
ಗೌರಿಬಿದನೂರು: ನಗರದ ಹೃದಯ ಭಾಗದಲ್ಲಿ ರೈಲ್ವೆ ಇಲಾಖೆ ನಿರ್ಮಿಸಿರುವ ರೈಲ್ವೆ ಮೇಲ್ಸೇತುವೆ ಮೇಲೆ ಬೆಳೆದಿರುವ ಗಿಡಗಳ ನಿರ್ವಹಣೆ ಇಲ್ಲದೆ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.
ತುಮಕೂರು ರಸ್ತೆ ಮತ್ತು ಕರೇಕಲ್ಲಹಳ್ಳಿಗೆ ಹೋಗುವ ರಸ್ತೆ ಬಳಿ ಹಾದು ಹೋಗಿರುವ ರೈಲ್ವೆ ಮೇಲ್ಸೇತುವೆಗಳ ಮೇಲೆ ಭಾರಿ ಪ್ರಮಾಣದ ಮುಳ್ಳಿನ ಗಿಡಗಳು ಬೆಳೆದಿವೆ. ಇವುಗಳನ್ನು ಹಲವು ದಿನಗಳಿಂದ ಸ್ವಚ್ಛ ಮಾಡದ ಕಾರಣ ಮುಳ್ಳಿನ ಮರಗಳು ಮತ್ತು ಕುರುಚಲು ಪೊದೆಗಳು ಎತ್ತರವಾಗಿ ಬೆಳೆದಿದ್ದು, ವಿಷ ಜಂತುಗಳು ಸೇರಿಕೊಂಡು ಆಗಾಗ ರಸ್ತೆಗೆ ಬರುತ್ತಿವೆ. ಇದರಿಂದ ಸಾರ್ವಜನಿಕರು ಮತ್ತು ವಾಹ ಸವಾರರಿಗೆ ಸಂಚಕಾರವಾಗಿವೆ.
ಈ ರಸ್ತೆಗಳನ್ನು ಪ್ರತಿನಿತ್ಯ ನೂರಾರು ವಾಹನಗಳು ಮತ್ತು ಪಾದಚಾರಿಗಳು ನೆಚ್ಚಿಕೊಂಡಿದ್ದಾರೆ. ನೂರಾರು ವಿದ್ಯಾರ್ಥಿಗಳು ಸಹ ಇದೇ ಸೇತುವೆ ಕೆಳಗಿನ ರಸ್ತೆಯಲ್ಲಿ ನಡೆದು ಹೋಗುತ್ತಾರೆ. ಇಲ್ಲಿ ರೈಲ್ವೆ ಇಲಾಖೆಯವರು ಸರಿಯಾದ ಬೆಳಕಿನ ವ್ಯವಸ್ಥೆ ಸಹ ಮಾಡಿಲ್ಲ.
ಮಳೆ ಬಂದಾಗ ಗಿಡಗಳಲ್ಲಿರುವ ಎಲೆ, ಮುಳ್ಳುಗಳು ಮತ್ತು ಕೆಸರು ರಸ್ತೆ ತುಂಬೆಲ್ಲ ಹರಡುತ್ತದೆ. ಆಗ ಕೆಸರಿನಲ್ಲಿ ಪಾದಚಾರಿಗಳಿಗೆ ಓಡಾಡುವುದು ದುಸ್ತರವಾಗುತ್ತದೆ. ಇಲ್ಲಿ ಬೆಳೆದ ಗಿಡಗಳಿಂದ ಮೇಲ್ಸೇತುವೆಗೂ ಹಾನಿಯಾಗುತ್ತಿದೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳು ಗಮನಹರಿಸಿ ಗಿಡಗಳನ್ನು ತೆರವುಗೊಳಿಸಬೇಕು.
ಜಗದೀಶ್, ಸತ್ಯನಾರಾಯಣ, ಸ್ಥಳೀಯ ನಿವಾಸಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.