ADVERTISEMENT

ಗೌರಿಬಿದನೂರು: ದೂಳು ತಿನ್ನುತ್ತಿರುವ ಕಲಿಕಾ ಪರಿಕರಗಳು

ಕಾಲೇಜಿನ ಹಳೆಯ ಕಟ್ಟಡದಲ್ಲಿ ಅವ್ಯವಸ್ಥೆ l ಪಾಳು ಬಿದ್ದ ಸ್ಥಿತಿಯಲ್ಲಿ ಕಟ್ಟಡ

​ಪ್ರಜಾವಾಣಿ ವಾರ್ತೆ
ಕೆ.ಎನ್‌.ನರಸಿಂಹಮೂರ್ತಿ
Published 3 ಜೂನ್ 2025, 7:43 IST
Last Updated 3 ಜೂನ್ 2025, 7:43 IST
ಗೌರಿಬಿದನೂರು ನಗರದ ಸರ್ಕಾರಿ ಕೈಗಾರಿಕೆ ಮತ್ತು ತರಬೇತಿ ಕಾಲೇಜಿನ ಗೋದಾಮಿನಲ್ಲಿ ದೂಳು ತಿನ್ನುತ್ತಿರುವ ಬ್ಯಾಗುಗಳು
ಗೌರಿಬಿದನೂರು ನಗರದ ಸರ್ಕಾರಿ ಕೈಗಾರಿಕೆ ಮತ್ತು ತರಬೇತಿ ಕಾಲೇಜಿನ ಗೋದಾಮಿನಲ್ಲಿ ದೂಳು ತಿನ್ನುತ್ತಿರುವ ಬ್ಯಾಗುಗಳು   

ಗೌರಿಬಿದನೂರು: ಬಡವರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರವು ಹಲವು ಯೋಜನೆಗಳನ್ನು ರೂಪಿಸುತ್ತದೆ. ಆದರೆ, ಕೆಲವು ಕಾಲೇಜುಗಳು ಮತ್ತು ಇಲಾಖೆಯ ಬೇಜವಾಬ್ದಾರಿತನದಿಂದ ವಿದ್ಯಾರ್ಥಿಗಳಿಗೆ ಸಿಗಬೇಕಾದ ಹಲವು ಯೋಜನೆಗಳು ಹಳ್ಳ ಹಿಡಿಯುತ್ತವೆ. 

ಅದೇ ರೀತಿ ನಗರದ ಕೋಟೆಯಲ್ಲಿರುವನ ಸರ್ಕಾರಿ ಕೈಗಾರಿಕೆ ಮತ್ತು ತರಬೇತಿ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿತರಣೆ ಮಾಡಬೇಕಿದ್ದ ಬ್ಯಾಗು ಸೇರಿದಂತೆ ವಿವಿಧ ಕಲಿಕಾ ಪರಿಕರಗಳು ಗೋದಾಮುಗಳಲ್ಲಿ ದೂಳು ತಿನ್ನುತ್ತಿವೆ. 

ಸರ್ಕಾರಿ ಕೈಗಾರಿಕೆ ಮತ್ತು ತರಬೇತಿ ಸಂಸ್ಥೆಯಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಫಿಟ್ಟರ್, ಇಲೆಕ್ಟ್ರಾನಿಕ್ ಮೆಕಾನಿಕ್, ಕಟಿಂಗ್ ಅಂಡ್ ಸುಯಿಂಗ್ ಮತ್ತು ಎಲೆಕ್ಟ್ರಿಷಿಯನ್ ತರಬೇತಿ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತರಬೇತಿ ಕಲ್ಪಿಸುವ ನಿಟ್ಟಿನಲ್ಲಿ ಕೆಲವು ವರ್ಷಗಳ ಹಿಂದೆ ನೂತನ ಕಟ್ಟಡ ನಿರ್ಮಾಣ ಮಾಡಿ, ಕಾಲೇಜಿಗೆ ಹಸ್ತಾಂತರಿಸಲಾಗಿದೆ. ಪಕ್ಕದಲ್ಲೇ ಇರುವ ಹಳೆಯ ಕಟ್ಟಡವನ್ನು ಕಚೇರಿ ಕೆಲಸಗಳಿಗಾಗಿ ಬಳಕೆ ಮಾಡಲು ಅನುವು ಮಾಡಿಕೊಡಲಾಗಿದೆ. 

ADVERTISEMENT

ಆದರೆ, ಹಳೆಯ ಕಟ್ಟಡದ ಕೊಠಡಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು ಮತ್ತು ತಾಲ್ಲೂಕಿನ ಐಟಿಐ ಕಾಲೇಜುಗಳ ವಿದ್ಯಾರ್ಥಿಗಳಿಗೆ  ವಿತರಣೆ ಮಾಡಲು ಸರ್ಕಾರ ಹಲವು ವರ್ಷಗಳ ಹಿಂದೆ ನೀಡಿರುವ ಲಕ್ಷಾಂತರ ರೂಪಾಯಿ ಮೌಲ್ಯದ ಸಮವಸ್ತ್ರ, ಶೂ, ಬ್ಯಾಗ್, ಪುಸ್ತಕಗಳು, ಕಲಿಕಾ ಪರಿಕರಗಳು ಹಾಗೂ ಕಾಲೇಜು ಸಿಬ್ಬಂದಿ ಬಳಸುವ ಕುರ್ಚಿಗಳು ತುಕ್ಕು ಹಿಡಿಯುತ್ತಿದೆ. ಆದಾಗ್ಯೂ, ಸಂಸ್ಥೆಯವರು ವಿದ್ಯಾರ್ಥಿಗಳಿಗೆ ಈ ಕಲಿಕಾ ಪರಿಕರಗಳನ್ನು ನೀಡದೆ, ಕೊಠಡಿಗಳಿಗೆ ಬೀಗ ಮುದ್ರೆ ಹಾಕಿದ್ದಾರೆ. 

ಹಳೆಯ ಕಟ್ಟಡವನ್ನು ಕಚೇರಿಯಾಗಿ ಬಳಸುತ್ತಿರುವ ಕಾಲೇಜಿನ ಸಿಬ್ಬಂದಿ, ಕಟ್ಟಡದ ಸ್ವಚ್ಛತೆ ಆದ್ಯತೆಯನ್ನೇ ನೀಡಿಲ್ಲ. ಜೊತೆಗೆ ಕಲಿಕಾ ವಾತಾವರಣ ಸೃಷ್ಟಿಸುವ ಗೋಜಿಗೂ ಹೋದಂತಿಲ್ಲ. ಇದರಿಂದಾಗಿ ಕಟ್ಟಡ ಪಾಳು ಬಿದ್ದಿದೆ ಎಂಬಂತೆ ಭಾಸವಾಗುತ್ತಿದೆ. ಕೊಠಡಿಗಳು ಪೂರ್ತಿ ದೂಳುಮಯವಾಗಿವೆ. ಶೌಚಾಲಯಗಳ ಸ್ಥಿತಿಯಂತೂ ಶೋಚನೀಯವಾಗಿದೆ. ಕೋತಿಗಳು ಬರಬಾರದೆಂದು ಕಿಟಕಿಗಳಿಗೆ ಮುಳ್ಳಿನ ಕಡ್ಡಿ ಸುತ್ತಲಾಗಿದೆ. ಗೋಡೆಗಳ ಮೇಲೆ ಗುಟ್ಕಾ ಕಲೆಗಳು ಕಣ್ಣಿಗೆ ರಾಚುತ್ತಿದೆ. ಹೀಗಾಗಿ, ಹಳೆಯ ಕಟ್ಟಡವು ಅಕ್ರಮ ಚಟುವಟಿಕೆಗಳ ತಾಣವಾಗಿದೆಯೇ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ವಾರದಲ್ಲಿ ವಿತರಣೆ

ಕಾಲೇಜಿಗೆ ಬಂದಿರುವ ಸಮವಸ್ತ್ರ ಪುಸ್ತಕ ಪರಿಕರಗಳನ್ನು ಸರ್ಕಾರಿ ಐಟಿಐ ಕಾಲೇಜಿನ ಜೊತೆಗೆ ತಾಲ್ಲೂಕಿನಲ್ಲಿರುವ ಇತರ ಐಟಿಐ ಕಾಲೇಜಿಗಳಿಗೂ ವಿತರಣೆ ಮಾಡಬೇಕು. ಐದು ದಿನಗಳ ಹಿಂದೆ ವಿತರಣೆ ಮಾಡಲು ಸರ್ಕಾರದಿಂದ ಅನುಮತಿ ಬಂದಿದೆ. ಶೀಘ್ರದಲ್ಲೇ ವಿತರಣೆ ಮಾಡಲಾಗುವುದು ಎಂದು ಸರ್ಕಾರಿ ಕೈಗಾರಿಕೆ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಚಂದ್ರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.