ADVERTISEMENT

ಗೌರಿಬಿದನೂರಿಗೆ ಬಾರದ ‘ನಮ್ಮ ಕ್ಲಿನಿಕ್’

ಕೆ.ಎನ್‌.ನರಸಿಂಹಮೂರ್ತಿ
Published 3 ಮಾರ್ಚ್ 2025, 7:45 IST
Last Updated 3 ಮಾರ್ಚ್ 2025, 7:45 IST
ನಮ್ಮ ಕ್ಲಿನಿಕ್‌ ಲಾಂಛನ
ನಮ್ಮ ಕ್ಲಿನಿಕ್‌ ಲಾಂಛನ   

ಗೌರಿಬಿದನೂರು: ನಗರದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಾತ್ರ ರೋಗಿಗಳ ಪಾಲಿಗೆ ಲಭ್ಯವಿದೆ. ಸಾರ್ವಜನಿಕ ಆಸ್ಪತ್ರೆ ಇನ್ನು ನಿರ್ಮಾಣದ ಹಂತದಲ್ಲಿದೆ. ಇದರಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮೇಲೆ ರೋಗಿಗಳ ಅವಲಂಬನೆ ಹೆಚ್ಚಾಗಿದೆ. ವೈದ್ಯರಿಗೂ ಕೂಡ ಒತ್ತಡ ಹೆಚ್ಚಾಗಿದೆ. ರೋಗಿಗಳು ಚಿಕಿತ್ಸೆ ಪಡೆಯಲು ಆಸ್ಪತ್ರೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಇದೆ.

ಹೀಗಿದ್ದರೂ ಗೌರಿಬಿದನೂರಿಗೆ ‘ನಮ್ಮ ಕ್ಲಿನಿಕ್’ ಸೌಲಭ್ಯ ಮಾತ್ರ ಇಂದಿಗೂ ದೊರೆತಿಲ್ಲ. ನಗರ ಭಾಗದ ಜನರ ಆರೋಗ್ಯ ದೃಷ್ಟಿಯಿಂದ ಹಿಂದಿನ ಬಿಜೆಪಿ ಸರ್ಕಾರ ರಾಜ್ಯದಾದ್ಯಂತ 438 ‘ನಮ್ಮ ಕ್ಲಿನಿಕ್‌’ಗಳನ್ನು ಸ್ಥಾಪಿಸಿತ್ತು. ಕೆಲವು ಮಾನದಂಡ ಅನುಸರಿಸಿ ನಗರ ಪ್ರದೇಶಗಳಲ್ಲಿ ಕ್ಲಿನಿಕ್‌ಗಳನ್ನು ತೆರೆಯಲಾಗಿತ್ತು. ಕನಿಷ್ಠ 30 ಸಾವಿರ ಜನಸಂಖ್ಯೆ ಇರುವ ನಿರ್ದಿಷ್ಟ ಪ್ರದೇಶದಲ್ಲಿ ಕ್ಲಿನಿಕ್‌ಗಳನ್ನು ಪ್ರಾರಂಭಿಸಲಾಗಿತ್ತು.

ಜಿಲ್ಲೆಯವರೇ ಆದ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಾ.ಕೆ.ಸುಧಾಕರ್ ‘ನಮ್ಮ ಕ್ಲಿನಿಕ್‌’ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ADVERTISEMENT

ನಗರ ಭಾಗದಲ್ಲಿ ವಾಸವಿರುವ, ಬಡತನ ರೇಖೆಗಿಂತ ಕೆಳಗಿನವರು, ಕಾರ್ಮಿಕರು ಮತ್ತು ಅಶಕ್ತರಿಗೆ ಸುಲಭವಾಗಿ ಚಿಕಿತ್ಸೆ ಸಿಗುವಂತೆ ಮಾಡುವ ಉದ್ದೇಶದಿಂದ ಈ ಯೋಜನೆಯು ಜಾರಿಯಾಗಿತ್ತು. ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಮತ್ತು ಚಿಂತಾಮಣಿ ಸೇರಿದಂತೆ ಜಿಲ್ಲೆಗೆ ಮೂರು ಕ್ಲಿನಿಕ್‌‌ಗಳು ಮಂಜೂರಾಗಿದ್ದವು.

ಈ ನಮ್ಮ ಕ್ಲಿನಿಕ್‌ನಲ್ಲಿ ಉಚಿತ ತಪಾಸಣೆ ಮತ್ತು ಉಚಿತ ಔಷಧ ವಿತರಣೆ, ಸೇರಿದಂತೆ ಒಟ್ಟು 12 ರೀತಿಯ ಆರೋಗ್ಯ ಸೇವೆಗಳು ಹಾಗೂ 14 ವಿಧದ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಇ-ಸಂಜೀವಿನಿ ಹಾಗೂ ಟೆಲಿ ಕೌನ್ಸೆಲಿಂಗ್‌ ಮೂಲಕ ಚಿಕಿತ್ಸೆ ಕೊಡಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಇದರಿಂದ ರೋಗಿಗಳು ನಗರದ ಸಾರ್ವಜನಿಕ ಆಸ್ಪತ್ರೆಗೆ ಹೋಗುವುದು ತಪ್ಪುತ್ತದೆ. 

ಬಡವರು, ಕೂಲಿಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸಣ್ಣಪುಟ್ಟ ಪರೀಕ್ಷೆಗಳಿಗೂ ದಿನಗಟ್ಟಲೆ ತಾಲ್ಲೂಕು ಆಸ್ಪತ್ರೆಗಳಲ್ಲಿ ಕಾಯಬೇಕಾಗಿತ್ತು. ಆದರೆ ನಮ್ಮ ಕ್ಲಿನಿಕ್ ಕಾರಣದಿಂದ ತಕ್ಷಣವೇ ಚಿಕಿತ್ಸೆ ಮತ್ತು ಪರೀಕ್ಷೆಗಳು ನಡೆಯುತ್ತವೆ.

ನಗರದ ಆಸ್ಪತ್ರೆಗಳಲ್ಲಿ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳ ಒತ್ತಡ ಕಡಿಮೆ ಮಾಡಲು, ನಗರ ಪ್ರದೇಶಗಳಲ್ಲಿ ಸ್ಥಳೀಯವಾಗಿ ಉತ್ತಮ ಚಿಕಿತ್ಸಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ‘ನಮ್ಮ ಕ್ಲಿನಿಕ್‌’ಗಳು ಸಹಕಾರಿಯಾಗಲಿವೆ. 

 ‘ನಮ್ಮ ಕ್ಲಿನಿಕ್‌’ನಲ್ಲಿ ಇಬ್ಬರು ವೈದ್ಯರು, ಒಬ್ಬ ಶುಶ್ರೂಷಕಿ, ಒಬ್ಬ ಪ್ರಯೋಗಾಲಯ ತಂತ್ರಜ್ಞರು ಮತ್ತು ಒಬ್ಬ ‘ಡಿ’ ಗ್ರೂಪ್ ನೌಕರ ಕೆಲಸ ಮಾಡುವರು. ಹೀಗಾಗಿ ನಗರಗಳಲ್ಲಿ ಸಣ್ಣಪುಟ್ಟ ಸಮಸ್ಯೆಗೂ ಕೇಂದ್ರ ಭಾಗದಲ್ಲಿರುವ ದೊಡ್ಡ ಆಸ್ಪತ್ರೆಯನ್ನು ಆಶ್ರಯಿಸಿದರೆ ಸಹಜವಾಗಿ ಕೇಂದ್ರದ ಭಾಗದಲ್ಲಿರುವ ಆಸ್ಪತ್ರೆಗೆ ಒತ್ತಡ ಹೆಚ್ಚುತ್ತದೆ.

ಹೀಗಾಗಿ ನಗರ ವ್ಯಾಪ್ತಿಯಲ್ಲೇ ನಮ್ಮ ಕ್ಲಿನಿಕ್‌ ಸ್ಥಾಪಿಸಿದರೆ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿತ್ತು.

ಆದರೆ, ಗೌರಿಬಿದನೂರು ನಗರಕ್ಕೆ ಇಂದಿಗೂ ಸಹ ‘ನಮ್ಮ ಕ್ಲಿನಿಕ್’ ಭಾಗ್ಯವಿಲ್ಲ. ಇದರಿಂದ ಪ್ರತಿ ಸಣ್ಣ ಕಾಯಿಲೆಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.

ಗೌರಿಬಿದನೂರು ಜಿಲ್ಲೆಯಲ್ಲಿ ಬೆಳೆಯುತ್ತಿರುವ ಪ್ರಮುಖ ನಗರ. ನಗರದಲ್ಲಿ 31 ವಾರ್ಡ್‌ಗಳಿದ್ದು 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಟಿಪ್ಪು ನಗರ, ನೆಹರೂ ಕಾಲೊನಿ, ಬಸ್ ನಿಲ್ದಾಣ ಸುತ್ತಮುತ್ತ ಕೊಳೆಗೇರಿಗಳು ಇವೆ. ಈ ಎಲ್ಲ ಕಾರಣದಿಂದ ಗೌರಿಬಿದನೂರು ನಗರಕ್ಕೆ ‘ನಮ್ಮ ಕ್ಲಿನಿಕ್’ ಆರಂಭವಾಗಬೇಕು ಎನ್ನುವುದು ಗೌರಿಬಿದನೂರು ನಾಗರಿಕರ ಒತ್ತಾಯ. 

ಶೀಘ್ರ ಪ್ರಾರಂಭದ ನಿರೀಕ್ಷೆ

‘ನಮ್ಮ ಕ್ಲಿನಿಕ್’ ಪ್ರಾರಂಭಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಕಾರಣಾಂತರಗಳಿಂದ ವಿಳಂಬವಾಗಿದೆ. ಶೀಘ್ರದಲ್ಲೇ ನಗರದಲ್ಲಿ ‘ನಮ್ಮ ಕ್ಲಿನಿಕ್’ ಪ್ರಾರಂಭವಾಗುವ ನಿರೀಕ್ಷೆ ಇದೆ.

–ಚಂದ್ರ ಮೋಹನ್ ರೆಡ್ಡಿ, ತಾಲ್ಲೂಕು ವೈದ್ಯಾಧಿಕಾರಿ, ಗೌರಿಬಿದನೂರು

ಜನರಿಗೆ ಅನುಕೂಲ

ಸಣ್ಣ ಪುಟ್ಟ ತೊಂದರೆಗಳಿಗೂ, ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಲು ಸರತಿ ಸಾಲಿನಲ್ಲಿ ಕಾಯಬೇಕು. ಸರ್ಕಾರ ಆದಷ್ಟು ಬೇಗ ನಗರದಲ್ಲಿ ‘ನಮ್ಮ ಕ್ಲಿನಿಕ್‌’ ಪ್ರಾರಂಭ ಮಾಡಿದರೆ, ಜನರಿಗೆ ಅನುಕೂಲವಾಗಲಿದೆ.

–ಶಾಂತರಾಜು, ಕರೇಕಲ್ಲಹಳ್ಳಿ

ಹೆಚ್ಚಿನ ಜನಸಂಖ್ಯೆ

ನಗರದಲ್ಲಿ ನಮ್ಮ ಕ್ಲಿನಿಕ್‌ ಅವಶ್ಯಕತೆ ತುಂಬಾ ಇದೆ. ನಗರ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಒಂದೇ ಸರ್ಕಾರಿ ಆಸ್ಪತ್ರೆ ಮೇಲೆ ಆವಲಂಬನೆ ಆಗಬೇಕಾಗಿದೆ. ಪರ್ಯಾಯ ವ್ಯವಸ್ಥೆ ಸರ್ಕಾರ ಕೂಡಲೇ ಮಾಡಬೇಕು.

–ಕೃಷ್ಣಪ್ಪ, ಕಲ್ಲೂಡಿ

ತಾಯಿ, ಮಕ್ಕಳ ಆಸ್ಪತ್ರೆಯಲ್ಲಿ ಜನಸಂದಣಿ

ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಹೋದರೆ, ಜನ ಹೆಚ್ಚಾಗಿರುತ್ತಾರೆ. ಬೇಗ ತಪಾಸಣೆ ಮಾಡಿಸಲು ಆಗುವುದಿಲ್ಲ. ನಮ್ಮ ಕ್ಲಿನಿಕ್‌ಗಳು ಪ್ರಾರಂಭವಾದರೆ ಹತ್ತಿರದಲ್ಲಿಯೇ ಬೇಗ ತಪಾಸಣೆ ಮತ್ತು ಚಿಕಿತ್ಸೆ ಪಡೆಯಬಹುದು.

–ಲಕ್ಷ್ಮಿ, ಹಿರೇಬಿದನೂರು

ಜನರಿಗೆ ಅನುಕೂಲ

ಸಣ್ಣ ಪುಟ್ಟ ತೊಂದರೆಗಳಿಗೂ, ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಲು ಸರತಿ ಸಾಲಿನಲ್ಲಿ ಕಾಯಬೇಕು. ಸರ್ಕಾರ ಆದಷ್ಟು ಬೇಗ ನಗರದಲ್ಲಿ ‘ನಮ್ಮ ಕ್ಲಿನಿಕ್‌’ ಪ್ರಾರಂಭ ಮಾಡಿದರೆ, ಜನರಿಗೆ ಅನುಕೂಲವಾಗಲಿದೆ.

–ಶಾಂತರಾಜು, ಕರೇಕಲ್ಲಹಳ್ಳಿ

ಹೆಚ್ಚಿನ ಜನಸಂಖ್ಯೆ

ನಗರದಲ್ಲಿ ನಮ್ಮ ಕ್ಲಿನಿಕ್‌ ಅವಶ್ಯಕತೆ ತುಂಬಾ ಇದೆ. ನಗರ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಒಂದೇ ಸರ್ಕಾರಿ ಆಸ್ಪತ್ರೆ ಮೇಲೆ ಆವಲಂಬನೆ ಆಗಬೇಕಾಗಿದೆ. ಪರ್ಯಾಯ ವ್ಯವಸ್ಥೆ ಸರ್ಕಾರ ಕೂಡಲೇ ಮಾಡಬೇಕು.

–ಕೃಷ್ಣಪ್ಪ, ಕಲ್ಲೂಡಿ

ತಾಯಿ, ಮಕ್ಕಳ ಆಸ್ಪತ್ರೆಯಲ್ಲಿ ಜನಸಂದಣಿ

ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಹೋದರೆ, ಜನ ಹೆಚ್ಚಾಗಿರುತ್ತಾರೆ. ಬೇಗ ತಪಾಸಣೆ ಮಾಡಿಸಲು ಆಗುವುದಿಲ್ಲ. ನಮ್ಮ ಕ್ಲಿನಿಕ್‌ಗಳು ಪ್ರಾರಂಭವಾದರೆ ಹತ್ತಿರದಲ್ಲಿಯೇ ಬೇಗ ತಪಾಸಣೆ ಮತ್ತು ಚಿಕಿತ್ಸೆ ಪಡೆಯಬಹುದು.

–ಲಕ್ಷ್ಮಿ, ಹಿರೇಬಿದನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.