ADVERTISEMENT

ಚಿಕ್ಕಬಳ್ಳಾಪುರ: ಮೊದಲ ಹಂತದ ಮತದಾನ ಆರಂಭ

ಚಿಂತಾಮಣಿ, ಬಾಗೇಪಲ್ಲಿ, ಶಿಡ್ಲಘಟ್ಟ ತಾಲ್ಲೂಕಿನ 84 ಗ್ರಾ. ಪಂ.ಗಳಿಗೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 3:33 IST
Last Updated 22 ಡಿಸೆಂಬರ್ 2020, 3:33 IST
ಶಿಡ್ಲಘಟ್ಟ ತಾಲ್ಲೂಕಿನ ಸದ್ದಹಳ್ಳಿಯಲ್ಲಿ ಮುಂಜಾನೆಯ ಚಳಿಯನ್ನು ಲೆಕ್ಕಿಸದೆ ಸಾಲಾಗಿ ನಿಂತು  ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತ ಚಲಾಯಿಸಿದ ಗ್ರಾಮಸ್ಥರು
ಶಿಡ್ಲಘಟ್ಟ ತಾಲ್ಲೂಕಿನ ಸದ್ದಹಳ್ಳಿಯಲ್ಲಿ ಮುಂಜಾನೆಯ ಚಳಿಯನ್ನು ಲೆಕ್ಕಿಸದೆ ಸಾಲಾಗಿ ನಿಂತು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತ ಚಲಾಯಿಸಿದ ಗ್ರಾಮಸ್ಥರು   

ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನ ಚಿಂತಾಮಣಿ, ಬಾಗೇಪಲ್ಲಿ ಮತ್ತು ಶಿಡ್ಲಘಟ್ಟ ತಾಲ್ಲೂಕುಗಳ 84 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆ ಆರಂಭಗೊಂಡಿತು.

ಮತದಾರರು ಬೆಳಿಗ್ಗೆಯಿಂದಲೇ ಉತ್ಸಾಹದಿಂದ ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಅಭ್ಯರ್ಥಿಗಳು ಮತದಾರರ ಮನವೊಲಿಸಲು ತೆರೆಮರೆಯಲ್ಲಿ ಕೊನೆ ಕ್ಷಣದ ಪ್ರಯತ್ನ ಮುಂದುವರಿಸಿದ್ದಾರೆ.

ಮತದಾನಕ್ಕಾಗಿ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಒಟ್ಟು 1,288 ಸ್ಥಾನಗಳಿಗೆ 3,207 ಉಮೇದುವಾರರು ಸ್ಪರ್ಧಾ ಕಣದಲ್ಲಿ ಸೆಣಸುತ್ತಿದ್ದಾರೆ. ಬೆಳಿಗ್ಗೆ 7 ರಿಂದ ಮತದಾನ ಆರಂಭಗೊಂಡಿದ್ದು, ಸಂಜೆ 5ರ ವರೆಗೆ ನಡೆಯಲಿದೆ.

ADVERTISEMENT

ಮತದಾನಕ್ಕಾಗಿ ಮೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ 74 ಅತಿಸೂಕ್ಷ್ಮ, 112 ಸೂಕ್ಷ್ಮ, 562 ಸಾಮಾನ್ಯ ಸೇರಿದಂತೆ ಒಟ್ಟು 748 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ಚಿಂತಾಮಣಿ ತಾಲ್ಲೂಕಿನಲ್ಲಿ 416, ಶಿಡ್ಲಘಟ್ಟ ತಾಲ್ಲೂಕಿನಲ್ಲಿ 278 ಮತ್ತು ಬಾಗೇಪಲ್ಲಿ ತಾಲ್ಲೂಕಿನಲ್ಲಿ 314 ಪೊಲೀಸ್‌ ಮತ್ತು ಗೃಹರಕ್ಷಕ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಜತೆಗೆ, ವಿಶೇಷ ತಂಡಗಳನ್ನು ರಚಿಸಲಾಗಿದೆ.

ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಚುನಾವಣೆ ನಡೆಯುತ್ತಿರುವ ಪ್ರತಿ ತಾಲ್ಲೂಕಿನಲ್ಲಿ ತಲಾ ಮೂರರಂತೆ ಒಂಬತ್ತು ಎಂಸಿಸಿ ತಂಡಗಳನ್ನು ರಚಿಸಲಾಗಿದೆ. ಜತೆಗೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ 11, ಶಿಡ್ಲಘಟ್ಟ ತಾಲ್ಲೂಕಿನಲ್ಲಿ 7 ಮತ್ತು ಚಿಂತಾಮಣಿ ತಾಲ್ಲೂಕಿನಲ್ಲಿ 18 ಸೇರಿದಂತೆ ಒಟ್ಟು 36 ಸೆಕ್ಟರ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಮೊದಲ ಹಂತದಲ್ಲಿ ಚುನಾವಣೆ ನಡೆಯುವ ತಾಲ್ಲೂಕುಗಳ ಪೈಕಿ ಚಿಂತಾಮಣಿಯಲ್ಲಿ ಅತಿಹೆಚ್ಚು (35) ಗ್ರಾಮ ಪಂಚಾಯಿತಿಗಳಿವೆ. ಆ ತಾಲ್ಲೂಕಿನ 572 ಸ್ಥಾನಗಳ ಅಧಿಕಾರ ಹಿಡಿಯಲು 1,320 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಬಾಗೇಪಲ್ಲಿ ತಾಲ್ಲೂಕಿನಲ್ಲಿ 25 ಗ್ರಾಮ ಪಂಚಾಯಿತಿಗಳ 402 ಸ್ಥಾನಗಳಿಗೆ 1,038 ಜನರು ಸ್ಪರ್ಧಿಸಿದ್ದಾರೆ. ಶಿಡ್ಲಘಟ್ಟದ 24 ಗ್ರಾಮ ಪಂಚಾಯಿತಿಗಳಲ್ಲಿರುವ 572 ಸ್ಥಾನಗಳಿಗಾಗಿ 849 ಅಭ್ಯರ್ಥಿಗಳು ಕಣದಲ್ಲಿ ಸೆಣಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.