆಗಳು ಇದರ ಬಳಿ ಸುಳಿವುದಿಲ್ಲ. ಈ ಗಿಡಗಳು ಪರಾಗಸ್ಪರ್ಶ ಮತ್ತು ಜೀವವೈವಿಧ್ಯತೆಯನ್ನು ಕಡಿಮೆ ಮಾಡುತ್ತವೆ ಎನ್ನುತ್ತಾರೆ ಪರಿಸರ ಪ್ರಿಯರು. ಪಕ್ಷಿಗಳು ಈ ಗಿಡದಲ್ಲಿ ತಂಗುವುದಿಲ್ಲ. ಗೂಡು ಕಟ್ಟುವುದಿಲ್ಲ. ಜೊತೆಗೆ ಇದರ ಬೇರುಗಳು ನೆಲದೊಳಗೆ ಹೊಕ್ಕಿ ಹೆಚ್ಚಿನ ನೀರನ್ನು ಹೀರಿಕೊಳ್ಳುತ್ತವೆ. ಇದರಿಂದ ಅಂತರ್ಜಲ ಮಟ್ಟಕ್ಕೆ ಹಾನಿಕರ. ಜೊತೆಗೆ ಇದರ ಸಮೀಪ ಯಾವುದೇ ಗಿಡಗಳನ್ನು ಬೆಳೆಯಲು ಅವಕಾಶ ನೀಡುವುದಿಲ್ಲ. ಮನೆಗಳ ಸುತ್ತಮುತ್ತಲಿನ ನೀರಿನ ಪೈಪ್‌ಗಳಲ್ಲಿ ಬಹು ಬೇಗ ಸೇರಿಕೊಂಡು ಹಾನಿಗೊಳಿಸುತ್ತವೆ. ಇತರ ಸಸ್ಯಗಳು ಬೆಳೆಯಲು ಹೆಣಗಾಡುವ ಪ್ರದೇಶಗಳಲ್ಲಿ ಸಹ ಹುಲುಸಾಗಿ ಈ ಗಿಡ ಬೆಳೆಯುತ್ತದೆ.
ಗಿಡಗಳ ತೆರವುಗೊಳಿಸಿ
ಇತ್ತೀಚಿಗೆ ನಿರ್ಮಾಣವಾಗುತ್ತಿರುವ ಬಡಾವಣೆಗಳಲ್ಲಿ ಹೆಚ್ಚಾಗಿ ಕೊನೊಕಾರ್ಪಸ್ ಗಿಡಗಳನ್ನು ಬೆಳೆಸಿದ್ದಾರೆ. ಇದರಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹಲವು ರಾಜ್ಯಗಳು ಈ ಗಿಡ ಬೆಳೆಸುವುದನ್ನು ನಿಷೇಧಿಸಿವೆ ಸಂಭಂದ ಪಟ್ಟ ಅಧಿಕಾರಿಗಳು ಈ ಬಗ್ಗೆ ಜನರಿಗೆ ಅರಿವು ಮೂಡಿಸಿ ಈ ಗಿಡಗಳನ್ನು ತೆರವುಗೊಳಿಸಬೇಕು. ಅಶೋಕ್ ವಕೀಲರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.