ADVERTISEMENT

ಸಮಯಕ್ಕೆ ಬಾರದ ಪಂಚಾಯಿತಿ ಸಿಬ್ಬಂದಿ

ಪಂಚತಂತ್ರ 2.0 ತಂತ್ರಾಂಶ; ಪಾಲನೆಯಾಗದ ನಿಯಮ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 5:40 IST
Last Updated 14 ಸೆಪ್ಟೆಂಬರ್ 2025, 5:40 IST

ಚೇಳೂರು: ಗ್ರಾಮ ಪಂಚಾಯಿತಿ ಕಚೇರಿಗಳ ಕೆಲಸಗಳು ಹಾಗೂ ಸಿಬ್ಬಂದಿ ಹಾಜರಾತಿ ಸುಧಾರಿಸಲು ಸರ್ಕಾರವು ಪಂಚತಂತ್ರ 2.0 ತಂತ್ರಾಂಶವನ್ನು ಕಡ್ಡಾಯಗೊಳಿಸಿದೆ. ಇದರ ಮೂಲಕ ಎಲ್ಲ ಸಿಬ್ಬಂದಿ ಬಯೋಮೆಟ್ರಿಕ್ ಹಾಜರಾತಿ ನೀಡುವುದು ಅಗತ್ಯ.

ಆದರೆ, ಚೇಳೂರು ತಾಲೂಕಿನಾದ್ಯಂತ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಈ ನಿಯಮಗಳು ಸರಿಯಾಗಿ ಪಾಲನೆ ಆಗುತ್ತಿಲ್ಲ ಎಂಬ ಆರೋಪಗಳೂ ಕೇಳಿ ಬರುತ್ತಿವೆ.

ಸರ್ಕಾರಿ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದೆ ತಡವಾಗಿ ಬರುವುದು ಅಥವಾ ಮುಂಚಿತವಾಗಿ ಹೊರಡುವುದು ಸಾಮಾನ್ಯವಾಗಿದೆ. ಈ ಕುರಿತು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳಿವೆ.

ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿಗಳಿಗೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದಾಗ, ಕಚೇರಿಗಳ ಬಾಗಿಲು ಸಮಯಕ್ಕೆ ಸರಿಯಾಗಿ ತೆರೆದಿದ್ದರೂ ಹಲವು ಸಿಬ್ಬಂದಿ 11 ಗಂಟೆಯ ನಂತರ ಕಚೇರಿಗೆ ಬಂದಿದ್ದು, ಸಂಜೆ 5:30 ಕ್ಕೆ ಕಚೇರಿಯಿಂದ ಹೊರಡಬೇಕಿದ್ದವರು 4ರ ವೇಳೆಗೆ ಕಚೇರಿಯಿಂದ ಕಾಲ್ಕಿತ್ತಿದ್ದು ಕಂಡು ಬಂದಿತು.

ಈ ರೀತಿಯ ಅಶಿಸ್ತು ಗ್ರಾಮಸ್ಥರ ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜನರು ತಮ್ಮ ಕೆಲಸಗಳಿಗಾಗಿ ದಿನವಿಡೀ ಅಧಿಕಾರಿಗಳ ದರ್ಶನಕ್ಕಾಗಿ ಕಾಯಬೇಕಾದ ಸ್ಥಿತಿ ಇದೆ.

ಪಂಚತಂತ್ರ 2.0 ತಂತ್ರಾಂಶದಲ್ಲಿ ಹಾಜರಾತಿಯನ್ನು ನಮೂದಿಸುವಾಗ, ತಡವಾಗಿ ಬಂದ ಕಾರಣ ಅಥವಾ ಮುಂಚಿತವಾಗಿ ಹೋದ ಕಾರಣವನ್ನು ದಾಖಲಿಸಬೇಕು.
ಆದರೆ, ಅನೇಕ ಅಧಿಕಾರಿಗಳು ಈ ಅಂಕಣವನ್ನು ಖಾಲಿ ಬಿಡುತ್ತಾರೆ ಅಥವಾ ಹಾಜರಾತಿ ನಮೂದಿಸುವುದನ್ನೇ ತಪ್ಪಿಸುತ್ತಿದ್ದಾರೆ.  

‘ಸರ್ಕಾರಿ ಕಚೇರಿಗಳಲ್ಲಿ ಕೆಲಸವನ್ನು ವೇಗಗೊಳಿಸಲು ಮೇಲಧಿಕಾರಿಗಳು ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ತಡವಾಗಿ ಬರುವ ಮತ್ತು ಮುಂಚಿತವಾಗಿ ಹೋಗುವ ಸಿಬ್ಬಂದಿ ವಿರುದ್ಧ ಯಾವುದೇ ಶಿಸ್ತು ಕ್ರಮ ಜರುಗಿಸುತ್ತಿಲ್ಲ. ಇಂತಹ ವರ್ತನೆಯು ಗ್ರಾಮೀಣ ಪ್ರದೇಶಗಳಲ್ಲಿನ ಆಡಳಿತ ವ್ಯವಸ್ಥೆ ಹದಗೆಡಿಸುತ್ತದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ತಿಳಿಸಿದರು.

‘ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರು ಸಾರ್ವಜನಿಕರ ಸೇವಕರು. ಆದರೆ ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದಿರುವುದು ಸಾರ್ವಜನಿಕ ಸೇವಾ ವ್ಯವಸ್ಥೆಗೆ ಧಕ್ಕೆ ತರುತ್ತದೆ. ಇಂತಹ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು. ಈ ಸಮಸ್ಯೆ ಕೇವಲ ಚೇಳೂರು ತಾಲೂಕಿಗೆ ಸೀಮಿತವಾಗಿಲ್ಲ. ಇಡೀ ರಾಜ್ಯದ ಅನೇಕ ಪಂಚಾಯಿತಿಗಳಲ್ಲಿ ಇದೇ ರೀತಿ ಇದೆ’ ಎಂದರು.

ಸರ್ಕಾರ ಮತ್ತು ಮೇಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಪಂಚತಂತ್ರ 2.0 ತಂತ್ರಾಂಶದಲ್ಲಿ ನಮೂದಿಸಿದ ಹಾಜರಾತಿಯನ್ನು ನಿಯಮಿತವಾಗಿ ಪರಿಶೀಲಿಸಬೇಕು. ಸ್ಪಷ್ಟ ಕಾರಣವಿಲ್ಲದೆ ತಡವಾಗಿ ಬರುವುದು ಅಥವಾ ಮುಂಚಿತವಾಗಿ ಹೊರಡುವುದು ಕಂಡುಬಂದರೆ, ಅಂತಹ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.