
ಗೌರಿಬಿದನೂರು: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಚರಂಡಿಗಳಲ್ಲಿ ಹೂಳು, ಕುರುಚಲು ಗಿಡಗಳು ಬೆಳೆದು ಸ್ವಚ್ಛತೆ ಮರೀಚಿಕೆಯಾಗಿದೆ. ಇದರಿಂದ ಹಳ್ಳಿಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗುತ್ತಿದೆ.
ಒಂದು ಕಡೆ ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಿ ಎಂದು ಜನರಲ್ಲಿ ಗ್ರಾಮ ಪಂಚಾಯಿತಿಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮತ್ತೊಂದೆಡೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಹಳ್ಳಿಗಳಲ್ಲಿ ಚರಂಡಿಗಳಲ್ಲಿ ಕಸಕಡ್ಡಿ ತುಂಬಿ ಗಿಡಗಳು ಬೆಳೆದು ಕೊಳಚೆ ತಾಣಗಳಾಗಿ ಬದಲಾಗುತ್ತಿವೆ.
ತಾಲ್ಲೂಕಿನ ಕಸಬಾ, ಹೊಸೂರು, ನಗರಗೆರೆ, ಡಿ.ಪಾಳ್ಯ ಸೇರಿದಂತೆ ಎಲ್ಲಾ ಹೋಬಳಿಗಳ ಹಳ್ಳಿಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ತೆರೆದ ಚರಂಡಿಗಳಿದೆ. ಮನೆಗಳಲ್ಲಿ ಬಟ್ಟೆ, ಪಾತ್ರೆ ತೊಳೆದ ನೀರು, ಬಚ್ಚಲು ನೀರು ಎಲ್ಲವೂ ತೆರೆದ ಚರಂಡಿಗೆ ಸೇರುತ್ತಿವೆ. ಈ ನೀರು ಮುಂದೆ ಹೋಗಲು ಜಾಗವಿಲ್ಲದೆ ಒಂದೇ ಕಡೆ ನಿಂತು ಕೊಳಚೆ ಪ್ರದೇಶವಾಗಿ ಸಾರ್ವಜನಿಕರು ತ್ಯಾಜ್ಯ ಎಸೆಯಲು ಬಳಸುವಂತಾಗಿದೆ.
ಈ ನೀರು ನಿಂತಲ್ಲೇ ನಿಲ್ಲುತ್ತಿರುವುದರಿಂದ ಸೊಳ್ಳೆ ಉತ್ಪತ್ತಿ ಮಾಡುವ ಕೊಳಚೆ ಪ್ರದೇಶಗಳಾಗಿ ಮಾರ್ಪಟ್ಟಿವೆ. ಕಸ ಸ್ವಚ್ಛತೆ ಮಾಡುವ ವಾಹನಗಳಂತೂ ನಿಂತ ಸ್ಥಳದಿಂದ ಕದಲುವುದೇ ಇಲ್ಲ. ಇತ್ತೀಚೆಗೆ ಸುರಿದ ಮಳೆಯಿಂದ ದುರ್ನಾತ ಬೀರುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡಬೇಕಾಗಿರುವ ಪಂಚಾಯಿತಿ ಅಧಿಕಾರಿಗಳು ಮಾತ್ರ ಚರಂಡಿಗಳಿಗೆ ಕನಿಷ್ಠ ತಿಂಗಳಿಗೊಮ್ಮೆಯಾದರೂ ಸ್ವಚ್ಛ ಮಾಡುವುದಾಗಲಿ, ಬ್ಲೀಚಿಂಗ್ ಪೌಡರ್ ಹಾಕುವುದಾಗಲಿ, ರಾಸಾಯನಿಕ ಸಿಂಪಡಣೆ ಮಾಡುವುದಾಗಲಿ ಮಾಡುವ ಗೋಜಿಗೆ ಹೋಗುತ್ತಿಲ್ಲ. ಇದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಹಳ್ಳಿಗಳಲ್ಲಿ ನಿರ್ಮಾಣವಾಗಿದೆ.
ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಂದಾಯ ವಸೂಲಿ ಮಾಡುವುದನ್ನು ಬಿಟ್ಟರೆ, ಹಳ್ಳಿಗಳಿಗೆ ಬೇಕಾದ ಮೂಲಸೌಕರ್ಯ ಮತ್ತು ಸ್ವಚ್ಛತೆ ಒದಗಿಸುವಲ್ಲಿ ಪಂಚಾಯಿತಿಗಳು ವಿಫಲವಾಗಿದೆ ಎಂದು ಗ್ರಾಮೀಣ ಭಾಗದ ಜನ ಆರೋಪಗಳ ಸುರಿಮಳೆ ಗೈಯುತ್ತಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ಸ್ವಚ್ಛತೆ ಕಾಪಾಡಲು ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಭಾವನೆಯಿಂದ ಗ್ರಾಮೀಣ ಭಾಗದಲ್ಲಿ ಇಂದಿಗೂ ಕೊಳಚೆ ಪ್ರದೇಶದಂತಹ ಜಾಗಗಳಲ್ಲಿ ವಾಸ ಮಾಡುವಂತಾಗಿದೆ. ತಾಲ್ಲೂಕಿನ ಗಡಿ ಭಾಗ ಮತ್ತು ದಲಿತರ ಕಾಲೋನಿಗಳಲ್ಲಂತೂ ಮನೆಯ ಮುಂದೆಯೇ ಚರಂಡಿಗಳಲ್ಲಿ ಕೊಳಚೆ ನೀರು ತುಂಬಿ, ಸೊಳ್ಳೆಗಳ ಕಾಟ ಮಿತಿ ಮೀರಿದೆ. ಇದರಿಂದ ಸರಿಯಾಗಿ ನಿದ್ರಿಸಲು ಸಹ ಸಾಧ್ಯವಾಗುತ್ತಿಲ್ಲ.
ಅಧಿಕಾರಿಗಳು ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದಿಲ್ಲ. ದಲಿತರ ಕಾಲೋನಿಗಳ ಕಡೆಯಂತೂ ಕೊಳಚೆ ನೀರು ತುಂಬಿ ಗಬ್ಬು ನಾರುತ್ತಿದೆ. ಯಾವುದಾದರು ಕಾರ್ಯಕ್ರಮಗಳು ನಡೆದಾಗ ಮಾತ್ರ ಸ್ವಚ್ಛಗೊಳಿಸಲು ಬರುತ್ತಾರೆ.ನಾರಾಯಣಪ್ಪ, ನಗರಗೆರೆ
ನೀರು ಹರಿಯಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಗಲೀಜು ನೀರು ಮನೆಗಳ ಮುಂದೆಯೇ ಇದೆ. ಗಲೀಜು ದುರ್ನಾತ ಸೊಳ್ಳೆ ಕಾಟದ ನಡುವೆ ಬದುಕುವಂತಾಗಿದೆ.ಕೃಷ್ಣಮೂರ್ತಿ ವಾಟದಹೊಸಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.